
ಮುಂಬೈ(ಡಿ.06): ಬೆಳಗಾವಿ ಗಡಿ ವಿಚಾರ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಎಂಇಎಸ್ ಪುಂಡರಿಂದ ಕರ್ನಾಟಕ ವಾಹನ ಜಖಂಗೊಳಿಸಿದ ಬೆನ್ನಲ್ಲೇ ಇತ್ತ ಕರವೇ ಕಾರ್ಯಕರ್ತರು ಇಂದು ಮಹಾರಾಷ್ಟ್ರ ವಾಹನ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ದೂರವಾಣಿ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬೆಳವಣಿಗೆ ನಡುವೆ ಮಹಾರಾಷ್ಟ್ರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿಕೆ ಇದೀಗ ಕನ್ನಡಿಗರ ಕೆರಳಿಸಿದೆ. ಬೆಳಗಾವಿ ಗಡಿ ವಿಚಾರದಲ್ಲಿ 24 ಗಂಟೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಘಟನೆಗಳಿಗೆ ಕರ್ನಾಟಕ ಹಾಗೂ ಕೇಂದ್ರ ಸರ್ಕಾರ ಹೊಣೆ ಎಂದು ಶರದ್ ಪವಾರ್ ಎಚ್ಚರಿಸಿದ್ದಾರೆ.
ಕರ್ನಾಟಕ ಸರ್ಕಾರ ಮರಾಠಿಗರ ತಾಳ್ಮೆ ಪರೀಕ್ಷಿಸಬೇಡಿ. ತಕ್ಷಣವೇ ಪರಿಸ್ಥಿತಿಯನ್ನು ನಿಭಾಯಿಸಿ ಎಂದು ಕರ್ನಾಟಕಕ್ಕೆ ಪವಾರ್ ತಾಕೀತು ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ಕಿರಿಕ್ ನಡೆಯುತ್ತಿದೆ. ಪರಿಸ್ಥಿತಿ ಕೈಮೀರು ಮಟ್ಟಕ್ಕೆ ಬಿಟ್ಟಿರುವುದು ತಪ್ಪು. ಈ ವಿಚಾರದಲ್ಲಿ ಮಹಾರಾಷ್ಟ್ರ ವಾಹನಗಳ ಮೇಲಿನ ದಾಳಿಗೆ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶರದ್ ಪವಾರ್ ಹೇಳಿದ್ದಾರೆ.
Border dispute: ಮಹಾಸಚಿವರ ತಡೆಯಲು ಕರವೇ ಸಾವಿರಾರು ಕಾರ್ಯಕರ್ತರು ಬೆಳಗಾವಿಗೆ!
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಈ ವಿಚಾರದಲ್ಲಿ ಸರ್ವ ಪಕ್ಷೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪ್ರತಿಪಕ್ಷಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಈ ವಿಚಾರದಲ್ಲಿ ಮಹಾರಾಷ್ಟ್ರದ ಎಲ್ಲಾ ಶಾಸಕರ, ಸಚಿವರು, ಸಂಸದರು ಜೊತೆಯಾಗಿ ನಿಂತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಎಂಇಎಸ್ ವಿರುದ್ಧ ಕನ್ನಡ ಸಂಘಟನೆಗಳ ಕಿಡಿ
ಮಹಾರಾಷ್ಟ್ರದಲ್ಲಿ ಎಂಇಎಸ್ ಕಿಡಿಗೇಡಿಗಳ ವರ್ತನೆ ಖಂಡಿಸಿ, ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ವಿರೋಧಿಸಿ, ಕನ್ನಡ ಹೋರಾಟಗಾರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಕರ್ನಾಟಕ ಏಕೀಕರಣ ಸಮಿತಿಯ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉರುಳು ಸೇವೆ ನಡೆಸಿದರು. ಕನ್ನಡಿಗರಿಗೆ ನ್ಯಾಯ ನೀಡಲು ಆಗ್ರಹಿಸಿ ಘೋಷಣೆ ಕೂಗಿದರು. ಚನ್ನಮ್ಮ ವೃತ್ತದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರಾರಯಲಿ ನಡೆಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಸರ್ಕಾರ ಕನ್ನಡಿಗರ ವಿರುದ್ಧವೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು. ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಿಡಿದಿದ್ದಕ್ಕೆ ವಿದ್ಯಾರ್ಥಿಯನ್ನು ಅವಮಾನಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕನ್ನಡಿಗರ ಹಿತರಕ್ಷಣೆಗೆ ಮುಂದಾಗದ ಜನಪ್ರತಿನಿಧಿಗಳ ಕನ್ನಡ ವಿರೋಧಿ ನಡೆಯನ್ನು ಖಂಡಿಸಿದರು.
ಧಮ್ಕಿ ಹಾಕಬೇಡಿ, ಬೆಳಗಾವಿಗೆ ಬಂದೇ ಬರ್ತೇವೆ!: ಗಡಿ ಸಚಿವ ಚಂದ್ರಕಾಂತ ಪಾಟೀಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ