ಶುಕ್ರವಾರ ಮುಂಜಾನೆಯ ಸೇನೆಯೆ ಭರ್ಜರಿ ಭೇಟೆ, ಐವರು ಪಾಕ್‌ ಭಯೋತ್ಪಾದಕರ ಎನ್‌ಕೌಂಟರ್‌!

By Santosh Naik  |  First Published Jun 16, 2023, 10:36 AM IST

ಶುಕ್ರವಾರ ಮುಂಜಾನೆಯೇ ಭಾರತೀಯ ಸೇನೆ ಭರ್ಜರಿ ಭೇಟೆ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಐವರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ.


ಶ್ರೀನಗರ (ಜೂ.16): ದೇಶದ ಗಡಿ ಭಾಗಗಳಲ್ಲಿ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಸೇನೆ, ಶುಕ್ರವಾರ ಮುಂಜಾನೆಯೇ ಕುಪ್ವಾರದಲ್ಲಿ ಭರ್ಜರಿ ಭೇಟೆ ನಡೆಸಿದೆ. ದೇಶಕ್ಕೆ ನುಸುಳಲು ಯತ್ನಿಸಿದ ಐವರು ಪಾಕ್‌ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆ ಹಾಗೂ ಪಾಕ್‌ ನೆಲದ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಐವರು ಉಗ್ರರನ್ನು ಸೇನೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಅದರ ಬೆನ್ನಲ್ಲಿಯೇ ಇಡೀ ಪ್ರದೇಶದಲ್ಲಿ ಭಾರತೀಯ ಸೇನೆ ಶೋಧ ಕಾರ್ಯ ನಡೆಸಿದ್ದು ಯಾವ ಕಾರಣಕ್ಕಾಗಿ ಭಾರತಕ್ಕೆ ಒಳನುಸುಳಲು ಪ್ರಯತ್ನ ಮಾಡುತ್ತಿದ್ದರು ಎನ್ನುವುದನ್ನು ತಿಳಿಯುವ ಗುರಿಯಲ್ಲಿದೆ. 'ಐವರು ವಿದೇಶಿ ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿದೆ. ಅದರೊಂದಿಗೆ ಶೋಧ ಕಾರ್ಯ ನಡೆಯುತ್ತಿದೆ' ಎಂದು ಜಮ್ಮು ಕಾಶ್ಮೀರ ಪೊಲೀಸ್‌ನ ಎಡಿಜಿಪಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.  ಇದಕ್ಕೂ ಮುನ್ನ ಟ್ವೀಟ್‌ ಮಾಡಿದ್ದ ಕುಪ್ವಾರ ವಲಯದ ಪೊಲೀಸ್‌, 'ಭಯೋತ್ಪಾದಕರು ಹಾಗೂ ಸೇನೆ-ಪೊಲೀಸ್‌ ತಂಡಗಳ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಕುಪ್ವಾರ ಜಿಲ್ಲೆಯ ಜುಮಾಗುಂಡ್‌ ಪ್ರದೇಶದ ಎಲ್‌ಓಸಿ ಬಳಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಇದ್ದ ಬೆನ್ನಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಬರಬೇಕಿದೆ' ಎಂದು ತಿಳಿಸಿತ್ತು.

ಜೂನ್‌ 13 ರಂದು ಜಮ್ಮು ಕಾಶ್ಮೀರ ಪೊಲೀಸ್‌ ಹಾಗೂ ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಆ ಎನ್‌ಕೌಂಟರ್‌ ಕೂಡ ಕುಪ್ವಾರ ಜಿಲ್ಲೆಯಲ್ಲಿಯೇ ನಡೆದಿತ್ತು. ಇಲ್ಲಿನ ಎಲ್‌ಓಸಿ ಭಾಗದ ದೋಬ್ನಾರ್‌ ಮಚ್ಚಾಲ್‌ ಪ್ರದೇಶದಲ್ಲಿ ಈ ಚಕಮಕಿ ನಡೆದಿತ್ತು.

click me!