ಮುಂಗಾರು ಚುರುಕು: ಉತ್ತರ ಭಾರತದ ಹಲವೆಡೆ ಭೂಕುಸಿತ, ರಸ್ತೆ ಬಂದ್‌; ಹಿಮಾಚಲದಲ್ಲಿ ನೂರಾರು ಪ್ರವಾಸಿಗರು ಅತಂತ್ರ; ಹಲವರು ಬಲಿ

Published : Jun 27, 2023, 08:08 AM ISTUpdated : Jun 27, 2023, 08:12 AM IST
ಮುಂಗಾರು ಚುರುಕು: ಉತ್ತರ ಭಾರತದ ಹಲವೆಡೆ ಭೂಕುಸಿತ, ರಸ್ತೆ ಬಂದ್‌; ಹಿಮಾಚಲದಲ್ಲಿ ನೂರಾರು ಪ್ರವಾಸಿಗರು ಅತಂತ್ರ; ಹಲವರು ಬಲಿ

ಸಾರಾಂಶ

ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ 301 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ಪ್ರವಾಸಿಗರು ಸೇರಿದಂತೆ ನೂರಾರು ಜನರು ಹಲವೆಡೆ ಸಿಲುಕಿಕೊಂಡಿದ್ದಾರೆ. ಚಂಡೀಗಢದಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ.

ನವದೆಹಲಿ (ಜೂನ್ 27, 2023): ಈ ವರ್ಷ ಮುಂಗಾರು ಮಾರುತಗಳು ತಡವಾಗಿಯೇ ದೇಶವನ್ನು ಪ್ರವೇಶಿಸಿದವಾದರೂ ಕಳೆದ ಎರಡು ದಿನಗಳಿಂದ ದೇಶಾದ್ಯಂತ ಹಲವೆಡೆ ಮುಂಗಾರು ಚುರುಕುಗೊಂಡಿದ್ದು ಪರಿಣಾಮ ಸೋಮವಾರ ರಾಜಸ್ಥಾನದಲ್ಲಿ ಸುರಿದ ಸಿಡಿಲು ಸಹಿತ ಭಾರೀ ಮಳೆಯಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಹಠಾತ್‌ ಮಳೆ ಹಾಗೂ ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿ ನೂರಾರು ಪ್ರಯಾಣಿಕರು ರಸ್ತೆಯಲ್ಲೇ ಸಿಲುಕಿಕೊಂಡಿದ್ದಾರೆ.

10 ವರ್ಷದ ಬಾಲಕಿ ಸೇರಿದಂತೆ ರಾಜಸ್ಥಾನದ ವಿವಿಧೆಡೆ ಸಿಡಿಲಿಗೆ 4 ಜನ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ 301 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ಪ್ರವಾಸಿಗರು ಸೇರಿದಂತೆ ನೂರಾರು ಜನರು ಹಲವೆಡೆ ಸಿಲುಕಿಕೊಂಡಿದ್ದಾರೆ. ಚಂಡೀಗಢದಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ.

ಇದನ್ನು ಓದಿ: ಅಸ್ಸಾಂ ಪ್ರವಾಹ ಸ್ಥಿತಿ ಮುಂದು​ವ​ರಿ​ಕೆ: 16 ಜಿಲ್ಲೆಗಳ 4.88 ಲಕ್ಷ ಜನರಿಗೆ ತೀವ್ರ ಸಂಕಷ್ಟ

ಇನ್ನು ಅತಿಯಾದ ಮಳೆಯಿಂದ ಸಂಭವಿಸಿದ ಭೂ ಕುಸಿತದಿಂದ ಸೋಮವಾರ ಜಮ್ಮು - ಶ್ರೀನಗರ ಹೆದ್ದಾರಿ ಬಂದ್‌ ಮಾಡಲಾಗಿತ್ತು. ಈಗಾಗಲೇ ಉತ್ತರ ಅರಬ್ಬೀ ಸಮುದ್ರ, ಗುಜರಾತ್‌, ರಾಜಸ್ಥಾನ, ಹರ್ಯಾಣ, ಪಂಜಾಬ್‌, ಜಮ್ಮು- ಕಾಶ್ಮೀರ, ಲಡಾಖ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಾನ್ಸೂನ್‌ ಮುಂದುವರೆದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಹಿಮಾಚಲದಲ್ಲಿ ದಿಢೀರ್‌ ಪ್ರವಾಹ, ಭಾರಿ ಭೂಕುಸಿತ: 6 ಸಾವು, 10 ಜನಕ್ಕೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ದಿಢೀರ್‌ ಪ್ರವಾಹ ಕಾಣಿಸಿಕೊಂಡು ಭೂ ಕುಸಿತ ಉಂಟಾಗಿದೆ. ಮಳೆ ಸಂಬಂಧಿ ಘಟನೆಗೆ 6 ಜನರು ಬಲಿಯಾಗಿದ್ದು, 10 ಜನರು ಗಾಯಗೊಂಡಿದ್ದಾರೆ. ಜೊತೆಗೆ 120 ರಸ್ತೆಗಳಿಗೆ ಹಾನಿಯಾಗಿದೆ. ಈ ಪೈಕಿ ಮಂಡಿಯಿಂದ ಕುಲು ಸಂಪರ್ಕಿಸುವ ಹೆದ್ದಾರಿ ಸಂಚಾರ ಪೂರ್ಣ ಬಂದ್‌ ಆಗಿದೆ. ಪರಿಣಾಮ ಸುಮಾರು 15 ಕಿ.ಮೀ. ಉದ್ದದಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ವಾಹನಗಳು ಸಿಲುಕಿವೆ. ಹೋಟೆಲ್‌ ರೂಂ ಲಭಿಸದ ಕಾರಣ 200 ಪ್ರವಾಸಿಗರು ನಡುರಸ್ತೆಯಲ್ಲೇ ರಾತ್ರಿಯನ್ನು ಕಳೆದಿದ್ದಾರೆ.

ಮರಳುಗಾಡು ರಾಜಸ್ಥಾನದಲ್ಲಿ ಮಳೆಯೋ ಮಳೆ: ಮಲೆನಾಡಿನಲ್ಲಿ ಮಳೆಯೇ ಇಲ್ಲ.. ಇದೆಂತಾ ವಿಚಿತ್ರ ಅಲ್ವಾ?

ರಸ್ತೆಗೆ ಬೃಹತ್‌ ಬಂಡೆಯೊಂದು ಉರುಳಿರುವ ಕಾರಣ ವಾಹನ ಸಂಚಾರ ಸ್ಥಗಿತಗೊಂಡಿದೆ. ಆ ಬಂಡೆಯನ್ನು ಸ್ಫೋಟಕ ಬಳಸಿ ಧ್ವಂಸಗೊಳಿಸುವ ಕಾರ್ಯ ನಡೆಯುತ್ತಿದೆ. ಅದಕ್ಕೆ ಇನ್ನೂ 8 ತಾಸು ಬೇಕಾಗಲಿದ್ದು, ಅಲ್ಲಿವರೆಗೆ ಜನರು ರಸ್ತೆಯಲ್ಲೇ ಕಾಲ ಕಳೆಯಬೇಕಾಗುತ್ತದೆ.

ಈ ಮಧ್ಯೆ, ಹಿಮಾಚಲ ಪ್ರದೇಶದಲ್ಲಿ ಇನ್ನೂ ಎರಡು ದಿನಗಳ ಕಾಲ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ದೇಶದ ವಿವಿಧೆಡೆಯಿಂದ ಪ್ರವಾಸಕ್ಕಾಗಿ ಹಿಮಾಚಲಕ್ಕೆ ಬಂದಿರುವ ಜನರು ಭೀತಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಮೋದಿಗೆ ಇಂದ್ರದೇವನ ಆಶೀರ್ವಾದ: ಮಳೆಯ ಆರ್ಭಟದ ನಡುವೆಯೂ ರಾಷ್ಟ್ರಗೀತೆಗೆ ‘ನಮೋ’ ಗೌರವ

ದೇಶದ ಶೇ.80 ಭಾಗಕ್ಕೆ ಮಳೆ: ಮುಂಗಾರು ಈ ಸಲ ಸ್ವಲ್ಪ ಭಿನ್ನ
ಈ ವರ್ಷ ಬಹುತೇಕ 10 ದಿನ ತಡವಾಗಿ ದೇಶವನ್ನು ಪ್ರವೇಶಿಸಿದ ಮುಂಗಾರು ಮಾರುತಗಳು ಈಗಾಗಲೇ ದೇಶದ ಶೇ.80 ರಷ್ಟು ಭಾಗವನ್ನು ವ್ಯಾಪಿಸಿದೆ. ಆದರೆ ಈ ಬಾರಿ ಮುಂಗಾರು ಸ್ವಲ್ಪ ಭಿನ್ನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

‘ಬಂಗಾಳ ಕೊಲ್ಲಿಯಲ್ಲಿ ಉಂಟಾದ ಕಡಿಮೆ ಒತ್ತಡ ಪ್ರದೇಶದಿಂದಾಗಿ ದೇಶದ ಹಲವು ಭಾಗಗಳಿಗೆ ಮುಂಗಾರು ವೇಗವಾಗಿ ತಲುಪಿದೆ. ಇದರ ಪರಿಣಾಮವಾಗಿಯೇ ಮುಂಬೈ ತಲುಪಿದ 15 ದಿನಗಳ ಬಳಿಕ ದೆಹಲಿ ತಲುಪುತ್ತಿದ್ದ ಮುಂಗಾರು, ಒಂದೇ ದಿನ ಮುಂಬೈ ಮತ್ತು ದೆಹಲಿ ಎರಡನ್ನೂ ಪ್ರವೇಶ ಮಾಡಿದೆ. 62 ವರ್ಷಗಳಲ್ಲೇ ಮೊದಲ ಬಾರಿ ಈ ರೀತಿ ಆಗಿದೆ’ ಎಂದು ಇಲಾಖೆಯ ಹಿರಿಯ ವಿಜ್ಞಾನಿ ಡಾ.ನರೇಶ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಗಂಟೆಗೆ 150 ಕಿ.ಮೀ. ವೇಗ​ದಲ್ಲಿ ‘ಬಿ​ಪೊ​ರ್‌​ಜೊ​ಯ್‌’ ಚಂಡ​ಮಾ​ರು​ತದ ಅಬ್ಬ​ರ: ಸಂಜೆ ಅಪ್ಪ​ಳಿ​ಸ​ಲಿದೆ ಡೆಡ್ಲಿ ಸೈಕ್ಲೋನ್‌

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮುಂಗಾರು ಸ್ವಲ್ಪ ವಿಭಿನ್ನವಾಗಿದೆ. ಇದನ್ನು ಮುಂಗಾರು ಮಾರುತಗಳು ದೇಶದ ವಿವಿಧ ರಾಜ್ಯಗಳನ್ನು ಪ್ರವೇಶಿಸಿರುವ ಸಮಯದಿಂದ ಗುರುತಿಸಬಹುದು. ಇದು ಹವಾಮಾನ ಬದಲಾವಣೆಯ ಪರಿಣಾಮ ಹೌದೇ ಎನ್ನುವುದನ್ನು ಅರಿಯಲು ಕನಿಷ್ಠ ಹಿಂದಿನ 30 - 40 ವರ್ಷಗಳ ಮಾಹಿತಿ ಅಧ್ಯಯನ ಮಾಡಬೇಕು ಎಂದು ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ