7 ವರ್ಷಗಳ ಹೋರಾಟಕ್ಕೆ ಸಿಕ್ತು ನ್ಯಾಯ; ಗಲ್ಲು ಶಿಕ್ಷೆ ಪ್ರಕ್ರಿಯೆ ಹೀಗಿತ್ತು

By Kannadaprabha NewsFirst Published Mar 20, 2020, 12:34 PM IST
Highlights

2012 ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್‌ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆ ಖಾಯಂ ಆಗಿದೆ. ಈ ಹಿನ್ನೆ​ಲೆ​ಯಲ್ಲಿ ನಿರ್ಭಯಾ ಪ್ರಕ​ರಣ ಹಾಗೂ ಗಲ್ಲು ಶಿಕ್ಷೆಯ ಪ್ರಕ್ರಿಯೆ ಕುರಿತ ವಿಸ್ತೃತ ಮಾಹಿತಿ ಇಲ್ಲಿ​ದೆ.

2012ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್‌ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆ ಖಾಯಂ ಆಗಿದೆ. ಈ ಹಿನ್ನೆ​ಲೆ​ಯಲ್ಲಿ ನಿರ್ಭಯಾ ಪ್ರಕ​ರಣ ಹಾಗೂ ಗಲ್ಲು ಶಿಕ್ಷೆಯ ಪ್ರಕ್ರಿಯೆ ಕುರಿತ ವಿಸ್ತೃತ ಮಾಹಿತಿ ಇಲ್ಲಿ​ದೆ.

ಏನಿದು ನಿರ್ಭಯಾ ಪ್ರಕರಣ?

ದಿಲ್ಲಿಯಲ್ಲಿ 2012ರ ಡಿಸೆಂಬರ್‌ 6 ರಂದು ರಾತ್ರಿ ಖಾಸಗಿ ಬಸ್‌ನಲ್ಲಿ ಸ್ನೇಹಿತನ ಜೊತೆ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮನೆಗೆ ಮರಳುತ್ತಿದ್ದಳು. ಈಕೆಯ ಮೇಲೆ ಬಸ್ಸಿನ ಚಾಲಕ ಹಾಗೂ ಆತನ ಐವರು ಸ್ನೇಹಿತರು ಬಸ್ಸಲ್ಲೇ ಭೀಕರವಾಗಿ ಅತ್ಯಾಚಾರ ಎಸಗಿ, ಬಸ್ಸಿನಿಂದ ಹೊರಗೆಸೆದಿದ್ದರು. ಬಳಿಕ ಸಂತ್ರಸ್ತೆಯನ್ನು ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಿ, ನಂತರ ಸಿಂಗಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲ​ಕಾ​ರಿ​ಯಾ​ಗದೆ ಡಿ.29ರಂದು ಸಂತ್ರಸ್ತೆ ಸಿಂಗಾಪುರದಲ್ಲಿ ಅಸುನೀಗಿದ್ದಳು.

ಶಿಕ್ಷೆಗೂ ಮುನ್ನ ನೇಣಿಗೇರಿಸದಂತೆ ಗೋಗರೆದ ನಿರ್ಭಯಾ ರೇಪಿಸ್ಟ್..!

ಪ್ರಕರಣದ ದೋಷಿಗಳು

ರಾಮ್‌ ಸಿಂಗ್‌

ದಕ್ಷಿಣ ದೆಹಲಿಯ ಕೊಳಗೇರಿ ನಿವಾಸಿ ರಾಮ್‌ಸಿಂಗ್‌ (33) ವೃತ್ತಿಯಲ್ಲಿ ಚಾಲಕ. ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಘಟನೆಯ ಪ್ರಮುಖ ದೋಷಿ. ಅತ್ಯಾ​ಚಾರ ಸಂದ​ರ್ಭ​ದಲ್ಲಿ ಆ ಬಸ್ಸನ್ನು ಇವನೇ ಚಾಲನೆ ಮಾಡುತ್ತಿದ್ದ. ಹೀಗಾಗಿ, ಇವನ ವಿರುದ್ಧ ಸಾಮೂಹಿಕ ಅತ್ಯಾಚಾರ, ಸಾಕ್ಷ್ಯನಾಶ, ಅಪರಾಧೀಕರಣದ ಪಿತೂರಿ, ದರೋಡೆ ಹಾಗೂ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಎಂಬ ಪ್ರಕರಣಗಳನ್ನು ದಾಖಲಿಸಲಾಗಿತ್ತು. 2013ರ ಮಾ.21ರಂದು ತಿಹಾರ್‌ ಜೈಲಿನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಆತನ ಮೃತದೇಹ ಕಂಡುಬಂದಿತ್ತು.

ಅಕ್ಷಯ್‌ ಠಾಕೂರ್‌

31 ವರ್ಷದ ಬಿಹಾರಿ ವ್ಯಕ್ತಿ. ಬಸ್‌ ಕ್ಲೀನರ್‌ ಆಗಿದ್ದ. ದೆಹಲಿ ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ಐವರು ದುರುಳÜರ ಪೈಕಿ ಓರ್ವ. ಅರ್ಧದಲ್ಲೇ ಶಾಲೆ ಬಿಟ್ಟಿರುವ ಈತ ಜೀವನೋಪಾಯಕ್ಕಾಗಿ 2011ರಲ್ಲಿ ದೆಹಲಿಗೆ ವಲಸೆ ಬಂದಿದ್ದ. ಈ ಸಂದರ್ಭದಲ್ಲಿ ಬಸ್ಸಿನ ಕ್ಲೀನರ್‌ ಆಗಿ ಸೇರಿಕೊಂಡಿದ್ದ ಇವನು, ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದ. ಇವನ ವಿರುದ್ಧವೂ ಸಾಮೂಹಿಕ ಅತ್ಯಾಚಾರ, ಸಾಕ್ಷ್ಯನಾಶ, ಅಪರಾಧೀಕರಣದ ಪಿತೂರಿ, ದರೋಡೆ ಕೇಸ್‌ಗಳು ದಾಖಲಾಗಿತ್ತು.

ಪವನ್‌ ಗುಪ್ತಾ

ದೆಹಲಿ ಗ್ಯಾಂಗ್‌ ರೇಪ್‌ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ದೆಹಲಿ ಪೊಲೀಸರು, ಹಣ್ಣಿನ ವ್ಯಾಪಾರಿಯಾಗಿದ್ದ 19 ವರ್ಷದ ಪವನ್‌ ಗುಪ್ತನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು. ಇವನ ವಿರುದ್ಧವೂ ಯುವತಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ, ಸಾಕ್ಷ್ಯನಾಶ, ಅಪರಾಧೀಕರಣದ ಪಿತೂರಿ, ದರೋಡೆ ಸೇರಿ ಇನ್ನಿತರ ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ.

ನೇಣಿಗೆ ಮೊದಲು ಸ್ನಾನ, ತಿಂಡಿ, ಊಟ ನಿರಾಕರಿಸಿದ ರೇಪ್ ರಕ್ಕಸರು..!

ವಿನಯ್‌ ಶರ್ಮಾ

26 ವರ್ಷದವ, ದೆಹಲಿಯ ಕೊಳಗೇರಿ ನಿವಾಸಿ. ದಕ್ಷಿಣ ದೆಹಲಿಯ ರವಿದಾಸ್‌ ಕೊಳಗೇರಿ ನಿವಾಸಿಯಾಗಿರುವ 20 ವರ್ಷದ ವಿನಯ್‌ ಶರ್ಮಾ ಮಾತ್ರವೇ ದಿಲ್ಲಿ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಭಾಗಿಯಾದ ಹಾಗೂ ತಕ್ಕಮಟ್ಟಿಗೆ ಇಂಗ್ಲಿಷ್‌ ಭಾಷೆ ಬಲ್ಲ ದೋಷಿ. ಇವನ ವಿರುದ್ಧ ಯುವತಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ, ಸಾಕ್ಷ್ಯನಾಶ, ಅಪರಾಧೀಕರಣದ ಪಿತೂರಿ, ದರೋಡೆ ಸೇರಿ ಇನ್ನಿತರ ಕೇಸ್‌ ದಾಖಲಾಗಿವೆ. ಆದರೆ, ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ಇವನು, ನಿರ್ಭಯಾ ಘಟನೆ ನಡೆದಾಗ, ತಾನು ಮತ್ತು ಮತ್ತೋರ್ವ ದೋಷಿಯಾದ ಪವನ್‌ ಗುಪ್ತಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆವು ಎಂದು ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದ.

ಮುಕೇಶ್‌ ಸಿಂಗ್‌

ಇನ್ನು ಈತ ನಿರ್ಭಯಾ ಗ್ಯಾಂಗ್‌ ರೇಪ್‌ ಪ್ರಕರಣ ನಡೆದ ಬಸ್ಸಿನ ಚಾಲಕ ರಾಮ್‌ಸಿಂಗ್‌ ಸಹೋದರನಾಗಿದ್ದು, ರಾಮ್‌ದಾಸ್‌ ಕೊಳಗೇರಿ ನಿವಾಸಿಯಾಗಿದ್ದಾನೆ. ಆದರೆ, ಈ ನಿರ್ಭಯಾ ಗ್ಯಾಂಗ್‌ರೇಪ್‌ನಲ್ಲಿ ತನ್ನ ಪಾತ್ರವೇನೂ ಇಲ್ಲ. ಯುವತಿ ಮೇಲೆ ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ನಡೆಸಿಲ್ಲ. ಆದರೆ, ಈ ಘಟನೆ ವೇಳೆ ತಾನು ಬಸ್ಸನ್ನು ಮಾತ್ರವೇ ಚಾಲನೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದ.

ಅಪ್ರಾಪ್ತ ಯುವಕ

ಉತ್ತರ ಪ್ರದೇಶ ಮೂಲದ ಈ ಅಪ್ರಾಪ್ತ ಯುವಕ, ಕುಟುಂಬದ ಬಡತನದಿಂದಾಗಿ 11 ವರ್ಷದವನಿದ್ದಾಗಲೇ ಮನೆ ಬಿಟ್ಟು ಬಂದಿದ್ದ. ಇವನ ತಂದೆ ಮಾನಸಿಕ ಅಸ್ವಸ್ತನಾಗಿದ್ದ ಕಾರಣ ಕುಟುಂಬದ ಪರಿಸ್ಥಿತಿ ಹದಗೆಟ್ಟಿತ್ತು.

ನಿರ್ಭಯಾ ಹಂತಕರ Hangmanಗೆ 1 ಲಕ್ಷ ರೂ; ನುಡಿದಂತೆ ನಡೆದ ಜಗ್ಗೇಶ್!

ಹೀಗಾಗಿ, ಕುಟುಂಬಕ್ಕೆ ಆಸರೆಯಾಗಲಿ ಎಂಬ ಕಾರಣಕ್ಕಾಗಿ, ದುಡಿಯುವ ಸಲುವಾಗಿ ದೆಹಲಿಗೆ ಬಂದಿದ್ದ ಈತ ನಿರ್ಭಯಾ ಗ್ಯಾಂಗ್‌ರೇಪ್‌ ಕೃತ್ಯದಲ್ಲಿ ಭಾಗಿಯಾಗಿದ್ದ. ಆದರೆ, ಅಪ್ರಾಪ್ತನಾದ ಕಾರಣ 3 ವರ್ಷ ಬಾಲಾಪರಾಧಿ ಕೇಂದ್ರದಲ್ಲಿ 3 ವರ್ಷ ಶಿಕ್ಷೆ ಅನುಭವಿಸಿ, 2015ರ ಡಿಸೆಂಬರ್‌ನಲ್ಲೇ ಬಿಡುಗಡೆಯಾಗಿದ್ದಾನೆ.

ಗಲ್ಲು ಜಾರಿ ಶಿಕ್ಷೆ ಪ್ರಕ್ರಿಯೆ ಹೇಗಿರುತ್ತದೆ

-ಶುಕ್ರವಾರ ಮುಂಜಾನೆ ಅಪರಾಧಿಗಳನ್ನು ನಿದ್ರೆಯಿಂದ ಎಬ್ಬಿಸಲಾಗುತ್ತದೆ.

-ದೋಷಿಗಳ ಆಸೆಯಂತೆ ಬಿಸಿ ನೀರು ಅಥವಾ ತಣ್ಣೀರಿನಲ್ಲಿ ಸ್ನಾನದ ಅವಕಾಶ.

-ಅಪರಾಧಿಗಳ ನೆಚ್ಚಿನ ಆಹಾರಗಳನ್ನು ಪೂರೈಸಲಾಗುತ್ತದೆ.

-ಜೈಲಿನ ಆವರಣದಲ್ಲಿ ಸುತ್ತಾಡಲು ಅವ​ಕಾ​ಶ. ತನ್ಮೂಲಕ ಜೀವನದ ಸುಮಧುರ ನೆನಪನ್ನು ಸ್ಮರಿಸಲು ಅನುವು.

-ಆತ್ಮಶಾಂತಿಗಾಗಿ ಅಭಿರುಚಿಗೆ ತಕ್ಕುದಾದ ಧಾರ್ಮಿಕ ಗ್ರಂಥಗಳು ಅಥವಾ ಇಷ್ಟದ ದೇವರ ಪ್ರಾರ್ಥನೆಗೆ ಅವಕಾಶ.

-ಅಪರಾಧಿಗಳ ಆರೋಗ್ಯ ಪರಿಸ್ಥಿತಿ ಕುರಿತು ವೈದ್ಯರು ಪರಿಶೀಲಿಸುತ್ತಾರೆ. ಆರೋಗ್ಯ ಸರಿ ಇದ್ದರೆ ನೇಣಿಗೇರಿಸುವ ಪ್ರಕ್ರಿಯೆ ಆರಂಭವಾಗುತ್ತದೆ.

-ನೇಣುಗಂಬಕ್ಕೆ ಕರೆದೊಯ್ಯುವ ಮುನ್ನ ಮುಖವನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ನೇಣುಗಂಬ ಬಳಿ ಕಾಲಿಗೆ ಹಗ್ಗ ಕಟ್ಟಲಾಗುತ್ತದೆ

- ಕಾರ್ಯನಿರ್ವಾಹಕ ಮ್ಯಾಜಿಸ್ಪ್ರೇಟ್‌ ಅವರು ಅಪರಾಧಿಯನ್ನು ಹೆಸರಿನಿಂದ ಗುರುತಿಸುತ್ತಾರೆ. ಗಲ್ಲಿಗೇರಿಸಲು ಹ್ಯಾಂಗ್‌ಮನ್‌ಗೆ ಸೂಚಿಸುತ್ತಾರೆ.

- ಸಾವನ್ನು ವೈದ್ಯರು ಖಚಿತಪಡಿಸಿಕೊಳ್ಳುತ್ತಾರೆ. ಗಲ್ಲು ಶಿಕ್ಷೆ ಪ್ರಕ್ರಿಯೆ ಪೂರ್ಣಗೊಂಡು, ಮೃತದೇಹ ರವಾನೆಯಾಗುವವರೆಗೆ ಇತರೆ ಕೈದಿಗಳನ್ನು ಸೆಲ್‌ನಿಂದ ಹೊರಬಿಡುವುದಿಲ್ಲ.

-ಅಪರಾಧಿಗಳನ್ನು ನೇಣಿಗೇರಿಸುವ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಅಪರಾಧಿಗಳ ಕುಟುಂಬಸ್ಥರಿಂದ ಸಮಸ್ಯೆಯಾಗಬಹುದೆಂದು ಗೌಪ್ಯತೆ ಕಾಪಾಡಲಾಗುತ್ತದೆ.

ಒಮ್ಮೆಗೆ ನಾಲ್ಕೂ ಜನರಿಗೆ ಗಲ್ಲು ಶಿಕ್ಷೆ!

ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳನ್ನೂ ಒಮ್ಮೆಗೆ ಗಲ್ಲಿಗೆ ಹಾಕಲಾಗುತ್ತದೆ ಎನ್ನಲಾಗಿದೆ. ಇದುವರೆಗೆ ತಿಹಾರ್‌ ಜೈಲಿನಲ್ಲಿ ಒಂದು ನೇಣುಗಂಬ ಮಾತ್ರ ಇತ್ತು. ಆದರೆ ಇತ್ತೀಚೆಗಷ್ಟೇ ಅಲ್ಲಿ ಹೊಸದಾಗಿ ಮೂರು ನೇಣುಗಂಬಗಳನ್ನು ನಿರ್ಮಿಸಲಾಗಿದೆ. ಇದು ಒಮ್ಮೆಗೆ ನಾಲ್ವರಿಗೂ ನೇಣು ಶಿಕ್ಷೆ ಹಾಕಲಾಗುತ್ತದೆ ಎಂಬ ವರದಿಗಳಿಗೆ ಪುಷ್ಟಿನೀಡಿದೆ. ಇದು ನಿಜವಾದಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ವರಿಗೆ ಒಮ್ಮೆಗೆ ಗಲ್ಲು ಶಿಕ್ಷೆ ವಿಧಿಸಿದಂತೆ ಆಗಲಿದೆ.

ನಿರ್ಭಯಾ ಪ್ರಕರಣದ ಟೈಮ್‌ಲೈನ್‌

2012ರ ಡಿ.16​: ದೆಹಲಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲಿ ಅಪ್ರಾಪ್ತ ಸೇರಿ ಒಟ್ಟು ಆರು ದುರುಳರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ. ಯುವತಿ ಮೇಲೆ ಮಾರಣಾಂತಿಕ ಹಲ್ಲೆ.

2013ರ ಜ.3: ಈ ಪ್ರಕರಣ ಸಂಬಂಧ ದೆಹಲಿ ಪೊಲೀಸರಿಂದ ಐವರು ಆರೋಪಿಗಳ ಚಾಜ್‌ರ್‍ಶೀಟ್‌ ಸಲ್ಲಿಕೆ.

2013ರ ಮಾ.21: ಈ ಕೇಸ್‌ನ ಐವರು ಆರೋಪಿಗಳಲ್ಲಿ ಓರ್ವನಾದ ಬಸ್‌ ಚಾಲಕ ರಾಮ್‌ ಸಿಂಗ್‌ ಭಾರೀ ಬಿಗಿ ಭದ್ರತೆಯಿರುವ ತಿಹಾರ್‌ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ.

2013ರ ಸೆ.13: ನಾಲ್ವರಿಗೆ ತ್ವರಿತ ನ್ಯಾಯಾಲಯದಿಂದ ಗಲ್ಲು ಶಿಕ್ಷೆ. 2015ರ ಮಾ.15ರಂದು ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ತ್ವರಿತ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್‌.

2015ರ ಡಿ.20: ವರ್ಷಗಳ ಕಾಲ ಬಾಲಾಪರಾಧಿ ಕೇಂದ್ರದಲ್ಲಿದ್ದ ಪ್ರಕರಣದ ದೋಷಿಯ ಬಿಡುಗಡೆಗೆ ತಡೆ ಹೇರಲು ದೆಹಲಿ ನ್ಯಾಯಾಲಯ ನಕಾರ.

2017ರ ಮಾ.27: ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್‌.

2018ರ ಮೇ 05: ನಾಲ್ವರು ದೋಷಿಗಳ ಗಲ್ಲು ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌.

2018ರ ಡಿ.13: ಪ್ರಕರಣದ ನಾಲ್ವರು ದೋಷಿಗಳಿಗೆ ತ್ವರಿತವಾಗಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೋರಿ ಸಂತ್ರಸ್ತೆ ನಿರ್ಭಯಾ ಪೋಷಕರು ಪಟಿಯಾಲ ಕೋರ್ಟ್‌ ಮೊರೆ

2019ರ ಡಿ.02: ದೆಹಲಿ ಸರ್ಕಾರದ ಶಿಫಾರಸ್ಸಿನ ಮೇರೆಗೆ ಗ್ಯಾಂಗ್‌ರೇಪ್‌ ದೋಷಿ ವಿನಯ್‌ ಶರ್ಮಾ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ಕೇಂದ್ರ ಗೃಹ ಇಲಾಖೆ.

2019ರ ಡಿ.18: ತಮ್ಮ ವಿರುದ್ಧದ ತೀರ್ಪನ್ನು ಮರು ಪರಿಶೀಲನೆಗೆ ಕೋರಿದ ಮತ್ತೋರ್ವ ದೋಷಿ ಅಕ್ಷಯ್‌ ಅರ್ಜಿ ಸುಪ್ರೀಂನಿಂದ ತಿರಸ್ಕಾರ.

7 ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ; ಅತ್ಯಾಚಾರಿಗಳು ನೇಣಿಗೆ

ಭಾರತ ಸೇರಿ 56 ರಾಷ್ಟ್ರಗಳಲ್ಲಿ ಮರಣದಂಡನೆ ಕಾಯ್ದೆ

ವಿಶ್ವದ 142 ದೇಶಗಳು ಯಾವುದೇ ರೀತಿಯ ಪ್ರಕರಣದ ದೋಷಿಗಳಿಗೆ ಮರಣದಂಡನೆ ಶಿಕ್ಷೆ ನೀಡುವುದನ್ನು ಇಲ್ಲವೇ ಜಾರಿಗೊಳಿಸುವುದನ್ನು ರದ್ದುಪಡಿಸಿದೆ. ಭಾರತ ಸೇರಿದಂತೆ 56 ರಾಷ್ಟ್ರಗಳು ಮಾತ್ರ ಮರಣದಂಡನೆ ಶಿಕ್ಷೆಯನ್ನು ಅನುಸರಿಸುತ್ತಿವೆ ಎಂದು ಜಾಗತಿಕ ಮಾನವ ಹಕ್ಕುಗಳ ಪ್ರತಿಪಾದಕ ಸಂಸ್ಥೆಯಾದ ಆಮ್ನೆಸ್ಟಿತನ್ನ 2018ರ ವರದಿಯಲ್ಲಿ ತಿಳಿಸಿದೆ. ವಿಶೇಷ ಪ್ರಕರಣಗಳಲ್ಲಿ ದೋಷಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಭಾರತ ಸೇರಿದಂತೆ ಅಮೆರಿಕ, ಚೀನಾ, ಜಪಾನ್‌, ಇಂಡೋನೇಷ್ಯಾ, ಮಲೇಷ್ಯಾ, ಪಾಕಿಸ್ತಾನ, ಸೌದಿ ಅರೇಬಿಯಾ, ಸಿಂಗಾಪುರ, ಥಾಯ್ಲೆಂಡ್‌ ಮತ್ತು ಅರಬ್‌ ಸಂಯುಕ್ತ ರಾಷ್ಟ್ರಗಳು ಮಾತ್ರ ಇಂತಹ ಕಠಿಣ ಶಿಕ್ಷೆಯನ್ನು ಪಾಲಿಸುತ್ತಿವೆ.

ಗಲ್ಲು ಶಿಕ್ಷೆ ಜಾರಿ ಪ್ರಕ್ರಿಯೆ ಹೇಗೆ?

ಭಾರತದಲ್ಲಿ ಮರಣದಂಡನೆಯನ್ನು ಗಲ್ಲು ಶಿಕ್ಷೆಯ ಮೂಲಕವೇ ನೀಡಬೇಕು ಎಂಬ ನಿಯಮವಿದೆ. ಗಲ್ಲು ಶಿಕ್ಷೆಗೆ ಗುರಿಯಾದ ದೋಷಿಯನ್ನು ಸಾಯುವವರೆಗೂ ಕುತ್ತಿಗೆಗೆ ನೇಣು ಹಾಕಬೇಕು. ಕೆಳ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ದೋಷಿ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಅಧಿಕಾರ ಹೊಂದಿದ್ದಾನೆ. ಒಂದು ವೇಳೆ ಹೈಕೋರ್ಟ್‌ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದರೆ ದೋಷಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಬಹುದು. ಒಂದು ವೇಳೆ ಸುಪ್ರೀಂಕೋರ್ಟ್‌ ಕೂಡ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದರೆ, ಕೊನೆಯದಾಗಿ ರಾಷ್ಟ್ರಪತಿಗಳ ಬಳಿ ಕ್ಷಮಾದಾನ ಅರ್ಜಿಸಲ್ಲಿಸಲು ಅವಕಾಶವಿದೆ.

ಇತ್ತೀಚಿನ ವರ್ಷಗಳಲ್ಲಿ ಗಲ್ಲು ಶಿಕ್ಷೆಗೊಳಗಾದವರು

- ಧನಂಜಯ್‌ 2004, ಆ.14: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು, ಹತ್ಯೆ ಮಾಡಿದ್ದ ಧನಂಜಯ್‌ ಚಟರ್ಜಿ ಎಂಬುವನನ್ನು ಪಶ್ಚಿಮ ಬಂಗಾಳದ ಅಲಿಪೊರ್‌ ಕೇಂದ್ರೀಯ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.

- ಕಸಬ್‌ 2012, ನ.21: 2008ರ ಮುಂಬೈ ದಾಳಿಕೋರ ಹಾಗೂ ಪಾಕಿಸ್ತಾನದ ಉಗ್ರ ಅಜ್ಮಲ್‌ ಅಮಿರ್‌ ಕಸಬ್‌ನನ್ನು ಪುಣೆಯ ಯರವಾಡ ಜೈಲಿನಲ್ಲಿ ನೇಣಿಗೇರಿಸಲಾಗಿತ್ತು.

- ಅಫ್ಜಲ್‌ 2013, ನ.9: 2001ರಲ್ಲಿ ಸಂಸತ್ತಿನ ಮೇಲೆ ದಾಳಿಗೈದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕ ಮಾಡಿದ್ದ ಉಗ್ರ ಮೊಹಮ್ಮದ್‌ ಅಫ್ಜಲ್‌ ಗುರುಗೆ ದೆಹಲಿಯ ತಿಹಾರ್‌ ಜೈಲಿನಲ್ಲಿ ನೇಣಿನ ಕುಣಿಕೆ ಬಿಗಿಯಲಾಗಿತ್ತು.

- ಯಾಕೂಬ್‌ 2015, ಜು.30: 1993ರ ಸರಣಿ ಬಾಂಬ್‌ ಸ್ಫೋಟ ನಡೆಸಿದ್ದ ಉಗ್ರ ಯಾಕೂಬ್‌ ಮೆಮನ್‌ನನ್ನು ಮಹಾರಾಷ್ಟ್ರದ ನಾಗಪುರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ಮಾರ್ಚ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!