
ಗ್ಯಾಂಗ್ಟಕ್: ಸಿಕ್ಕಿಂನಲ್ಲಿ ನಿರ್ಮಾಣ ಹಂತದ ಸುರಂಗವೊಂದರಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟ ಏಳು ಮಂದಿ ಕಾರ್ಮಿಕರನ್ನು ಬಲಿಪಡೆದಿದೆ. ಸ್ಫೋಟದ ತೀವ್ರತೆಗೆ ಸುರಂಗದ ಒಳಗೆ ಭೂಕುಸಿತ ಉಂಟಾಗಿದ್ದು, ಸುಮಾರು 18 ಕಾರ್ಮಿಕರು ಇನ್ನೂ ಒಳಗೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ರಾಷ್ಟ್ರೀಯ ಜಲವಿದ್ಯುತ್ ನಿಗಮದ (NHPC) ಟೀಸ್ಟಾ ಸ್ಟೇಜ್-VI ಜಲವಿದ್ಯುತ್ ಯೋಜನೆಯ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಸೋಮವಾರ ಮಧ್ಯಾಹ್ನ ಸುಮಾರು 3:40ರ ಸುಮಾರಿಗೆ ಸುರಂಗದ ಒಳಗೆ ಸಂಗ್ರಹವಾಗಿದ್ದ ಮೀಥೇನ್ ಅನಿಲವು ಸ್ಫೋಟಗೊಂಡಿದೆ. ಈ ಸ್ಫೋಟದಿಂದಾಗಿ ಸುರಂಗದ ಒಂದು ಭಾಗ ಕುಸಿದು ಬಿದ್ದಿದ್ದು, ಒಳಗೆ ಕೆಲಸ ಮಾಡುತ್ತಿದ್ದ ಸುಮಾರು 25 ಕಾರ್ಮಿಕರು ಸಿಲುಕಿಕೊಂಡಿದ್ದರು. ಇವರಲ್ಲಿ ಏಳು ಮಂದಿ ಸಾವನ್ನಪ್ಪಿರುವುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ.
ಘಟನೆ ನಡೆದ ತಕ್ಷಣ ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF) ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿವೆ. ಆದರೆ, ಸುರಂಗದ ಒಳಗಿರುವ ವಿಷಕಾರಿ ಮೀಥೇನ್ ಅನಿಲ ಮತ್ತು ಕಡಿಮೆ ಇರುವ ಆಮ್ಲಜನಕದ ಮಟ್ಟವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ. ಸುರಂಗದ ಹಾದಿ ಕಿರಿದಾಗಿರುವುದು ಮತ್ತು ದಟ್ಟವಾದ ಹೊಗೆಯಿಂದಾಗಿ ದೃಷ್ಟಿ ಮಂದವಾಗಿರುವುದು ರಕ್ಷಣಾ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ.
ಆರಂಭದಲ್ಲಿ ರಕ್ಷಣೆಗೆ ತೆರಳಿದ್ದ ಕೆಲವು ಅಗ್ನಿಶಾಮಕ ಸಿಬ್ಬಂದಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಇದರಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಸುರಂಗದೊಳಗೆ ಅನಿಲದ ಪ್ರಮಾಣ ಹೆಚ್ಚಿರುವುದರಿಂದ, ಗ್ಯಾಸ್ ಪ್ರೊಟೆಕ್ಟಿವ್ ಮಾಸ್ಕ್ ಮತ್ತು ವಿಶೇಷ ಉಪಕರಣಗಳನ್ನು ಹೊಂದಿರುವ ಪರಿಣಿತ ತಂಡವನ್ನು ನೆರೆಯ ಪಶ್ಚಿಮ ಬಂಗಾಳದಿಂದ ತರಿಸಿಕೊಳ್ಳಲಾಗಿದೆ. ಪಾಕ್ಯಾಂಗ್ ಮತ್ತು ಸಿಲಿಗುರಿಯಿಂದ ಹೆಚ್ಚುವರಿ ಎನ್‌ಡಿಆರ್‌ಎಫ್ ಪಡೆಗಳು ಆಗಮಿಸಿದ್ದು, ಸಿಲುಕಿರುವ 18 ಕಾರ್ಮಿಕರನ್ನು ರಕ್ಷಿಸಲು ಹಗಲಿರುಳು ಪ್ರಯತ್ನ ನಡೆಸಲಾಗುತ್ತಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಸುರಂಗದ ಸುಮಾರು 1.5 ಕಿಲೋಮೀಟರ್ ಆಳದಲ್ಲಿ ಭೂಮಿಯ ಪದರಗಳಿಂದ ಸ್ವಾಭಾವಿಕವಾಗಿ ಮೀಥೇನ್ ಅನಿಲ ಸೋರಿಕೆಯಾಗಿ ಶೇಖರಣೆಯಾಗಿತ್ತು. ಈ ಅನಿಲವನ್ನು ಹೊರಹಾಕಲು ಪ್ರಯತ್ನಿಸಿದ ಸಮಯದಲ್ಲಿ ಅದು ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (SSDMA) ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಿಲುಕಿರುವ ಕಾರ್ಮಿಕರ ಕುಟುಂಬದವರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ