
ಲಂಡನ್(ಸೆ.23): ಚೀನಾ-ಭಾರತ ನಡುವಿನ ತ್ವೇಷಮಯ ಸ್ಥಿತಿ ತಣಿಯುವ ಸಾಧ್ಯತೆ ಕಡಿಮೆ ಎಂಬ ಸೂಚನೆ ಲಭಿಸುತ್ತಿದ್ದಂತೆಯೇ ಭಾರತೀಯ ಸೇನೆಯು ಸಂಘರ್ಷದ ಮೂಲ ತಾಣಗಳಲ್ಲಿ ಒಂದಾದ ಚುಶೂಲ್ ಸನಿಹದ ಹಿಮಾಲಯದ ‘ಬ್ಲ್ಯಾಕ್ ಟಾಪ್’ ಬೆಟ್ಟದಲ್ಲಿ ಬೀಡುಬಿಟ್ಟಿದೆ. ಈಗ ಸೇನೆಗೆ ಚುಶೂಲ್ ಗ್ರಾಮಸ್ಥರು ಚಳಿಗಾಲದ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಆರಂಭಿಸಿದ್ದಾರೆ.
ಬ್ಲ್ಯಾಕ್ ಟಾಪ್‌ಗೆ ಹೋಗುವ ಮಾರ್ಗ ತುಂಬಾ ದುರ್ಗಮವಾಗಿದೆ. ಕಷ್ಟಪಟ್ಟಾದರೂ ಸರಿ, ಭಾರತೀಯ ಸೇನೆಗೆ ನೆರವಾಗಬೇಕು ಎಂಬ ಉದ್ದೇಶದಿಂದ ಚುಶೂಲ್ ಗ್ರಾಮಸ್ಥರು ಬೆಟ್ಟವನ್ನೇರಿ ಅಗತ್ಯ ವಸ್ತು ಪೂರೈಸುತ್ತಿದ್ದಾರೆ. ಕ್ಯಾನ್ಗಳಲ್ಲಿ ತುಂಬಿದ ಇಂಧನ, ಬಿದಿರು ಬೆತ್ತಗಳು, ಉಣ್ಣೆ ಚೀಲ, ಅಕ್ಕಿ ಚೀಲಗಳನ್ನು ಸರಬರಾಜು ಮಾಡುತ್ತಿದ್ದಾರೆ.
‘ಇನ್ನೇನು ಗಡಿಯಲ್ಲಿ ಚಳಿಗಾಲ ಆರಂಭವಾಗುತ್ತದೆ. ಇಲ್ಲಿನ ಚಳಿಗಾಲ ಅಂತಿಂಥದ್ದಲ್ಲ. -40 ಡಿಗ್ರಿ ರಣಭೀಕರ ಚಳಿ ಇರುತ್ತದೆ. ಈ ಹಂತದಲ್ಲಿ ಭಾರತದ ಸೇನೆಗೆ ಅಗತ್ಯವಸ್ತುಗಳ ಕೊರತೆ ಆಗಬಾರದು. ಹೀಗಾದರೆ ಸೇನೆಗೆ ಅಲ್ಲಿ ಇರಲು ಕಷ್ಟವಾಗುತ್ತದೆ. ಇದೇ ಸಂದರ್ಭವನ್ನು ಬಳಸಿಕೊಂಡು ಚೀನಾ ಸೇನೆ ಚುಶೂಲ್ ಸಮೀಪದ ಬೆಟ್ಟಗಳನ್ನು ತನ್ನದಾಗಿಸಿಕೊಳ್ಳಬಹುದು’ ಎಂಬ ಆತಂಕ ಗ್ರಾಮಸ್ಥರದ್ದು. ಈ ಕಾರಣಕ್ಕೇ ನಿತ್ಯ ಸುಮಾರು 100 ಪುರುಷರು, ಮಹಿಳೆಯರು, ಬಾಲಕರು ತಮ್ಮ ಬೆನ್ನ ಮೇಲೆ ಈ ಸಾಮಾನುಗಳನ್ನು ಹೊತ್ತು ಬ್ಲ್ಯಾಕ್ ಟಾಪ್‌ಗೆ ತೆರಳುತ್ತಿದ್ದಾರೆ.
‘ಭಾರತದ ಸೇನೆ ಸುರಕ್ಷಿತವಾಗಿರಬೇಕು. ಅವರಿಗೆ ಚಳಿಗಾಲದಲ್ಲಿ ತೊಂದರೆ ಆಗಬಾರದು. ಹೀಗಾಗಿ ಸರಿಯಾದ ರಸ್ತೆ ಇಲ್ಲದಿದ್ದರೂ ಕಷ್ಟಪಟ್ಟು ಇಡೀ ದಿನ ಬೆಟ್ಟವೇರಿ ಪೂರೈಕೆ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದು ಚುಶೂಲ್ನ 28 ವರ್ಷದ ಗ್ರಾಮಸ್ಥನೊಬ್ಬ ಹೇಳಿದ ಎಂದು ಬ್ರಿಟನ್ನ ‘ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.
ಚುಶೂಲ್ನಲ್ಲಿ 150 ಮನೆಗಳಿದ್ದು, ಗಡಿಯಲ್ಲಿನ ಕಟ್ಟಕಡೆಯ ಗ್ರಾಮವಾಗಿದೆ. ಇತ್ತೀಚೆಗೆ ಚೀನಾ ಇಲ್ಲಿ ಹೊಸದಾಗಿ ತಗಾದೆ ತೆಗೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈ ನಡುವೆ, ‘ಗಡಿಯಲ್ಲಿ ಶಾಂತಿ ಸ್ಥಾಪನೆ ಅನುಮಾನವಾಗಿದ್ದು, ಚಳಿಗಾಲದ ಸಂದರ್ಭದಲ್ಲಿ ಎರಡೂ ಸೇನೆಗಳು ಗಡಿಯಲ್ಲೇ ಬೀಡು ಬಿಡುವುದು ನಿಶ್ಚಿತ’ ಎಂದು ಭದ್ರತಾ ತಜ್ಞ ಮನೋಜ್ ಜೋಶಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ