
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಮತ್ತು ನಾಲ್ವರು ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಡಿಕೆ ಶಿವಕುಮಾರ್, ಸಚಿನ್ ನಾರಾಯಣ್, ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರಗೆ ಸಮನ್ಸ್ ನೀಡಲಾಗಿದೆ. ಜೂನ್ 1ರಂದು ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದ್ದು, ಅದಾದ ನಂತರ ಬೇಸಿಗೆ ರಜೆ ಬರಲಿದೆ. ಬೇಸಿಗೆ ರಜೆ ಮುಗಿದ ನಂತರ ದೋಷಾರೋಪ ಪಟ್ಟಿಯಲ್ಲಿ ಅಧಿಕಾರಿಗಳು ಮಾಡಿರುವ ಆರೋಪಗಳ ಕುರಿತಾಗಿ ಸಾಕ್ಷಿ, ವಾದ ಮತ್ತು ಪ್ರತಿವಾದ ನಡೆಯಲಿದೆ ಎಂದು ಕೋರ್ಟ್ ತಿಳಿಸಿದೆ.
ಕಳೆದ ವಾರವಷ್ಟೇ ಡಿಕೆ ಶಿವಕುಮಾರ್ ಮತ್ತು ನಾಲ್ಕು ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್‌ಶೀಟ್ ಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಿವಕುಮಾರ್, ಬಿಜೆಪಿ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಬಿಜೆಪಿಯ ವಿರುದ್ಧ ದನಿಯೆತ್ತುವ ನಾಯಕರ ವಿರುದ್ಧ ಅಧಿಕಾರ ದುರ್ಬಳಕೆ ಮಾಡಲಾಗುತ್ತಿದೆ. ಒಂದೋ ಸೋಲಬೇಕು ಇಲ್ಲವಾದರೆ ಅವರ ಜತೆ ಕೈಜೋಡಿಸಬೇಕು. ನಾನು ಎಲ್ಲವನ್ನೂ ಎದುರಿಸುತ್ತೇನೆ, ಇಂತಾ ಪ್ರಕರಣಗಳಿಂದ ಧೃತಿಗೆಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಏನಿದು ಪ್ರಕರಣ?:
ನವದೆಹಲಿ ರೋಸ್ ಅವೆನ್ಯೂ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದ ನ್ಯಾ. ವಿಕಾಸ್ ದುಲ್ ವಾದ ಮಂಡಿಸಿದ ಇಡಿ ಪರ ವಕೀಲರು, IPC ಸೆಕ್ಷನ್ 120 B ( ವ್ಯವಸ್ಥಿತ ಸಂಚು ) ಮತ್ತು ನ್ಯಾಯಾಲಯ ವ್ಯಾಪ್ತಿ ಬಗ್ಗೆ ವಿವರಿಸಿದರು. ಪಿಎಂಎಲ್ ಕಾಯಿದೆಯ ಜೊತೆಗೆ 120B ಸೆಕ್ಷನ್ ಸೇರ್ಪಡೆ ಕುರಿತು ಆರೋಪಿ ಸಚಿನ್ ನಾರಾಯಣ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಉಲ್ಲೇಖ ಮಾಡಿದರು.
ಚಾರ್ಜ್ ಶೀಟ್ ಜತೆಗೆ ಟ್ರಂಕ್‌ನಲ್ಲಿ ಕೋರ್ಟ್‌ಗೆ ಡಿಕೆಶಿಯ ಆಸ್ತಿ ಲೆಕ್ಕ ಕೊಟ್ಟ ಇಡಿ
ಒಟ್ಟು ಮೂರು ಹೈ ಕೋರ್ಟ್‌ಗಳ ಆದೇಶಗಳ ಉಲ್ಲೇಖ ಮಾಡಿ 120B ಸೇರ್ಪಡೆ ಮಾಡಿರುವ ಕಾರಣಗಳ ಕುರಿತು ವಾದ ಮಾಡಿದ ವಕೀಲರು, ಆರೋಪಿಗಳ ಸಂಚಿನ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಸಮಗ್ರವಾಗಿ ಉಲ್ಲೇಖಿಸಲಾಗಿದೆ. ಅಲ್ಲದೇ ದೆಹಲಿಯ ಸಬ್ದರಜಂಗ್ ಎನ್ಕ್ಲೇವ್ ಪ್ಲ್ಯಾಟ್ ನಲ್ಲಿ 8.5 ಕೋಟಿ ಹಣ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿ ಇಡಿ ವ್ಯಾಪ್ತಿಯ ಬಗ್ಗೆ ವಿವರಿಸಿದರು. ಇ ಡಿ ವಕೀಲರ ವಾದ ಕೇಳಿದ ವಿಶೇಷ ನ್ಯಾಯಾಲಯ, ಮೇ 31ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿತು.
2019ರಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಐಟಿ ಅಧಿಕಾರಿಗಳು ಡಿ.ಕೆ.ಶಿ ಮನೆ ಮೇಲೆ ದಾಳಿ ಮಾಡಿದ್ದರು. ಈ ಸಂಬಂಧ ಎರಡೂವರೆ ವರ್ಷದ ಬಳಿಕೆ ಆರೋಪ ಪಟ್ಟಿ ತಯಾರಿಸಿದ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯ ರೋಸ್ ಅವೆನ್ಯೂ ಕೋರ್ಟ್‌ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. 2019ರಲ್ಲಿ ಡಿಕೆಶಿ ಹಾಗೂ ಆಪ್ತರ ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ 8 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಬಳಿಕ ಡಿಕೆಶಿ ವಿರುದ್ಧ ಪ್ರಕರಣ ಇಡಿಗೆ ವರ್ಗಾವಣೆಗೊಂಡಿತ್ತು. ಇಡಿ ಅಧಿಕಾರಿಗಳು ಡಿಕೆಶಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಕೇಸ್, ವಿಚಾರಣೆಯನ್ನು ಮೇ.31ಕ್ಕೆ ಮುಂದೂಡಿದ ಕೋರ್ಟ್
ಇಡಿ ಹೊರಿಸಿದ್ದ ಆರೋಪಗಳು :
ಡಿ.ಕೆ ಶಿವಕುಮಾರ್ 800 ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರ ಹೆಸರಿನಲ್ಲಿ 200 ಕೋಟಿ ಠೇವಣಿ ಇದೆ. 20ಕ್ಕೂ ಅಧಿಕ ಬ್ಯಾಂಕ್, 317 ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ ಮೂಲಕ ಅಕ್ರಮ ಹಣ ವರ್ಗಾವಣೆ. ಮಗಳ ಹೆಸರಿನಲ್ಲಿ 108 ಕೋಟಿ ಅಕ್ರಮ ವ್ಯವಹಾರ ಪುತ್ರಿಗೆ 48 ಕೋಟಿ ಸಾಲ ಇದೆ, ಆದರೆ ಸಾಲದ ಮೂಲ ತಿಳಿಸಿಲ್ಲ.
ದೆಹಲಿ ನಿವಾಸದ 8.59 ಕೋಟಿ ಹಣಕ್ಕೆ ಲೆಕ್ಕ ಕೊಟ್ಟಿಲ್ಲ . ಡಿ.ಕೆ ಶಿ ಹೆಸರಲ್ಲಿ 24, ಸಂಸದ ಡಿಕೆ ಸುರೇಶ್ ಹೆಸರಲ್ಲಿ 27 , ತಾಯಿ ಹೆಸರಲ್ಲಿ 38 ಆಸ್ತಿಗಳಿವೆ. ಡಿ.ಕೆ ಕುಟುಂಬದ ಬಳಿ ಒಟ್ಟು 300 ಆಸ್ತಿಗಳಿವೆ. ಡಿ.ಕೆ ಶಿವಕುಮಾರ್ ವ್ಯವಹಾರದಲ್ಲಿ ಅಕ್ರಮ ಆಸ್ತಿ ಗಳಿಕೆ ಮತ್ತು ಹವಾಲ ದಂದೆ ನಡೆದಿರುವ ಅನುಮಾನಗಳಿವೆ ಅಂಥ ದೆಹಲಿ ಹೈಕೋರ್ಟ್ ನಲ್ಲಿ ಬೇಲ್ ಅರ್ಜಿಯ ಮೇಲೆ ವಾದ- ಪ್ರತಿವಾದ ನಡೆಯುತ್ತಿದ್ದಾಗ ಇ ಡಿ ಡಿಕೆಶಿವಕುಮಾರ್ ಅವರ ಮೇಲೆ ಆರೋಪ ಮಾಡಿತ್ತು.
ಇದನ್ನೂ ಓದಿ: ಡಿಕೆಶಿ ರಾಜಕೀಯ ಭವಿಷ್ಯಕ್ಕೆ ಮುಳುವಾಗುತ್ತಾ ಅಕ್ರಮ ಹಣ ವರ್ಗಾವಣೆ ಕೇಸ್..?
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ ಸಂಬಂಧ ದಾಳಿ ನಡೆಸಲಾಗಿತ್ತು. ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ, ಅಹ್ಮದ್ ಪಟೇಲ್ ಗೆಲುವಿನ ಸಲುವಾಗಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಡಿಕೆಶಿ ಕಸ್ಟಡಿಯಲ್ಲಿಟ್ಟ ಸಂದರ್ಭದ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಆದರೆ ದೆಹಲಿಯ ಡಿಕೆಶಿ ನಿವಾಸದಲ್ಲಿ ನಗದು ಲಭ್ಯವಾಗಿತ್ತು. ಈ ಸಂಬಂಧ ಡಿಕೆಶಿ ಅವರನ್ನು ಬಂಧಿಸಲಾಗಿತ್ತು. ಇದೀಗ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲಿ ಶಿವಕುಮಾರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ