ಅಕ್ಷಯಾ ಗುರಿ ತಲುಪುತ್ತಿದ್ದಂತೆ ಕೋಚ್ ಕಣ್ಣಲ್ಲಿ ನೀರು ತುಂಬಿತ್ತು! ಚಿನ್ನದ ಪದಕ ಗೆದ್ದ ಬಾಲಕಿಯ ಕಣ್ಣೀರ ಕಥೆ

Published : Oct 28, 2026, 10:29 AM IST
poor girl Akshaya wins gold

ಸಾರಾಂಶ

ಕೇರಳದ ಶಾಲಾ ಕ್ರೀಡಾಕೂಟದಲ್ಲಿ ಬಡತನವನ್ನೇ ಸ್ಫೂರ್ತಿಯಾಗಿಸಿಕೊಂಡು ಅಕ್ಷಯಾ ಎಂಬ ಬಾಲಕಿ 3000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ. ಅನಾರೋಗ್ಯ ಪೀಡಿತ ಕುಟುಂಬದ ಏಕೈಕ ಭರವಸೆಯಾಗಿರುವ ಈಕೆಯ ಕಥೆ ನಿಜಕ್ಕೂ ಕಣ್ಣೀರು ತರಿಸುತ್ತದೆ.

ಕೋಝಿಕ್ಕೋಡ್‌: ಕ್ರೀಡೆ ಅಥವಾ ಅಥ್ಲೆಟಿಕ್ಸ್ ನಲ್ಲಿ ಸಾಧಿಸಿದವರನ್ನ ಈ ಸಾಧನೆ ಹಿಂದಿನ ಸ್ಫೂರ್ತಿ ಯಾರು ಎಂದು ಕೇಳಿದಾಗ ಸಾಮಾನ್ಯವಾಗಿ ಕ್ರೀಡಾಪಟುಗಳ ಇತತರಿಂದ ಸ್ಫೂರ್ತಿ ಪಡೆದಿದ್ದಾಗಿ ಹೇಳ್ತಾರೆ. ಅವರಂತಾಗಬೇಕು, ಇವರಂತಾಗಬೇಕು ಎಂದು ಹೇಳ್ತಾರೆ. ಆದರೆ ಕೆಲವರ ಸಾಧನೆಗೆ ಅವರು ಅನುಭವಿಸಿದ ಬಡತನವೇ ಸ್ಫೂರ್ತಿಯಾಗಿರುತ್ತೆ. ಅಂಥ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಬಾಲಕಿಯೋರ್ವಳು ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಓಡಿ ಚಿನ್ನದ ಪದಕ ಗೆದ್ದಿದ್ದಾಳೆ. ಆ ಬಾಲಕಿ ಪಿಟಿ ಊಷಾ ಆಗಬೇಕೆಂದೋ, ಉಸೇನ್ ಬೋಲ್ಟ್ ರೀತಿ ಓಡಿ ಸಾಧಿಸಬೇಕೆಂದೋ ಸ್ಫೂರ್ತಿ ಪಡೆದು ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿಲ್ಲ, ಬದಲಾಗಿ ಆ ಬಾಲಕಿಯ ಸ್ಫೂರ್ತಿ ಬಡತನ!

ಇತ್ತೀಚೆಗೆ ಕೇರಳದ ಕೋಝಿಕ್ಕೋಡ್‌ನಲ್ಲಿ ರಾಜ್ಯಮಟ್ಟದ ಶಾಲಾ ಕ್ರೀಡಾಕೂಟ ನಡೆಯಿತು. ಇದರಲ್ಲಿ ಹಿರಿಯ ಬಾಲಕಿಯರ 3000 ಮೀಟರ್ ಓಟದಲ್ಲಿ ಪನಂಗಟ್ಟಿರಿ RPMHS ಶಾಲೆಯ ಜಿ. ಅಕ್ಷಯಾ ಭಾಗಿಯಾಗಿದ್ದಳು ಅಷ್ಟೇ ಅಲ್ಲ, ಚಿನ್ನದ ಪದಕ ಗೆದ್ದಿದ್ದಾಳೆ. ಆದರೆ ಈ ಓಟದ ಹಿಂದೆ ಆಕೆ ನಾಲ್ಕು ವರ್ಷಗಳಿಂದ ಕಂಡಿದ್ದ ಒಂದು ಕನಸಿದೆ. ಅದುವೇ ತನ್ನ ಕುಟುಂಬಕ್ಕೊಂದು ಸ್ವಂತ ಮನೆ ಕಟ್ಟಿಸಿಕೊಳ್ಳಬೇಕು ಎಂಬ ಆಸೆ!

ಅಕ್ಷಯಾ ಗುರಿ ತಲುಪುತ್ತಿದ್ದಂತೆ ಕೋಚ್ ಕಣ್ಣಲ್ಲಿ ನೀರು ತುಂಬಿತ್ತು!

ಅಕ್ಷಯಾ ಗುರಿ ಮುಟ್ಟುತ್ತಿದ್ದಂತೆ ಆ ಬಾಲಕಿಯ ಕೋಚ್ ಆಗಿದ್ದ ಬಿಜು ವಾಸುದೇವನ್ ಅವರು ಅಕ್ಷರಶಃ ಅತ್ತೇ ಬಿಟ್ಟರು. ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದವು. ಇತ್ತ ಗುರಿ ತಲುಪಿದ ಅಕ್ಷಯಾ ತನ್ನ ಶೂಗಳನ್ನು ಕಳಚಿದಳು. ಕಾರಣ ಆ ಶೂಗಳು ಕೂಡ ಆಕೆಯವಲ್ಲ! ತನ್ನದೇ ಶಾಲೆಯ ಬೇರೊಬ್ಬ ವಿದ್ಯಾರ್ಥಿಯ ಶೂಗಳವು. ಅಕ್ಷಯಾ ಓಟದಲ್ಲಿ ಭಾಗಿಯಾಗಿದ್ದಳು. ಆದರೆ ಆಕೆಯ ಬಳಿ ಒಂದು ಜೊತೆ ಶೂಗಳು ಕೂಡ ಇರಲಿಲ್ಲ. ಈಗಾಗಿ ಓಟದ ಸ್ಪರ್ಧೆಗಾಗಿ ತನ್ನದೇ ಶಾಲೆಯ ವಿದ್ಯಾರ್ಥಿನಿಯ ಶೂ ಪಡೆದಿದ್ದಳು. ಈಗ ಗುರಿಮುಟ್ಟಿ ಚಿನ್ನ ಗೆದ್ದಿದ್ದ ಬಾಲಕಿ, ತಕ್ಷಣ ಮಾಡಿದ ಕೆಲಸವೆಂದರೆ ವಿದ್ಯಾರ್ಥಿನಿಯ ಶೂಗಳನ್ನ ಹಿಂದಿರುಗಿಸಿದ್ದು. ಕಾಲಿನ ಗಾಯದ ನೋವು ಬಾಲಕಿಯ ಮುಖದಲ್ಲಿ ಕಾಣುತ್ತಿತ್ತು. ಆದರೂ ಗುರಿಮುಟ್ಟಿದಾಗ ಆ ನೋವು ಮರೆಮಾಚಿ ಅಕ್ಷಯಾ ನಗುತ್ತಿದ್ದಳು.

ಸರ್, ಓಟದ ಸ್ಪರ್ಧೆಯಲ್ಲಿ ನಾನು ಗೆದ್ದರೆ ಮನೆ ಸಿಗುತ್ತಾ..?

'ಸರ್, ನಾನು ಓಟದ ಸ್ಪರ್ಧೆಯಲ್ಲಿ ಗೆದ್ದರೆ ಮನೆ ಸಿಗುತ್ತಾ?.. ನಾಲ್ಕು ವರ್ಷದ ಹಿಂದೆ ಅಕ್ಷಯಾ ತರಬೇತಿಗೆ ಸೇರಿದಾಗ ಕೋಚ್‌ ಬಿಜು ವಾಸುದೇವನ್ ಅವರನ್ನು ಕೇಳಿದ್ದು ಹೀಗೆ! ನೋಡಿ ಅಕ್ಷಯಾ ಬಡತನ ಹೇಗಿತ್ತೆಂಬುದಕ್ಕೆ ಈ ಪ್ರಶ್ನೆ ಸಾಕು ಅನಿಸುತ್ತೆ. ಆದರೆ ಇಂದು ಅಕ್ಷಯಾ ಚಿನ್ನ ಗೆದ್ದಿದ್ದಾಳೆ. ಅಲ್ಲದೆ ಇದು ಅಕ್ಷಯಾ ಭಾಗವಹಿಸುತ್ತಿರುವ ಕೊನೆಯ ಶಾಲಾ ಕ್ರೀಡಾಕೂಟವಾಗಿದೆ. ಆಕೆ ಕೋಝಿಕ್ಕೋಡ್‌ನಲ್ಲಿ ಸ್ಪರ್ಧಿಸುತ್ತಿದ್ದರೆ, ಆಕೆಯ ತಾಯಿ ಸೌಮ್ಯಾ, ಹೃದಯದ ಕಾಯಿಲೆಯಿಂದ ಬಳಲುತ್ತಿರುವ ಅಕ್ಕ ಅರ್ಚನಾ ಪಲಕ್ಕಾಡ್‌ನ ಪನಂಗಟ್ಟಿರಿಯಲ್ಲಿರುವ ಗುಡಿಸಲಿನಲ್ಲಿದ್ದಾರೆ. ಮಗಳ ಕ್ರೀಡಾಕೂಟ ನೋಡಲು ತಾಯಿ ಬಂದಿಲ್ಲ. ಅಕ್ಕನಿಗೂ ಬರಲಾಗದು! ಆದರೆ ಒಂದೇ ಚಿಕ್ಕ ಕೋಣೆಯ ಪುಟ್ಟ ಗುಡಿಸಲಿನಲ್ಲಿ ಕುಳಿತ ಅಕ್ಷಯಾ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರು. ಅಮ್ಮ, ಅಕ್ಕ ಪ್ರಾರ್ಥನೆ ಫಲಿಸಿದೆ. ಅಕ್ಷಯಾ ಚಿನ್ನ ಗೆದ್ದಿದ್ದಾಳೆ. ಆದರೆ ಕ್ರೀಡಾಕೂಟದಲ್ಲಿ ಕೋಚ್ ಹೊರತಾಗಿ ಈ ಗೆಲುವು ಸಂಭ್ರಿಸಲು ತಾಯಿ ಇಲ್ಲ, ಅಕ್ಕ ಇಲ್ಲ..!

ಓಡುವುದು ಬೇಡ ಎಂದಿದ್ದ ಡಾಕ್ಟರು, ಆದರೂ ಓಡಿ ಬೆಳ್ಳಿ ಗೆದ್ದಿದ್ದಳು ಅಕ್ಷಯಾ

ಅಕ್ಷಯಾ ಒಂಭತ್ತನೇ ತರಗತಿ ಓದುವಾಗಲೇ ಓಡಬೇಕು, ಓಡುವುದರಿಂದ ಮನೆ ಸಿಗುತ್ತದೆಂಬ ಕಾರಣಕ್ಕೆ ತರಬೇತಿಗೆ ಸೇರಿದ್ದಳು. ಕಳೆದ ವರ್ಷ ರಾಜ್ಯ ಮಟ್ಟದ ಹವ್ಯಾಸಿ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 1500 ಮೀಟರ್ ಮತ್ತು 1000 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಳು. ಕಳೆದ ವರ್ಷ ರಾಜ್ಯಮಟ್ಟದ ಶಾಲಾ ಕ್ರೀಡಾಕೂಟದಲ್ಲೂ 3000 ಮೀಟರ್ ಓಟದಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಇತ್ತಾದರೂ ತರಬೇತಿ ವೇಳೆ ಕಾಲಿನ ಸ್ನಾಯುವಿಗೆ ಆದ ಗಾಯದಿಂದಾಗಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ವೈದ್ಯರು ಸೂಚನೆ ನೀಡಿದ್ದರು. ಆದರೂ ಅಕ್ಷಯಾ ಹಿಂದೆ ಸರಿಯಲಿಲ್ಲ, 'ಸರ್ ನಾನು ಓಡಲು ಪ್ರಯತ್ನಿಸುತ್ತೇನೆ. ಮೊದಲ ಸ್ಥಾನ ಪಡೆದರೆ ನಮಗೆ ಮನೆ ಸಿಗಬಹುದು' ಎಂದು ತರಬೇತುದಾರ ಬಿಜು ವಾಸುದೇವ ಅವರಿಗೆ ಪರಿಪರಿಯಾಗಿ ಬೇಡಿಕೊಂಡಿದ್ದಳು.

ಕೊನೆಗೂ ಕಾಲಿನ ನೋವಿನ ನಡುವೆಯೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ಅಷ್ಟೇ ಅಲ್ಲ ಆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಳು. ಅಂದು ಗುರಿ ತಲುಪಿದ ಬಳಿಕ ಕುಸಿದುಬಿದ್ದಿದ್ದಳು. ಚಿನ್ನದ ಪದಕ ಗೆಲ್ಲಬೇಕು, ಇದರಿಂದಲೇ ನಮಗೆ ಮನೆ ಸಿಗೋದು ಎಂಬುದು ಅಕ್ಷಯಾ ನಿರೀಕ್ಷೆಯಾಗಿದ್ದರಿಂದ ಮನೆಯ ಕನಸು ಮತ್ತೆ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿತ್ತು.

ಆದರೆ ಈ ಬಾರಿ ನಿರ್ಧಾರ ದೃಢವಾಗಿತ್ತು. ಎಷ್ಟೇ ನೋವಿದ್ದರೂ ಚಿನ್ನದ ಪದಕ ಗೆದ್ದೇ ಗೆಲ್ಲಬೇಕು ಎಂಬ ಸಂಕಲ್ಪ. ಕಾಲಿನ ನೋವಿನ ನಡುವೆ ವಿದ್ಯಾರ್ಥಿನಿಯ ಶೂಗಳನ್ನ ಪಡೆದು ಓಡಿದಳು ಚಿನ್ನದ ಪದಕ ಗೆದ್ದೇಬಿಟ್ಟಳು. ಈ ಬಾರಿ ಮಗಳು ಚಿನ್ನ ಗೆದ್ದಿದ್ದಾಳೆ ಎಂಬ ಸುದ್ದಿ ತಿಳಿದಿದ್ದೇ ತಡ ತಾಯಿ ಸೌಮ್ಯಾ ಸಂತಸ ನೋಡಬೇಕಿತ್ತು. 'ಮಗಳಿಗೆ ಎಲ್ಲರ ಅಶೀರ್ವಾದ ಇರಲಿ' ಎಂದು ಬೇಡಿಕೊಂಡಳು, ಮಗಳ ಸಾಧನೆಗೆ ಶುಭ ಹಾರೈಸಿದಳು.

ಬಡತನದಲ್ಲಿ ಬೆಂದಿದೆ ಅಕ್ಷಯಾ ಕುಟುಂಬ

ಅಕ್ಷಯಾ ತಾಯಿ ಸೌಮ್ಯಾ ಹಾಗಲಕಾಯಿ ಉತ್ಪನ್ನ ತಯಾರಿಸುವ ಘಟಕದಲ್ಲಿ ಕೆಲಸ ಮಾಡುತ್ತಾರೆ. ಆದರೆ ಚರ್ಮದ ಅಲರ್ಜಿಯಿಂದಾಗಿ ಕಳೆದೊಂದು ತಿಂಗಳಿನಿಂದ ಕೆಲಸ ಹೋಗಲಾಗುತ್ತಿಲ್ಲ. ಅಕ್ಷಯಾ ತಂದೆ ಗುರು ವಾಯುರಪ್ಪನ್ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಇನ್ನು ಅಕ್ಷಯಾ ಅಕ್ಕ ಅರ್ಚನಾ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಿರುವನಂತಪುರಂನ ಶ್ರೀ ಚಿತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೃದಯ ಕಸಿ ಮಾಡುವುದು ಮಾತ್ರ ಈಗ ಆಕೆಗೆ ಉಳಿದಿರುವ ಕೊನೆಯ ಆಯ್ಕೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಇದೆಲ್ಲ ಕುಟುಂಬಕ್ಕೆ ವೈದ್ಯಕೀಯ ವೆಚ್ಚ ಎಷ್ಟು ದುಬಾರಿಯಾಗುತ್ತದೆ ಎಂಬುದು ಗೊತ್ತಿರುವಂತದ್ದೆ. ಬಡತನ, ಜವಾಬ್ದಾರಿಯಿಂದಾಗಿ ಅರ್ಚನಾ ಹೆಚ್ಚು ಓದಲಾಗಲಿಲ್ಲ. ಇತ್ತ ಹೃದಯ ಕಾಯಿಲೆಯೂ ಬೆನ್ನಿಗೇರಿ ಕುಟುಂಬಕ್ಕೆ ಬೆಂಬಿಡದೆ ಕಾಡುತ್ತಿದೆ. ಇದೆಲ್ಲದರ ನಡುವೆಯೂ ಅಕ್ಷಯಾ ಓಡಿದ್ದಾಳೆ. ಚಿನ್ನ ಪದಕ ಗೆದ್ದಿದ್ದಾಳೆ. ಇನ್ನು ಅಕ್ಷಯಾಳ ತಮ್ಮ ಅಖಿಲ್ ಪನಂಗಟ್ಟಿರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನೂ ಕೂಡ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾನೆ.

ಅಕ್ಷಯಾ ಕುಟುಂಬಕ್ಕೆ ಸ್ವಂತ ಜಮೀನು ಇಲ್ಲ. ವಾಸಿಸುವ ಮನೆಯೂ ಇಲ್ಲ. ಈಗ ಗುಡಿಸಲು ಕಟ್ಟಿಕೊಂಡಿರುವ ಜಾಗ ಅಕ್ಷಯಾಳ ತಂದೆಯ ಅಣ್ಣನಿಗೆ ಸೇರಿದ್ದಾಗಿದೆ. ಮನೆ ನಿರ್ಮಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ ಲೈಫ್ ಮಿಷನ್ ವಸತಿ ಯೋಜನೆಯಡಿ ಅ್ಜಿ ಸಲ್ಲಿಸಿದರೂ ಈವರೆಗೆ ಅಕ್ಷಯಾ ಕುಟುಂಬಕ್ಕೆ ಮನೆ ಮಂಜೂರಾಗಿಲ್ಲ. ಒಂದು ಕಡೆ ಸೂರು ಇಲ್ಲದ ಕಡು ಬಡತನ, ಅಕ್ಕನ ಕಾಯಿಲೆ, ತಮ್ಮನ ಅನಾರೋಗ್ಯ, ತಾಯಿಯ ಚರ್ಮದ ಅಲರ್ಜಿ.. ಇವೆಲ್ಲವುಗಳ ನಡುವೆ ಉಳಿದಿರುವ ಒಂದು ಭರವಸೆ ಎಂದರೆ ಅಕ್ಷಯಾ.. ಕುಟುಂಬಕ್ಕಾಗಿ ಮಿಂಚಿನ ವೇಗದಲ್ಲಿ ಓಡಿ ಚಿನ್ನ ಗೆದ್ದದ್ದಾಳೆ. ಆಕೆಯ ಗೆಲುವಿನ ಸ್ಪೂರ್ತಿ ಬಡತನವೇ ಆಗಿದೆ.

ಇದೀಗ 3,000 ಮೀಟರ್ ಓಟದಲ್ಲಿ ಚಿನ್ನ ಗೆದ್ದಿರುವ ಅಕ್ಷಯಾ, ಇದೇ ಕ್ರೀಡಾಕೂಟದಲ್ಲಿ 1500 ಮೀಟರ್ ಓಟದಲ್ಲೂ ಸ್ಪರ್ಧಿಸಲಿದ್ದಾಳೆ. ಆಕೆಯ ಗೆಲುವು ಕುಟುಂಬದ ಬಹುದಿನಗಳ ಕನಸುಗಳು ನನಸಾಗಲಿ ಎಂದು ಹಾರೈಸೋಣ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಗಾಳಕೊಲ್ಲಿಯಲ್ಲೇ ಅತಿ ಹೆಚ್ಚು ಚಂಡಮಾರುತಗಳು ಸೃಷ್ಟಿಯಾಗೋದು ಯಾಕೆ? ಈ 2 ತಿಂಗಳಲ್ಲಿ ಭಾರೀ ಆರ್ಭಟ!
ಜಿಯೋ ದಾಖಲೆ ಐಪಿಒ ಸಂಭ್ರಮ; ನೀಲಿ ಬೆಳಕಲ್ಲಿ ಮಿಂದೆದ್ದ ಮುಖೇಶ್ ಅಂಬಾನಿಯ 'ಆಂಟಿಲಿಯಾ' ಬಂಗಲೆ!