
ರಾಯ್‌ಪುರ/ ಐಜ್ವಾಲ್: ಪಂಚರಾಜ್ಯ ಚುನಾವಣೆಯ ಮೊದಲ ಹಂತದಲ್ಲಿ ಛತ್ತೀಸ್ ಗಢದ 20 ಸ್ಥಾನಗಳಿಗೆ ಹಾಗೂ ಮಿಜೋರಂನ ಎಲ್ಲಾ 40 ಸ್ಥಾನಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಛತ್ತೀಸ್‌ಗಢದಲ್ಲಿ ಶೇ.71 ಹಾಗೂ ಮಿಜೋರಂನಲ್ಲಿ ಶೇ.77ರಷ್ಟು ಮತದಾನವಾಗಿದೆ
ಛತ್ತೀಸ್‌ಗಢದಲ್ಲಿ 8 ಕಡೆ ನಕ್ಸಲರೊಂದಿಗೆ ಸಂಘರ್ಷ ನಡೆದದ್ದನ್ನು ಹೊರತುಪಡಿಸಿದರೆ ಎರಡು ರಾಜ್ಯಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಛತ್ತೀಸ್‌ಗಢದ ಸುಕ್ಕಾ ಜಿಲ್ಲೆಯಲ್ಲಿ ನಡೆದ ಸಂಘರ್ಷದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಜಿಲ್ಲೆಯ ಅರಣ್ಯ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಹೆಲಿಕಾಪ್ಟರ್‌ನಲ್ಲಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢದ ಉಳಿದ 70 ಕ್ಷೇತ್ರಗಳಿಗೆ ನ.17ರಂದು ಮತದಾನ ನಡೆಯಲಿದೆ. ಈ 2 ರಾಜ್ಯಗಳ ಚುನಾವಣಾ ಫಲಿತಾಂಶ ಡಿ.3ಕ್ಕೆ ಪ್ರಕಟವಾಗಲಿದೆ.
ಕಾಂಗ್ರೆಸ್ ಗೆದ್ದರೆ ಮ.ಪ್ರ.ದಲ್ಲಿ ಐಪಿಎಲ್ ತಂಡ ರಚನೆ:
ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ಮತ್ತು ಸಂಸದ ನಕುಲ್ ನಾಥ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಐಪಿಎಲ್ (ಇಂಡಿಯನ್ ಪ್ರೀಮಿಯರ್‌ಲೀಗ್) ತಂಡವನ್ನು ರಚಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ರಾಜ್ಯದ ತಂಡಕ್ಕೊಂದು ಹೆಸರು ಸೂಚಿಸುವಂತೆ ಯುವಕರಿಗೆ ಕರೆ ನೀಡಿದ್ದಾರೆ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ನಾನು ಯಾವಾಗಲೂ ಕ್ರೀಡೆಗೆ ಬೆಂಬಲ ನೀಡುತ್ತೇನೆ. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದ ಕೂಡಲೇ ಮಧ್ಯ ಪ್ರದೇಶದ ಐಪಿಎಲ್ ತಂಡವನ್ನು ರಚಿಸಲಾ ಗುತ್ತದೆ. ಇದರಿಂದ ಕ್ರಿಕೆಟ್‌ನಲ್ಲಿ ರಾಜ್ಯದ ಕೀರ್ತಿ ಹೆಚ್ಚಾಗುತ್ತದೆ. ತಂಡಕ್ಕಾಗಿ ಪ್ರತಿಯೊಬ್ಬರೂ ಹೆಸರು ಸೂಚಿಸಿ' ಎಂದಿದ್ದಾರೆ.
ಬಿಜೆಪಿ ಗೆದ್ದರೆ ತೆಲಂಗಾಣದಲ್ಲಿ ಒಬಿಸಿ ಸಿಎಂ: ಮೋದಿ
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಹಿಂದುಳಿದ ವರ್ಗದ (ಒಬಿಸಿ) ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭರವಸೆ ನೀಡಿದ್ದಾರೆ. ಇಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸ್ವಯಂ ಗೌರವ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಹಿಂದುಳಿದ ವರ್ಗಗಳ ವಿರೋಧಿಗಳಾಗಿವೆ. ಈ ಪಕ್ಷಗಳು ಒಬಿಸಿಗೆ ಸಿಎಂ ಸ್ಥಾನ ನೀಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಮತ್ತು ಬಿಆರ್.ಎಸ್ ಪಕ್ಷಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವಂಶಪಾರಂಪರ್ಯ ಆಡಳಿತ, ಭ್ರಷ್ಟಾಚಾರ ಮತ್ತು ತುಷ್ಟಿಕರಣ ರಾಜಕೀಯ ಈ ಪಕ್ಷಗಳ ಡಿಎನ್‌ಎಯಲ್ಲೇ ಇದೆ. ಹಾಗಾಗಿ ಹಿಂದುಳಿದ ವರ್ಗದ ವಿರೋಧಿ ಸರ್ಕಾರವನ್ನು ಜನ ಹೊರದೂಡಬೇಕು. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದೆ. ಜನರಿಂದ ಯಾರು ಲೂಟಿ ಮಾಡಿದ್ದಾರೋ ಅವರು ಅದನ್ನು ಹಿಂದಿರುಗಿಸಲೇಬೇಕು. ಇದು ಮೋದಿಯ ಗ್ಯಾರಂಟಿ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ