
ನವದೆಹಲಿ: ಯಾವುದೋ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕಥೆಯಂತೆ ಕಾಣುವ ಈ ಘಟನೆ ನಡೆದಿರುವುದು ದೇಶದ ರಾಜಧಾನಿ ದೆಹಲಿಯ ಸಂಗಮ್ ವಿಹಾರ್‌ನಲ್ಲಿ. 22 ವರ್ಷಗಳ ಕಾಲ ಜೊತೆಗಿದ್ದ ಪತ್ನಿ, ತನ್ನ ಕಾಮದ ಹಸಿವು ಮತ್ತು ಹಣದ ಆಸೆಗಾಗಿ ಪತಿಯನ್ನೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ಅದಕ್ಕೆ 'ದರೋಡೆ'ಯ ಬಣ್ಣ ಬಳಿಯಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ!
ಆಗಸ್ಟ್ 10ರ ಶನಿವಾರ ಬೆಳಗ್ಗೆ ಸಂಗಮ್ ವಿಹಾರ್‌ನ ರತಿಯಾ ಮಾರ್ಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ 55 ವರ್ಷದ ಮುನ್ನಾ ಲಾಲ್ ಎಂಬುವವರ ಶವ ಪತ್ತೆಯಾಗಿತ್ತು. ಮುನ್ನಾ ಲಾಲ್ ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಆಗಿದ್ದರು. ಅವರ ಮೈಮೇಲೆ ಹಲವು ಗಾಯದ ಗುರುತುಗಳಿದ್ದವು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಪತ್ನಿ ನಾಜಿಯಾ (ಅಲಿಯಾಸ್ ಮಂಜು) ಹೇಳಿದ ಕಥೆಯೇ ಬೇರೆಯಾಗಿತ್ತು!
ಪೊಲೀಸರ ಮುಂದೆ ಕಣ್ಣೀರು ಹಾಕುತ್ತಾ ನಾಜಿಯಾ ಹೀಗೆ ಹೇಳಿದ್ದಳು.. ರಾತ್ರಿ ಮನೆಗೆ ಕಳ್ಳರು ನುಗ್ಗಿದ್ದರು. ನನ್ನ ಪತಿ ಅವರನ್ನು ತಡೆಯಲು ಹೋದಾಗ ಅವರ ಮೇಲೆ ಹಲ್ಲೆ ಮಾಡಿ ಕೊಂದು ಮನೆಯಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ. ನಾನು ಗಾಢ ನಿದ್ದೆಯಲ್ಲಿದ್ದ ಕಾರಣ ನನಗೆ ಗೊತ್ತೇ ಆಗಲಿಲ್ಲ. ಆದರೆ ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರಿಗೆ ಯಾವುದೋ ಸಂಶಯ ಶುರುವಾಗಿತ್ತು. ಯಾಕೆಂದರೆ ವಸ್ತುಗಳು ಹರಡಿಕೊಂಡಿದ್ದ ರೀತಿ ಸಹಜ ದರೋಡೆಯಂತೆ ಕಾಣುತ್ತಿರಲಿಲ್ಲ!
ಪೊಲೀಸರು ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಿಗೆ ಬಂತು. ಮಧ್ಯರಾತ್ರಿ 1:45ಕ್ಕೆ ಒಬ್ಬ ಮುಸುಕುಧಾರಿ ಮನೆಗೆ ಬಂದು 3:15ಕ್ಕೆ ಹೊರಹೋಗಿರುವುದು ಕಂಡುಬಂತು. ಪೊಲೀಸರು ನಾಜಿಯಾಳನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕಿರಾತಕಿ ಮಾಡಿದ ಕೃತ್ಯದ ಒಂದೊಂದೇ ಎಳೆಗಳು ಬಿಚ್ಚಿಕೊಂಡವು.
ನಾಜಿಯಾಗೆ ತನ್ನ ಮನೆಯ ಹತ್ತಿರವೇ ಕೆಲಸ ಮಾಡುತ್ತಿದ್ದ 20 ವರ್ಷದ ಮೆಕ್ಯಾನಿಕ್ ಚಮನ್ ಜೊತೆ ಅಕ್ರಮ ಸಂಬಂಧವಿತ್ತು. ಪತಿ ಸರಿಯಾಗಿ ಹಣ ನೀಡುತ್ತಿಲ್ಲ ಮತ್ತು ಪ್ರಿಯಕರನ ಜೊತೆ ಬದುಕಬೇಕೆಂಬ ಹಂಬಲದಿಂದ ಪತಿಯನ್ನೇ ಮುಗಿಸಲು ಪ್ಲಾನ್ ಮಾಡಿದ್ದಳು. ಮುನ್ನಾ ಲಾಲ್ ಅವರ ಮಗ ಕನ್ವರ್ ಯಾತ್ರೆಗೆ ತೆರಳಿದ್ದ ದಿನವನ್ನೇ ಕೊಲೆಗೆ ಆರಿಸಿಕೊಳ್ಳಲಾಗಿತ್ತು. ಅಂದು ರಾತ್ರಿ ನೀರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಪತಿಗೆ ಕುಡಿಸಿದ ನಾಜಿಯಾ, ಪತಿ ಮಂಪರಿನಲ್ಲಿದ್ದಾಗ ಪ್ರಿಯಕರ ಚಮನ್ ಮತ್ತು ಅವನ ಗೆಳೆಯ ಕಿಶನ್‌ನನ್ನು ಮನೆಗೆ ಕರೆಸಿಕೊಂಡಿದ್ದಳು.
ಮೊದಲಿಗೆ ಹಗ್ಗದಿಂದ ಕತ್ತು ಹಿಸುಕಿದ ಪಾಪಿಗಳು, ನಂತರ ಮರದ ಕೋಲಿನಿಂದ ಮನಬಂದಂತೆ ಹೊಡೆದಿದ್ದಾರೆ. ಸಾವು ಖಚಿತಪಡಿಸಿಕೊಳ್ಳಲು ಅಂತಿಮವಾಗಿ ಪತಿಗೆ ಕರೆಂಟ್ ಶಾಕ್ ನೀಡಿದ್ದಾರೆ! ಕೊಲೆಯ ನಂತರ ಮನೆಯ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಕಳ್ಳತನದ ನಾಟಕವಾಡಿದ್ದರು. ನಂತರ ಶವವನ್ನು ರಸ್ತೆಗೆ ತಂದು ಹಾಕಿದ್ದರು.
ಪತ್ನಿ ನಾಜಿಯಾ ಈ ಕೊಲೆಗಾಗಿ ಪ್ರಿಯಕರನಿಗೆ 5 ಲಕ್ಷ ರೂಪಾಯಿ ಸುಪಾರಿ ನೀಡಿದ್ದಳು. ಆದರೆ ಅಂದು ಆಕೆ ನೀಡಿದ್ದು ಕೇವಲ 20 ಸಾವಿರ ರೂಪಾಯಿ ಮಾತ್ರ! ಸಿಸಿಟಿವಿ ದೃಶ್ಯಾವಳಿ ಮತ್ತು ನಾಜಿಯಾ ನೀಡಿದ ಹೇಳಿಕೆಗಳಲ್ಲಿದ್ದ ವ್ಯತ್ಯಾಸಗಳು ಪೊಲೀಸರಿಗೆ ಸುಳಿವು ನೀಡಿದವು. ಕಟುಕ ಪತ್ನಿ, ಅವಳ ಪ್ರಿಯಕರ ಚಮನ್ ಮತ್ತು ಸಹಚರ ಕಿಶನ್ ಎಂಬುವವರನ್ನು ಈಗ ಪೊಲೀಸರು ಬಂಧಿಸಿದ್ದಾರೆ.
22 ವರ್ಷಗಳ ದಾಂಪತ್ಯ, ಮೂವರು ಮಕ್ಕಳು ಇದ್ದರೂ ಸಹ ಅಕ್ರಮ ಸಂಬಂಧಕ್ಕಾಗಿ ಪತಿಯನ್ನೇ ಕರೆಂಟ್ ಶಾಕ್ ಕೊಟ್ಟು ಕೊಂದ ಪತ್ನಿಯ ಕ್ರೌರ್ಯ ಕಂಡು ದೆಹಲಿ ಜನತೆ ಬೆಚ್ಚಿಬಿದ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ