
ಅಹಮದಾಬಾದ್: ಗುಜರಾತ್‌ನಲ್ಲಿ ಹೆಸರೇ ಗೊತ್ತಿಲ್ಲದ, ಚುನಾವಣೆಗೆ ಅಭ್ಯರ್ಥಿಗಳನ್ನೇ ಹಾಕದ ರಾಜಕೀಯ ಪಕ್ಷಗಳಿಗೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಪ್ರಕರಣದ ಹಿಂದೆ ತೆರಿಗೆ ವಂಚನೆಯ ದೊಡ್ಡ ದಂಧೆ ನಡೆಯುತ್ತಿರುವ ಆಘಾತಕಾರಿ ಅಂಶ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಎರಡು ಚಿಕ್ಕಪುಟ್ಟ ಪಕ್ಷಗಳಿಗೆ 680 ಕೋಟಿ ರು.ನಷ್ಟು ಭಾರೀ ದೇಣಿಗೆ ಸಂದಾಯವಾಗಿದ್ದ ಹಿನ್ನೆಲೆ ಪತ್ತೆ ಮಾಡಲು ಹೊರಟ ತನಿಖಾ ಸಂಸ್ಥೆಗೆ ಈ ವಿಷಯ ಕಂಡುಬಂದಿದೆ.
ಈ ಅಕ್ರಮ ದಂಧೆಯಲ್ಲಿ ಸರ್ಕಾರಕ್ಕೆ 200 ಕೋಟಿ ರು.ಗೂ ಹೆಚ್ಚಿನ ತೆರಿಗೆ ವಂಚನೆಯ ಶಂಕೆ ವ್ಯಕ್ತವಾಗಿದೆ.
ರಾಜಕೀಯ ಪಕ್ಷಕ್ಕೆ ದೇಣಿಗೆಯಾಗಿ ನೀಡಲಾದ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಇದರ ಲಾಭ ಪಡೆಯಲೆಂದೇ ಕೆಲ ವ್ಯಕ್ತಿಗಳು ಅಥವಾ ಕಂಪನಿಗಳು ಬೇರೆ ಹೆಸರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಅವುಗಳಿಗೆ ದೇಣಿಗೆ ನೀಡುತ್ತಾರೆ. ಹೀಗೆ ಹಣ ಪಡೆದ ಪಕ್ಷಗಳು, ನಕಲಿ ಬಿಲ್ ಸೃಷ್ಟಿ ಚುನಾವಣಾ ವೆಚ್ಚ ಮಾಡಿದ್ದಾಗಿ ತೋರಿಸುತ್ತವೆ. ಜೊತೆಗೆ ತಾವು ಹಣ ಪಡೆದಿದ್ದಕ್ಕೆ ಕಮಿಷನ್ ಪಡೆದುಕೊಂಡು ಬಾಕಿ ಹಣವನ್ನು ಯಾರು ದೇಣಿಗೆ ನೀಡಿದ್ದರೋ ಅವರಿಗೆ ‘ಅಂಗಾಡಿಯಾ’ ವ್ಯವಸ್ಥೆ ಮೂಲಕ ಮರಳಿಸುತ್ತಾರೆ.
ದೇಣಿಗೆ ನೀಡಿದ ಹಣಕ್ಕೆ ಕಂಪನಿಗಳು ತೆರಿಗೆ ನೀಡಬೇಕಿಲ್ಲ. ಹೀಗೆ ದೇಣಿಗೆ ನೀಡಿದ್ದಾಗಿ ಸುಳ್ಳು ಲೆಕ್ಕ ನೀಡಿ ಬಳಿಕ ಅದೇ ಹಣವನ್ನು ಕಂಪನಿಗಳು ನಕಲಿ ಪಕ್ಷಗಳ ಮೂಲಕ ಹಿಂಪಡೆಯುತ್ತಿದ್ದವು. ಈ ಮೂಲಕ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವ ಲೆಕ್ಕಾಚಾರ.
ಅಂಗಾಡಿಯಾ ಅಂದರೆ?:
ಇದು ಗುಜರಾತ್‌ನಲ್ಲಿ ಶತಮಾನಗಳಿಂದ ಬಳಕೆಯಲ್ಲಿರುವ ಒಂದು ವಿಶ್ವಾಸಾರ್ಹ ಪದ್ಧತಿ. ಇದು. ಹಣ, ಒಡವೆಗಳನ್ನು ವ್ಯಕ್ತಿಗಳ ಮೂಲಕ ಯಾವುದೇ ದಾಖಲೆ ಇಲ್ಲದೆ ಒಬ್ಬರಿಂದ ಇನ್ನೊಬ್ಬರಿಗೆ, ಒಂದೂರಿನಿಂದ ಇನ್ನೊಂದು ಊರಿಗೆ ತಲುಪಿಸುವ ವಿಧಾನ. ಇದೇ ವ್ಯವಸ್ಥೆ ಬಳಸಿಕೊಂಡು ಇಲ್ಲೂ ಕಂಪನಿಗಳು ಅಕ್ರಮ ನಡೆಸಿದ್ದವು.
ಬೆಳಕಿಗೆ ಬಂದಿದ್ದು ಹೇಗೆ?:
2022-23ರಲ್ಲಿ ಕೆಲ ರಾಜಕೀಯ ಪಕ್ಷಗಳ ಮೇಲೆ ನಡೆದ ಐಟಿ ದಾಳಿ ವೇಳೆ ಅಕ್ರಮ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ತನ್ನ ವರದಿಯಲ್ಲಿ ಈ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ಅಲ್ಲದೆ ಆದಾಯ ತೆರಿಗೆ ಇಲಾಖೆ ನೀಡಿದ ದೂರಿನ ಆಧಾರದಲ್ಲಿ 4 ಪಕ್ಷಗಳ ಹಾಗೂ ಲೆಕ್ಕ ಪರಿಶೋಧಕರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ