ಲಸಿಕೆಯಿಂದ ದೇಶದಲ್ಲಿ ಮೊದಲ ಸಾವು ದೃಢ!

By Suvarna NewsFirst Published Jun 16, 2021, 9:32 AM IST
Highlights

* ಲಸಿಕೆ ಪಡೆದ ಬಳಿಕ ಅಲರ್ಜಿಯಿಂದಾಗಿ 68 ವರ್ಷದ ವ್ಯಕ್ತಿ ಸಾವು

* ಮಾ.8ರಂದು ಕೋವಿಡ್‌ ಲಸಿಕೆ ಪಡೆದಿದ್ದ ವ್ಯಕ್ತಿ: ಅಧ್ಯಯನ ವರದಿ

* ಆದಾಗ್ಯೂ ಲಸಿಕೆಯಿಂದ ಲಾಭ ಅಧಿಕ, ಅಪಾಯ ಕಮ್ಮಿ: ಸ್ಪಷ್ಟನೆ

ನವದೆಹಲಿ(ಜೂ.16): ದೇಶದಲ್ಲಿ ಕೋವಿಡ್‌ ಲಸಿಕೆಯ ಅಡ್ಡ ಪರಿಣಾಮಗಳಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದನ್ನು ಇದೇ ಮೊದಲ ಬಾರಿಗೆ ಸರ್ಕಾರ ಖಚಿತಪಡಿಸಿದೆ. 2021ರ ಮಾ.8ರಂದು ಲಸಿಕೆ ಪಡೆದಿದ್ದ 68 ವರ್ಷದ ವ್ಯಕ್ತಿಯೊಬ್ಬರು ಲಸಿಕೆಯಿಂದಾಗಿ ಗಂಭೀರ ಅಲರ್ಜಿಗೆ ತುತ್ತಾಗಿ, ಅದರಿಂದ ಸಾವನ್ನಪ್ಪಿದ್ದರು ಎಂದು ಕೇಂದ್ರ ಸರ್ಕಾರವೇ ನೇಮಿಸಿದ್ದ ಉನ್ನತ ಮಟ್ಟದ ಸಮಿತಿಯೊಂದು ಬಹಿರಂಗಪಡಿಸಿದೆ.

ಆದರೆ ಸಾವನ್ನಪ್ಪಿದ ವ್ಯಕ್ತಿಯ ಹೆಸರು, ರಾಜ್ಯ, ಪಡೆದ ಲಸಿಕೆಯ ಕುರಿತ ಯಾವುದೇ ಮಾಹಿತಿಯನ್ನು ಸಮಿತಿ ಬಹಿರಂಗಪಡಿಸಿಲ್ಲ. ಆದರೆ ಲಸಿಕೆ ಪಡೆದ ಬಳಿಕ 30 ನಿಮಿಷಗಳ ಕಾಲ ವೈದ್ಯರ ನಿಗಾದಲ್ಲೇ ಇರಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಒತ್ತಿಹೇಳಿದೆ. ಏಕೆಂದರೆ ಇಂಥ ಬಹುತೇಕ ಅಲರ್ಜಿಯ ಪ್ರಕರಣಗಳು, ಲಸಿಕೆ ಪಡೆದ 30 ನಿಮಿಷಗಳ ಒಳಗೇ ಬೆಳಕಿಗೆ ಬರುತ್ತದೆ, ಒಂದು ವೇಳೆ ಅಂಥ ವ್ಯಕ್ತಿ ಸ್ಥಳದಲ್ಲೇ ಇದ್ದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಸಾವನ್ನು ತಪ್ಪಿಸಬಹುದು ಎಂದು ರಾಷ್ಟ್ರೀಯ ಎಇಎಫ್‌ಐ ಸಮಿತಿಯ ಅಧ್ಯಕ್ಷ ಡಾ.ಎನ್‌.ಕೆ.ಅರೋರಾ ಹೇಳಿದ್ದಾರೆ.

ಆದಾಗ್ಯೂ ಲಸಿಕೆ ಪಡೆಯುವುದರಿಂದ ಉಂಟಾಗುವ ಲಾಭವು, ಅಪಾಯದ ಸಣ್ಣ ಪ್ರಮಾಣಕ್ಕಿಂತ ಬಹುದೊಡ್ಡದಾಗಿದೆ. ಜೊತೆಗೆ ಎಲ್ಲಾ ಮುಂಜಾಗ್ರತೆಗಳ ಜೊತೆಗೆ, ಲಸಿಕೆಯಿಂದ ಉಂಟಾಗುವ ಎಲ್ಲಾ ಅಡ್ಡ ಪರಿಣಾಮಗಳ ಮೇಲೂ ನಿಯಮಿತವಾಗಿ ಕಣ್ಣಿಡಲಾಗಿದೆ ಮತ್ತು ಅದನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಅಧ್ಯಯನ ವರದಿ:

ಲಸಿಕೆ ಪಡೆದ ಬಳಿಕ ಉಂಟಾಗುವ ಅಡ್ಡ ಪರಿಣಾಮಗಳು, ಅದರಿಂದ ಉಂಟಾದ ಸಾವು, ನೋವಿನ ಅಧ್ಯಯನದ ಹೊಣೆಯನ್ನು ‘ಲಸಿಕೆ ಪಡೆದ ಬಳಿಕದ ಗಂಭೀರ ಅಡ್ಡಪರಿಣಾಮ ರಾಷ್ಟ್ರೀಯ ಸಮಿತಿ’ಗೆ (ಎಇಎಫ್‌ಐ) ಕೇಂದ್ರ ಸರ್ಕಾರ ವಹಿಸಿತ್ತು. ಈ ಸಮಿತಿಯು ಲಸಿಕೆ ಪಡೆದ ಬಳಿಕ ಗಂಭೀರ ಸಮಸ್ಯೆ ಉಂಟಾಗಿದ್ದ 31 ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಈ ಪೈಕಿ ಫೆ.5ರಂದು ಸಂಭವಿಸಿದ 5, ಮಾ.9ರಂದು ಸಂಭವಿಸಿದ 8 ಮತ್ತು ಮಾ.31ರಂದು ಸಂಭವಿಸಿದ 18 ಪ್ರಕರಣಗಳು ಸೇರಿದ್ದವು.

ಏಪ್ರಿಲ್‌ ಮೊದಲ ವಾರದ ದತ್ತಾಂಶಗಳ ಅನ್ವಯ ಲಸಿಕೆ ಪಡೆದ 10 ಲಕ್ಷ ಜನರಲ್ಲಿ 2.7 ಜನರು ಸಾವನ್ನಪ್ಪಿದ ಮತ್ತು 4.8 ಜನರು ಅಡ್ಡ ಪರಿಣಾಮಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಿ ಹೇಳಲಾಗಿತ್ತು. ಆದರೆ ಲಸಿಕೆ ಪಡೆದ ಬಳಿಕ ಸಂಭವಿಸುವ ಇಂಥ ಪ್ರತಿ ಘಟನೆಗಳೂ ಲಸಿಕೆಯಿಂದಲೇ ಆಗಿದೆ ಎಂದು ತಂತಾನೆ ಪರಿಗಣಿಸಲಾಗದು. ಇಂಥ ಪ್ರಕರಣಗಳ ಕುರಿತು ವಿಸ್ತೃತ ಅಧ್ಯಯನ ಮಾತ್ರವೇ ಸಾವು ಮತ್ತು ಅದಕ್ಕೂ ಲಸಿಕೆಗೂ ನಡುವಿನ ಸಂಬಂಧವನ್ನು ಹೇಳಬಲ್ಲದಾಗಿರುತ್ತದೆ ಎಂದು ವರದಿ ಹೇಳಿದೆ.

ಹೀಗೆ ಅಧ್ಯಯನಕ್ಕೆ ಒಳಪಡಿಸಿದ 31 ಪ್ರಕರಣಗಳ ಪೈಕಿ 18 ಲಸಿಕೆಯಿಂದಾದ ಅಡ್ಡಪರಿಣಾಮಗಳಿಗೆ ಹೋಲಿಸಲಾಗದ್ದು, 7 ಕಾಕತಾಳೀಯ, 3 ಲಸಿಕೆ ಸಂಬಂಧಿತ, 1 ಉದ್ವೇಗ ಎಂದು ವರ್ಗೀಕರಿಸಲಾಗಿತ್ತು. 2 ಪ್ರಕರಣಗಳನ್ನು ಮಾತ್ರ ಯಾವುದೇ ವಿಭಾಗಕ್ಕೂ ಸೇರಿಸಲಾಗದ್ದು ಎಂದು ಪರಿಗಣಿಸಲಾಗಿತ್ತು.

ಮೇಲ್ಕಂಡ ಎಲ್ಲಾ ವರ್ಗೀಕೃತ ಅಂಶಗಳು ಕೂಡಾ ಲಸಿಕೆ ಪಡೆದ ಬಳಿಕವೇ ಸಂಭವಿಸಿದ್ದು. ಆದರೆ ಸದ್ಯ ಲಭ್ಯವಿರುವ ಕ್ಲಿನಿಕಲ್‌ ಪ್ರಯೋಗದ ದಾಖಲೆಗಳನ್ನು ಪರಿಶೀಲಿಸಿದಾಗ ಈ ಎಲ್ಲಾ ಘಟನೆಗಳಿಗೂ ಲಸಿಕೆಗೂ ನೇರ ಸಂಬಂಧ ಇದೆ ಎಂದು ದೃಢೀಕರಿಸಲಾಗದು. ಈ ಕುರಿತು ಇನ್ನಷ್ಟುವಿಶ್ಲೇಷಣೆ, ಅಧ್ಯಯನದ ಅಗತ್ಯವಿದೆ ಎಂದು ಸಮಿತಿ ಹೇಳಿದೆ.

ವರ್ಗೀಕೃತ ಕೇಸುಗಳು:

ಜ.19 ಮತ್ತು 16ರಂದು ಲಸಿಕೆ ಪಡೆದ ಬಳಿಕ ಅಲರ್ಜಿಗೆ ತುತ್ತಾದ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಬಳಿಕ ಚೇತರಿಸಿಕೊಂಡಿದ್ದಾರೆ. ಒಂದು ಸಾವು ಸಂಭವಿಸಿದೆ.

ಲಸಿಕೆಯಿಂದಲೇ ಸಾವು ಸಂಭವಿಸಿದೆ ಎಂದು ಹೇಳಲು ಅಗತ್ಯವಾದ ಕೆಲ ಮಹತ್ವದ ದಾಖಲೆಗಳು ಲಭ್ಯವಿರದ ಕಾರಣ 18 ಪ್ರಕರಣಗಳನ್ನು ಅಡ್ಡ ಪರಿಣಾಮಗಳಿಗೆ ಹೋಲಿಸಲಾಗದ್ದು ಎಂದು ವರ್ಗೀಕರಿಸಲಾಗಿದೆ. ಈ ಕುರಿತ ಅಗತ್ಯ ಮಾಹಿತಿ ಲಭ್ಯವಾದರೆ ಬಳಿಕ ಇವುಗಳನ್ನು ಬೇರೆ ವರ್ಗಕ್ಕೆ ಸೇರಿಸಬಹುದು.

ಇನ್ನು, ಲಸಿಕೆ ಪಡೆದ ಬಳಿಕ ಸಂಭವಿಸಿದ 7 ಜನರ ಸಾವಿಗೆ, ಲಸಿಕೆ ಹೊರತಾಗಿ ಬೇರೆ ವಿಷಯಗಳೇ ಕಾರಣ ಎಂದು ತನಿಖೆಯಲ್ಲಿ ಕಂಡುಬಂದಿದೆ. ಹೀಗಾಗಿ ಅವುಗಳನ್ನು ಕಾಕತಾಳೀಯ ಎಂದು ವರ್ಗೀಕರಿಸಲಾಗಿತ್ತು ಎಂದು ಸಮಿತಿ ಹೇಳಿದೆ.

click me!