
ನವದೆಹಲಿ(ಜೂ.02): ಕುಸ್ತಿಪಟಗಳು ಪ್ರತಿಭಟನೆ ಕಾವು ಜೋರಾಗುತ್ತಿದೆ. ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ಹೋರಾಟ ತೀವ್ರಗೊಳಿಸಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆಗೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು, ಕ್ರೀಡಾಪಟುಗಳು ಬೆಂಬಲ ಸೂಚಿಸಿದ್ದಾರೆ. ಇದೀಗ ಕುಸ್ತಿಪಟುಗಳ ಹೋರಾಟದ ನೇತೃತ್ವದವನ್ನು ರೈತ ಸಂಘಟನೆ ವಹಿಸಿಕೊಂಡಿದೆ. ಈಗಾಗಲೇ ಪದಕ ಗಂಗಾ ನದಿಗೆ ಎಸೆಯುವ ಹೋರಾಟದಲ್ಲಿ ಕುಸ್ತಿಪಟುಗಳ ಜೊತೆಗೆ ಮಾತುಕತೆ ನಡೆಸಿ ಆಂದೋಲನ ಕೈಬಿಡುವಂತೆ ಮಾಡಿದ ಕಿಸಾನ್ ಯೂನಿಯನ್ ಸಂಘಟನೆ ಇದೀಗ ಜೂನ್ 9 ರಿಂದ ಖಾಪ್ ಪಂಚಾಯತ್ ಹೋರಾಟ ಘೋಷಿಸಿದೆ. ಆದರೆ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದೆ ಈ ರೈತ ಸಂಘಟನೆಯಲ್ಲಿ ಭಿನ್ನಮತ ವ್ಯಕ್ತವಾಗಿದೆ. ಮಹತ್ವದ ಸಭೆಯಲ್ಲಿ ಕೈ ಕೈ ಮೀಲಾಯಿಸಿದ್ದಾರೆ. ಕ್ಯಾಮೆರಾ ಮುಂದೆ ಈ ಘಟನೆ ನಡೆದಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.
ಜೂನ್ 9ರೊಳಗೆ ಬ್ರಿಜ್ ಭೂಷಣ್ ಸಿಂಗ್ ಬಂಧಿಸಲು ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಗಡುವು ವಿಧಿಸಿದೆ. ಜೂನ್ 9ರಿಂದ ಖಾಪ್ ಪಂಚಾಯತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ. ದೇಶಾದ್ಯಂತ ಖಾಪ್ ಪಂಚಾಯತ್ ಹೋರಾಟದ ರೂಪುರೇಶೆ ಸಿದ್ದಪಡಿಸಲು ರೈತ ಸಂಘಟನೆ ಕೆಲ ಸಮಿತಿಗಳನ್ನು ಮಾಡಿದೆ. ಈ ಸಮಿತಿ, ಖಾಪ್ ಪಂಚಾಯತ್ ನಾಯಕರು, ರೈತ ಸಂಘಟನೆ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಸಭೆಯಲ್ಲಿ ಭಿನ್ನಮತ ವ್ಯಕ್ತವಾಗಿದೆ. ಸಭೆ ನಡೆಯುತ್ತಿದ್ದ ನಡುವೆಯೇ ಕೈಕೈ ಮಿಲಾಯಿಸಿದ ಘಟನೆ ನಡೆದಿದೆ.
ವೇದಿಕೆ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆಯೆ ಹಲವರು ಅಡ್ಡಿಪಡಿಸಿ ರಂಪಾಟ ನಡೆಸಿದ್ದಾರೆ. ಎರಡು ಗುಂಪುಗಳು ಪರಸ್ವರ ಕೈ ಕೈಮಿಲಾಯಿಸಿದೆ. ಆದರೆ ಯಾವ ಕಾರಣಕ್ಕೆ ಈ ಜಟಾಪಟಿ ನಡೆದಿದೆ ಅನ್ನೋದು ಬಹಿರಂಗವಾಗಿಲ್ಲ. ತಕ್ಷಣವೇ ಹಲವು ರೈತ ಮುಖಂಡರು ರೊಚ್ಚಿಗೆದ್ದ ನಾಯಕರನ್ನು ಸಮಾಧಾನಿಸುವ ಪ್ರಯತ್ನ ಮಾಡಿದ್ದಾರೆ. ಕೆಲ ಹೊತ್ತು ರೈತ ಮುಖಂಡರ ಸಭೆ ಗೊಂದಲದ ಬೀಡಾಗಿತ್ತು.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಹೋರಾಟ ತೀವ್ರಗೊಳಿಸಲು ತಮ್ಮ ಪದಕ ಗಂಗಾ ನದಿಗೆ ಎಸೆಯುವ ಪ್ರಯತ್ನ ಮಾಡಿದ್ದರು. ತಾವು ಈ ಹಿಂದೆ ಗೆದ್ದ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಒಲಿಂಪಿಕ್ಸ್‌ನ ಪದಕಗಳನ್ನು ನದಿ ಎಸೆಯುವ ಮೊದಲು ಸ್ಥಳಕ್ಕೆ ರೈತ ಮುಖಂಡ ನರೇಶ್ ಟಿಕಾಯತ್ ಪ್ರತ್ಯಕ್ಷರಾಗಿದ್ದರು. ಈ ಮೂಲಕ ಪ್ರತಿಭಟನೆ ಯೂ ಟರ್ನ್ ಪಡೆದಿತ್ತು. ರೈತ ಹೋರಾಟಗಾರ ನರೇಶ್ ಟಿಕಾಯತ್ ಮುಂತಾದವರು ಐದು ದಿನದಲ್ಲಿ ಸಮಸ್ಯೆಗೆ ಪರಿಹಾರ ದೊರಕಿಸುವ ಭರವಸೆ ನೀಡಿ ಪದಕ ಎಸೆಯದಂತೆ ಮನವೊಲಿಸಿದರು. ಅದರಂತೆ ಪದಕ ಎಸೆತ ನಿರ್ಧಾರ ಕೈಬಿಟ್ಟಕುಸ್ತಿಪಟುಗಳು, ಶೀಘ್ರದಲ್ಲೇ ದೆಹಲಿಯ ಇಂಡಿಯಾ ಗೇಟ್ ಬಳಿ ಆಮರಣ ಉಪವಾಸ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಕುಸ್ತಿಪಟುಗಳ ಬೇಡಿಕೆ ಈಡೇರದಿದ್ದರೆ ದೆಹಲಿಗೆ ಹಾಲು ತರಕಾರಿ ಪೂರೈಗೆ ಸ್ಥಗಿತ, ನರೇಶ್ ಟಿಕಾಯತ್ ಘೋಷಣೆ!
ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕುಸ್ತಿಪಟುಗಳು ಹೋರಾಟವನ್ನು ಇದೀಗ ರೈತ ಸಂಘಟನೆಗಳು ಮುನ್ನಡೆಸುತ್ತಿದೆ. ಕುಸ್ತಿಪಟುಗಳ ಪ್ರಕರಣವನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕುಸ್ತಿಪಟುಗಳ ಎಲ್ಲಾ ಬೇಡಿಕೆ ಪೂರೈಸಲಾಗಿದೆ. ಪೊಲೀಸರು ದೋಷಾರೋಪ ಪಟ್ಟಿಸಲ್ಲಿಸಿದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿರುವವರ ಬಗ್ಗೆ ಠಾಕೂರ್ ಕಿಡಿಕಾರಿದ್ದು, ‘ಕಾನೂನು ಎಲ್ಲರಿಗೂ ಸಮಾನ ಮತ್ತು ಎಲ್ಲಾ ಕ್ರೀಡಾಪಟುಗಳು ನಮಗೆ ಅಗತ್ಯ. ಮೋದಿ ಸರ್ಕಾರ ಕ್ರೀಡೆಯ ಬಜೆಟ್ ಹೆಚ್ಚಿಸಿದೆ. ಇದು ಯಾರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ’ ಎಂದು ಕುಟುಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ