ರೈತರ ದಿಲ್ಲಿ ಹೋರಾಟದ ಹಿಂದೆ ಖಲಿಸ್ತಾನಿ ಪಾತ್ರ!

By Kannadaprabha NewsFirst Published Feb 5, 2021, 7:54 AM IST
Highlights

ಗ್ರೇಟಾ ಹಂಚಿಕೊಂಡ ಹೋರಾಟದ ರೂಪರೇಷೆ ಖಲಿಸ್ತಾನಿಗಳದ್ದು| ಈ ದಾಖಲೆ ರಚಿಸಿದವರ ವಿರುದ್ಧ ದೆಹಲಿಯಲ್ಲಿ ದೇಶದ್ರೋಹ ಕೇಸ್‌| ರೈತರ ದಿಲ್ಲಿ ಹೋರಾಟದ ಹಿಂದೆ ಖಲಿಸ್ತಾನಿ ಪಾತ್ರ!

ನವದೆಹಲಿ(ಫೆ.03): ಕೃಷಿ ಕಾಯ್ದೆ ವಿರುದ್ಧ ಬೀದಿಗಿಳಿದಿರುವ ರೈತರ ಪ್ರತಿಭಟನೆಯನ್ನೇ ಅಸ್ತ್ರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಭಾರತದ ಅಪಖ್ಯಾತಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಗುರುವಾರ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಹೋರಾಟ ಯಾವ ರೀತಿ ಇರಬೇಕೆಂಬುದರ ರೂಪರೇಷೆ ಒಳಗೊಂಡ ಟೂಲ್‌ಕಿಟ್‌ ಒಂದನ್ನು ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಟ್ವೀಟ್‌ ಮಾಡಿದ್ದರು. ಬಳಿಕ ಈ ವಿಷಯ ಭಾರತದಲ್ಲಿ ಸುದ್ದಿಯಾಗುತ್ತಲೇ ಆ ಟ್ವೀಟ್‌ ಅನ್ನು ಅಳಿಸಿಹಾಕಿದ್ದರು.

ಈ ಬಗ್ಗೆ ತನಿಖೆ ನಡೆಸಿದ ದೆಹಲಿ ಪೊಲೀಸರಿಗೆ, ಈ ಟೂಲ್‌ಕಿಟ್‌ ರಚನೆ ಹಿಂದೆ ಪ್ರತ್ಯೇಕ ಖಲಿಸ್ತಾನಿ ದೇಶ ರಚನೆಯ ಉದ್ದೇಶ ಹೊಂದಿರುವ ತಂಡವೊಂದರ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅನಾಮಧೇಯರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರೆಟಾ ಥನ್‌ಬರ್ಗ್‌ ಟ್ವೀಟ್‌ ಮಾಡಿದ್ದ ದಾಖಲೆಯಲ್ಲಿ ವಿಶ್ವದ ಯಾವುದೇ ಭಾಗದಲ್ಲಿದ್ದರೂ ಭಾರತದ ರೈತ ಕಾಯ್ದೆ ವಿರುದ್ಧ ಧ್ವನಿಯೆತ್ತಿ. ನಿಮ್ಮಲ್ಲಿನ ಭಾರತದ ದೂತವಾಸದ ಸನಿಹ ಪ್ರತಿಭಟನೆ ಮಾಡಿ. ಆನ್‌ಲೈನ್‌ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಫೆ.4 ಹಾಗೂ ಫೆ.6ರಂದು ಆಂದೋಲನ ಮಾಡಿ ಎಂದು ಕರೆ ನೀಡಲಾಗಿತ್ತು. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ದಾಖಲೆಯೊಂದಿಗೆ ಸಂಪರ್ಕವಿರುವವರ ವಿರುದ್ಧ ದೇಶದ್ರೋಹ, ಕ್ರಿಮಿನಲ್‌ ಪಿತೂರಿ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಕೇಸ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿ ಪ್ರವೀರ್‌ ರಂಜನ್‌ ತಿಳಿಸಿದರು.

 

click me!