
ನವದೆಹಲಿ(ಮೇ.20) ಥಾಯ್ಲೆಂಡ್, ಚೀನಾ, ಸಿಂಗಾಪುರ, ಹಾಂಕಾಂಗ್ ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ವಿದೇಶದಲ್ಲಿ ಜೆಎನ್.1 ರೂಪಾಂತರ ತಳಿ ಕಾಣಿಸಿಕೊಂಡು ಆತಂಕ ಹೆಚ್ಚಿಸಿದೆ. ಕೋವಿಡ್ ಆತಂಕ ಹೆಚ್ಚಾಗುತ್ತಿದ್ದಂತೆ ಭಾರತದಲ್ಲೂ ಕೋವಿಡ್ ಪ್ರಕರಣ ಏರಿಕೆಯಾಗಿದೆ. ಇದೀಗ ಭಾರತದಲ್ಲಿ 257 ಕೋವಿಡ್ ಪ್ರಕರಣ ದಾಖಲಾಗಿದೆ. ಇತ್ತ ಮುಂಬೈನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಭಾರತದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ತುರ್ತು ವೈದ್ಯಕೀಯ ಪರಿಹಾರ (EMR) ವಿಭಾಗ, ವಿಪತ್ತು ನಿರ್ವಹಣಾ ಕೋಶ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳ ತಜ್ಞರೊಂದಿಗೆ ಪರಿಶೀಲನಾ ಸಭೆ ಕರೆಯಲಾಗಿದೆ.
ಸಕ್ರೀಯ ಪ್ರಕರಣ 257, ಮುಂಬೈನಲ್ಲಿ 2 ಸಾವು
ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣ ಸಂಖ್ಯೆ 257ಕ್ಕೆ ಏರಿಕೆಯಾಗಿದೆ. ಇನ್ನು ಮುಂಬೈನಲ್ಲಿ ಕೋವಿಡ್‌ನಿಂದ ಆಸ್ಪತ್ರೆ ದಾಖಲಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆದರೆ ಈ ಸಾವು ಕೋವಿಡ್‌ನಿಂದ ಆಗಿಲ್ಲ. ಇಬ್ಬರಿಗೂ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿತ್ತು. ಇದರ ಜೊತೆಗೆ ಕೋವಿಡ್ ಕೂಡ ಅಂಟಿಕೊಂಡಿತ್ತು. ಹೀಗಾಗಿ ಚಿಕಿತ್ಸೆ ಫಲಿಸಿಲ್ಲ. ಮುಂಬೈ, ಕೇರಳದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಮುಂಬೈ ಮಹಾನಗರ ಪಾಲಿಕೆ (BMC) ಪ್ರಕಾರ, ನಗರದಲ್ಲಿ 53 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಜನವರಿಯಿಂದ ಏಪ್ರಿಲ್ ವರೆಗೆ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು, ಆದರೆ ಮೇ ತಿಂಗಳಲ್ಲಿ ಹಠಾತ್ತನೆ ಕೆಲವು ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಆಡಳಿತವು ಎಚ್ಚೆತ್ತುಕೊಂಡಿದೆ. BMC ಜನರಿಗೆ ಎಚ್ಚರಿಕೆಯಿಂದಿರಲು ಸಲಹೆ ನೀಡಿದೆ, ಆದರೆ ಜನರು ಭಯಪಡುವ ಅಗತ್ಯವಿಲ್ಲ ಎಂದಿದೆ.
ಭಾರತದಲ್ಲಿ ಮೈಲ್ಡ್ ಕೋವಿಡ್ ಕೇಸ್ ದಾಖಲು
ಭಾರತದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕಣ ಮೈಲ್ಡ್ ಆಗಿದೆ. ಭಾರತದಲ್ಲಿ ಪ್ರಸ್ತುತ ಕೋವಿಡ್ -19 ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಜ್ಞರ ಪರಿಶೀಲನಾ ಸಭೆ ಹೇಳಿದೆ. ಭಾರದಲ್ಲಿ ದಾಖಲಾಗಿರುವ ಕೋವಿಡ್ ಪ್ರಕರಣಗಳಲ್ಲಿ ಆಸ್ಪತ್ರೆ ದಾಖಲಾಗುವ ಸಾಧ್ಯತೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಹೊಸ ಕೊರೊನಾ ರೂಪಾಂತರಿ ಎಷ್ಟು ಅಪಾಯಕಾರಿ?
ಏಷ್ಯಾದ ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಏರಿಕೆಗೆ ಹೊಸ ರೂಪಾಂತರಿ JN.1 ಕಾರಣ ಎಂದು ಹೇಳಲಾಗುತ್ತಿದೆ. ಈ ರೂಪಾಂತರಿಯು ಒಮಿಕ್ರಾನ್‌ನ BA.2.86 ಆವೃತ್ತಿಯಿಂದ ವಿಕಸನಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ರೂಪಾಂತರಿ' ಎಂದು ಘೋಷಿಸಿದೆ. ಇದರಲ್ಲಿ ಸುಮಾರು 30 ರೂಪಾಂತರಗಳಿವೆ. ತಜ್ಞರು ಈ ರೂಪಾಂತರಿಯು ತುಂಬಾ ಗಂಭೀರವಾಗಿಲ್ಲ ಎಂದು ಹೇಳುತ್ತಾರೆ, ಆದರೆ ಇದು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.
ಈ ಹೊಸ ರೂಪಾಂತರಿಯ ಲಕ್ಷಣಗಳೇನು?
JN.1 ನ ಲಕ್ಷಣಗಳು ಹಳೆಯ ಕೋವಿಡ್ ರೂಪಾಂತರಿಗಳಂತೆಯೇ ಇವೆ - ಗಂಟಲು ನೋವು, ಜ್ವರ, ಮೂಗು ಸೋರುವುದು ಅಥವಾ ಮುಚ್ಚಿಹೋಗುವುದು, ಒಣ ಕೆಮ್ಮು, ಆಯಾಸ ಮತ್ತು ತಲೆನೋವು. ಕೆಲವು ಜನರಿಗೆ ರುಚಿ ಅಥವಾ ವಾಸನೆಯ ಅರಿವು ಕೂಡ ಇಲ್ಲದಿರಬಹುದು. ಲಕ್ಷಣಗಳು ಸಾಮಾನ್ಯವಾಗಿ ಕೆಲವು ದಿನಗಳಿಂದ ಒಂದು ವಾರದವರೆಗೆ ಇರುತ್ತವೆ. ಆದ್ದರಿಂದ, ಸೌಮ್ಯ ಜ್ವರ ಅಥವಾ ಶೀತ-ಕೆಮ್ಮನ್ನು ಕೂಡ ಲಘುವಾಗಿ ಪರಿಗಣಿಸಬಾರದು ಮತ್ತು ಪರೀಕ್ಷೆ ಮಾಡಿಸಿಕೊಳ್ಳಬೇಕು. ವೃದ್ಧರು, ಮಕ್ಕಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಸರ್ಕಾರ ಸಲಹೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ