ಕೇಂದ್ರದ ಎನ್‌ಡಿಎ ಸರ್ಕಾರದ ಅಳಿವು- ಉಳಿವು ನಿರ್ಧರಿಸುವ ಸಾಮರ್ಥ್ಯ ಹೊಂದಿರುವ ಜೆಡಿಯು, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಪಿಟಿಐ ನವದೆಹಲಿ: ಕೇಂದ್ರದ ಎನ್‌ಡಿಎ ಸರ್ಕಾರದ ಅಳಿವು- ಉಳಿವು ನಿರ್ಧರಿಸುವ ಸಾಮರ್ಥ್ಯ ಹೊಂದಿರುವ ಜೆಡಿಯು, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ ಈ ಬಗ್ಗೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲೂ ನಿರ್ಧರಿಸಿದೆ.
ಲೋಕಸಭೆಯಲ್ಲಿ 12 ಸ್ಥಾನ ಹೊಂದಿರುವ ಜೆಡಿಯು, ಶನಿವಾರ ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಪಕ್ಷವು ಪುನರುಚ್ಚರಿಸಿತು. ಒಂದು ವೇಳೆ ವಿಶೇಷ ಸ್ಥಾನಮಾನ ಸಾಧ್ಯವಾಗದೇ ಹೋದರೆ ವಿಶೇಷ ಪ್ಯಾಕೇಜ್ ನೀಡುವ ವಿಧಾನವನ್ನೂ ಪರಿಗಣಿಸಬಹುದು ಎಂದು ಸಲಹೆ ನೀಡಿದೆ.
ಪ್ರಧಾನಿ ಕಾಲಿಗೆ ಬೀಳಲು ಮುಂದಾದ ನಿತೀಶ್ ಕುಮಾರ್: ತಕ್ಷಣ ತಡೆದ ನರೇಂದ್ರ ಮೋದಿ: ವೀಡಿಯೋ ವೈರಲ್
ಇಂದಿನ ಇಂಡಿಯಾ ಕೂಟದ ಭಾಗವಾಗಿದ್ದ ಜೆಡಿಯು ಜಾರಿಗೊಳಿಸಿದ್ದ ಒಬಿಸಿ, ಎಸ್ಸಿಎಸ್ಟಿ ಸಮುದಾಯಕ್ಕೆ ಶೇ.65ರಷ್ಟು ಮೀಸಲು ಆದೇಶವನ್ನು ಇತ್ತೀಚೆಗೆ ಹೈಕೋರ್ಟ್ ವಜಾ ಮಾಡಿತ್ತು. ಇದು 2025ರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಯುಗೆ ಶಾಕ್ ನೀಡಿತ್ತು. ಹೀಗಾಗಿ ಜನರ ಮುಂದೆ ಮತ್ತೊಮ್ಮೆ ತೆರಳುವ ಮುನ್ನ ವಿಶೇಷ ಸ್ಥಾನಮಾನ ಅಥವಾ ಹಣಕಾಸು ಪ್ಯಾಕೇಜ್ ಪಡೆಯುವ ಪಟ್ಟನ್ನು ಕೇಂದ್ರದ ಮುಂದೆ ಜೆಡಿಯು ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದರ ಜೊತೆಗೆ ಸಂವಿಧಾನದ 9ನೇ ಪರಿಚ್ಛೇದಲ್ಲಿ ಒಬಿಸಿ, ಅತ್ಯಂತ ಹಿಂದುಳಿದ ಸಮುದಾಯ, ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಮೀಸಲು ನೀಡುವ ಅಂಶ ಸೇರಿಸುವ ಬಗ್ಗೆಯೂ ಶನಿವಾರದ ಸಭೆಯಲ್ಲಿ ಒತ್ತಾಯ ಮಾಡಿದೆ.
ಪ್ರಮುಖ ಹುದ್ದೆಗಳಿಗೆ ನಿತೀಶ್, ನಾಯ್ಡು ಭಾರಿ ಚೌಕಾಸಿ? ಸ್ಪೀಕರ್ ಹುದ್ದೆ ಮೇಲೇಕೆ ಮಿತ್ರಪಕ್ಷಗಳ ಕಣ್ಣು?
ಝಾ ಕಾರ್ಯಾಧ್ಯಕ್ಷ:
ಈ ನಡುವೆ ರಾಜ್ಯಸಭಾ ಸದಸ್ಯ ಸಂಜಯ್ ಝಾ ಅವರನ್ನು ಜೆಡಿಯು ಕಾರ್ಯಾಧ್ಯಕ್ಷರನ್ನಾಗಿ ಶನಿವಾರ ನೇಮಿಸಲಾಗಿದೆ. ಝಾ ಅವರು ಬಿಜೆಪಿ ನಾಯಕತ್ವದೊಂದಿಗೆ ಉತ್ತಮ ಸಮೀಕರಣವನ್ನು ಹೊಂದಿರುವುದರಿಂದ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದ ನಿರ್ಧಾರ ಮಹತ್ವದ್ದಾಗಿದೆ. ಅವರು ರಾಜ್ಯಸಭೆಯಲ್ಲಿ ಪಕ್ಷದ ನಾಯಕರೂ ಆಗಿದ್ದಾರೆ. ಇನ್ನು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಕಾರಣ ಅವರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಲು ಝಾರನ್ನು ನೇಮಕ ಮಾಡಲಾಗಿದೆ ಎಂದೂ ಹೇಳಲಾಗಿದೆ.