
ಮುಂಬೈ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ, ಮಹಾರಾಷ್ಟ್ರ ಸರ್ಕಾರ 1ರಿಂದ 5ನೇ ತರಗತಿಯವರೆಗೆ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿಯನ್ನು 3ನೇ ಭಾಷೆಯಾಗಿ ಕಲಿಸಲಾಗುವುದು ಎಂದು ಆದೇಶ ಹೊರಡಿಸಿದೆ. ಆದರೆ ಪ್ರತಿ ತರಗತಿಯ 20 ವಿದ್ಯಾರ್ಥಿಗಳು ಹಿಂದಿ ಬದಲು ಬೇರೆ ಯಾವುದೇ ಭಾರತೀಯ ಭಾಷೆಯನ್ನು ಕಲಿಯಲು ಇಚ್ಛಿಸಿದರೆ ಅದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ.
ಶಾಲಾ ಶಿಕ್ಷಣ ಇಲಾಖೆ ಈ ಕುರಿತು ನಿರ್ಣಯ ಹೊರಡಿಸಿದ್ದು, ‘ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿ ಸಾಮಾನ್ಯವಾಗಿ ತೃತೀಯ ಭಾಷೆಯಾಗಿರುತ್ತದೆ. ಯಾವುದೇ ತರಗತಿಯ 20 ವಿದ್ಯಾರ್ಥಿಗಳು ಹಿಂದಿ ಬದಲು ಬೇರೆ ಭಾರತೀಯ ಭಾಷೆಯನ್ನು ಕಲಿಯಲು ಇಚ್ಛಿಸಿದರೆ, ಅವರಿಗೆ ಆ ನಿರ್ದಿಷ್ಟ ಭಾಷೆಗೆ ಶಿಕ್ಷಕರನ್ನು ನಿಯೋಜಿಸಲಾಗುವುದು ಅಥವಾ ಆನ್ಲೈನ್ ಮೂಲಕ ಕಲಿಸಲಾಗುವುದು’ ಎಂದು ತಿಳಿಸಿದೆ.
ಹಿಂಬಾಗಿಲಿನಿಂದ ಹಿಂದಿ ಹೇರಿಕೆ
ವಿಪಕ್ಷ ಕಿಡಿಸರ್ಕಾರದ ನಿರ್ಣಯದ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್, ‘ಇದು ಹಿಂದಿ ಹೇರಿಕೆಗೆ ಯೋಜಿತ ಸಂಚು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮರಾಠಿ ಜನರ ಎದೆಗೆ ಇರಿಯುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಸ್ವಾರ್ಥಪರ ರಾಜಕೀಯ ಹಿತಾಸಕ್ತಿಗಳಿಗಾಗಿ ಭಾಷಾ ವಿಭಜನೆಯನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸುವ ಸರ್ಕಾರದ ಗುಪ್ತ ಕಾರ್ಯಸೂಚಿಯನ್ನು ವಿಫಲಗೊಳಿಸುವಂತೆ ನಾನು ಶಾಲೆಗಳು, ಪೋಷಕರು ಮತ್ತು ನಾಗರಿಕರಿಗೆ ಮನವಿ ಮಾಡುತ್ತೇನೆ’ ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ
ಆದರೆ ಈ ಕ್ರಮವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮರ್ಥಿಸಿಕೊಂಡಿದ್ದು, ‘ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿಲ್ಲ. ತೃತೀಯ ಭಾಷೆಯಾಗಿ ಯಾವುದೇ ಭಾರತೀಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇಡೀ ದೇಶವೇ ತ್ರಿಭಾಷಾ ಸೂತ್ರವನ್ನು ಅನುಸರಿಸುತ್ತಿರುವಾಗ, ಮಹಾರಾಷ್ಟ್ರ ಮಾತ್ರ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ