
ನವದೆಹಲಿ (ಮೇ.22): ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತುಕತೆ ನಡೆಸುವ ಸಲುವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶನಿವಾರ ನವದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಧಾನ ಪರಿಷತ್ ಟಿಕೆಟ್ ಹಂಚಿಕೆ ಬಗ್ಗೆ ಹಲವಾರು ಹೆಸರುಗಳ ಬಗ್ಗೆ ಚರ್ಚೆಯಾಗಿದೆ. ಆದರೆ ಯಾರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆಗಿದೆ ಎಂದು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲರ ಬಗ್ಗೆಯೂ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಹೈಕಮಾಂಡ್ ತಿರ್ಮಾನ ಕೈಗೊಳ್ಳಲಿದೆ ಎಂದರು.
ದಿಲ್ಲಿಗೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್: ಕಾಂಗ್ರೆಸ್ ವರಿಷ್ಠರ ಬುಲಾವ್!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿಲ್ಲ. ಅವರ ಸೂಚನೆಯಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಜೊತೆಗೆ ಮಾತ್ರ ಚರ್ಚೆ ನಡೆಸಲಾಗಿದೆ ಎಂದರು. ಇದೇ ವೇಳೆ ರಾಜ್ಯಸಭೆ ಟಿಕೆಟ್‌ಗಳ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಎರಡನೇ ಅಭ್ಯರ್ಥಿ ವಿಚಾರವಾಗಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಹೈಕಮಾಂಡೇ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಪಾಪದ ಕೊಡ ನಮ್ಮದಾ ನಿಮ್ಮದಾ?-ಅಶೋಕಗೆ ಸಿದ್ದು ತಿರುಗೇಟು: ಬೆಂಗಳೂರು ಪ್ರವಾಹ ಕಾಂಗ್ರೆಸಿಗರ ಪಾಪದ ಕೊಡ ಎಂಬ ಕಂದಾಯ ಸಚಿವ ಆರ್.ಅಶೋಕ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಂತ್ರಿಯಾಗಿ ನೀವು ಎಷ್ಟುಕೆಲಸ ಮಾಡಿದ್ದೀರಿ? ಪಾಪದ ಕೊಡ ನಮ್ಮದಾ ನಿಮ್ಮದಾ ಎಂದು ಪ್ರಶ್ನಿಸಿದ್ದಾರೆ. ಸುದ್ದಿಗಾರರ ವೇಳೆ ಮಾತನಾಡುವ ವೇಳೆ ಆರ್.ಅಶೋಕ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಸಿದ್ದರಾಮಯ್ಯ, ಅಶೋಕಾ ನೀನು ಏನು ಮಾಡಿದ್ದೀಯಾ ಎಂದು ಹೇಳಪ್ಪ. ನೀನು ಶಾಸಕ ಆಗಿದ್ದೀಯಾ, ಮಂತ್ರಿ ಆಗಿದ್ದೀಯಾ, ನೀನು ಏನು ಮಾಡಿದೆ ಹೇಳು? ಸುಮ್ಮನೆ ಪಾಪಾದ ಕೊಡ ಅಂತಾ ಹೇಳಿ ಜಾರಿಕೊಳ್ಳಬೇಡ ಎಂದರು.
Kalaburagi: ಬಿಜೆಪಿಯವರು ದಲಿತ ವಿರೋಧಿ: ಸಿದ್ದರಾಮಯ್ಯ ವಾಗ್ದಾಳಿ
ನಮ್ಮನ್ನು ಪ್ರಶ್ನೆ ಮಾಡುವ ಮೊದಲು ನೀನು ಮಾಡಿರುವ ಕೆಲಸದ ಬಗ್ಗೆ ಹೇಳು. ನಾನು ಬೆಂಗಳೂರು ಅಭಿವೃದ್ಧಿಗೆ 1217 ಕೋಟಿ ಅನುದಾನ ನೀಡಿದ್ದೇನೆ. 50%ರಷ್ಟು ಕಾಲುವೆಗೆ ತಡೆ ಗೋಡೆ ನಿರ್ಮಿಸಿದ್ದೆ. ನೀವು ಎಷ್ಟು ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ತಪ್ಪು ಮಾಡಿದ್ರೇ ನೀವು ಸರಿ ಮಾಡಬಹುದಾಗಿತ್ತು ತಾನೆ? ಬಿಜೆಪಿಯವರು ಮೇಯರ್ ಇದ್ರು ತಾನೆ? ಮೂರು ವರ್ಷದಿಂದ ಸರ್ಕಾರ ಮಾಡುತ್ತಿದ್ದಿರಿ ತಾನೆ? ನಮ್ಮ ಸರ್ಕಾರದ ಅವಧಿ ಮುಗಿದ ಬಳಿಕ ಬೆಂಗಳೂರಿಗೆ ಬಿಜೆಪಿ ಸರ್ಕಾರ ಒಂದು ಪೈಸೆ ಕೊಟ್ಟಿಲ್ಲ. ರಾಜಾ ಕಾಲುವೆಗಳ ಹೂಳೆತ್ತಿಲ್ಲ. ಹಾಗಾಗಿ ನೀರು ನುಗ್ಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ