ಖರ್ಗೆ ಆರ್‌ಎಸ್‌ಎಸ್‌ ಹೇಳಿಕೆಗೆ ಹೊಸಬಾಳೆ, ಶಾ ತಿರುಗೇಟು

Kannadaprabha News   | Kannada Prabha
Published : Nov 02, 2025, 05:08 AM IST
RSS General Secretary Dattatreya Hosabale

ಸಾರಾಂಶ

ಆರ್‌ಎಸ್‌ಎಸ್‌ ನಿಷೇಧದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ಅವರು ತಿರುಗೇಟು ನೀಡಿದ್ದಾರೆ.

ಜಬಲ್ಪುರ (ಮ.ಪ್ರ.) : ದೇಶದಲ್ಲಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಬೇಕೆಂಬ ಇತ್ತೀಚಿನ ಕೂಗಿಗೆ ಇದೇ ಮೊದಲ ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಕ್ರಿಯೆ ನೀಡಿದೆ. ‘ಸಂಘ ನಿಷೇಧಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಆರೆಸ್ಸೆಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿರುಗೇಟು ನೀಡಿದ್ದು, ‘ಯಾರೋ ಬಯಸಿದರು ಅಂತ ಆರೆಸ್ಸೆಸ್‌ ನಿಷೇಧಿಸಲು ಸಾಧ್ಯವಿಲ್ಲ. ಈ ಹಿಂದೆಯೂ ಹಲವು ಬಾರಿ ಆರೆಸ್ಸೆಸ್‌ ಮೇಲೆ ನಿಷೇಧ ಹೇರುವ ಯತ್ನ ನಡೆದಿತ್ತು. ಆ ಬಳಿಕ ಏನಾಯ್ತು ಅಂತ ಗೊತ್ತಿದೆಯಲ್ಲವೆ?’ ಎಂದು ಚಾಟಿ ಬೀಸಿದ್ದಾರೆ.

ಸಂಘದ ವಿರುದ್ಧ ಶುಕ್ರವಾರ ತೀವ್ರ ಹರಿಹಾಯ್ದಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ‘ದೇಶದಲ್ಲಿ ಕಾನೂನು, ಸುವ್ಯವಸ್ಥೆ ಸಮಸ್ಯೆ ಸೃಷ್ಟಿಯಾಗಲು ಮೂಲ ಕಾರಣವೇ ಆರೆಸ್ಸೆಸ್‌. ಹೀಗಾಗಿ ಆರೆಸ್ಸೆಸ್‌ ನಿಷೇಧಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಹೇಳಿದ್ದರು. ಇದಕ್ಕೂ ಮುನ್ನ ಅವರ ಪುತ್ರರೂ ಆದ ಕರ್ನಾಟಕದ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ‘ಕರ್ನಾಟಕದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ ಚಟುವಟಿಕೆಗೆ ನಿಷೇಧ ಹೇರಬೇಕು’ ಎಂದು ಆಗ್ರಹಿಸಿ ಸುದ್ದಿ ಮಾಡಿದ್ದರು.

ಈ ಹೇಳಿಕೆಗಳ ಬಗ್ಗೆ ಮೊದಲ ಬಾರಿ ಸಂಘದ ಪರವಾಗಿ ಶನಿವಾರ ಮಧ್ಯಪ್ರದೇಶದ ಜಬಲ್ಪುರದಲ್ಲಿ ಪ್ರತಿಕ್ರಿಯಿಸಿದ ಹೊಸಬಾಳೆ ಅ‍ವರು, ‘ಅವರು (ಕಾಂಗ್ರೆಸ್ಸಿಗರು) ಅನೇಕ ಬಾರಿ ಈ ರೀತಿ ಸಂಘವನ್ನು ನಿಷೇಧಿಸಲು ಯತ್ನಿಸಿದ್ದರು. ಆದರೆ, ಖರ್ಗೆ ಅವರು ಹಿಂದಿನ ಅನುಭವದಿಂದ ಕಲಿಯಬೇಕಿತ್ತು. ಅವರ (ಕಾಂಗ್ರೆಸ್) ಪ್ರಮುಖ ನಾಯಕೊಬ್ಬರು 3 ಬಾರಿ ಆರೆಸ್ಸೆಸ್‌ ಅನ್ನು ನಿಷೇಧಿಸಲು ಯತ್ನಿಸಿದ್ದರು. ಆದರೆ ಏನಾಯ್ತು? ಜನತೆ ಮತ್ತು ಕೋರ್ಟ್‌ ನಮ್ಮ ಪರ ತೀರ್ಪು ನೀಡಿದ್ದರು’ ಎಂದರು.

‘ಆರೆಸ್ಸೆಸ್‌ ಅದರ ಪಾಡಿಗೆ ಹೆಜ್ಜೆಹಾಕುತ್ತಿದೆ. ಯಾರೋ ಬಯಸಿದರು ಅಂತ ಆರೆಸ್ಸೆಸ್‌ ಅನ್ನು ನಿಷೇಧಿಸಲು ಸಾಧ್ಯವಿಲ್ಲ. ನಿಷೇಧಕ್ಕೆ ಸ್ಪಷ್ಟ ಕಾರಣಗಳು ಬೇಕು’ ಎಂದ ಹೊಸಬಾಳೆ, ‘ದೇಶದ ಭದ್ರತೆ ಮತ್ತು ಸಂಸ್ಕೃತಿಯ ರಕ್ಷಕನಾಗಿರುವ ಆರೆಸ್ಸೆಸ್‌ ನಿಷೇಧಿಸಲು ಅವರು (ಖರ್ಗೆ) ಬಯಸುತ್ತಿದ್ದಾರೆ. ಸಮಾಜವೇ ಸಂಘವನ್ನು ಒಪ್ಪಿಕೊಂಡಿದೆ. ಇತಿಹಾಸದಿಂದ ಇಂಥ ನಾಯಕರು (ಖರ್ಗೆ) ಕಲಿಯಬೇಕಿದೆ’ ಎಂದು ಮಾತಿನಲ್ಲೇ ಚುಚ್ಚಿದರು.

ವಂದೇ ಮಾತರಂ ಸ್ಮರಣೆ:

ಇದೇ ವೇಳೆ, ವಂದೇ ಮಾತರಂ 150ನೇ ವರ್ಷಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವಂದೇ ಮಾತರಂ ರಾಷ್ಟ್ರದ ಆತ್ಮದ ಗೀತೆಯಾಗಿದ್ದು, 150 ವರ್ಷಗಳ ನಂತರವೂ ಅದರ ದೈವಿಕ ಪ್ರಭಾವದಿಂದಾಗಿ ರಾಷ್ಟ್ರದ ಬಗ್ಗೆ ಸಮಾಜದಲ್ಲಿ ಸಮರ್ಪಣಾ ಭಾವನೆಯನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ’ ಎಂದು ಕೊಂಡಾಡಿದರು.

ಇದಲ್ಲದೆ, ‘ಜಾತಿ ಗಣತಿಗೆ ಆರೆಸ್ಸೆಸ್‌ ವಿರೋಧವಿಲ್ಲ. ಆದರೆ ಇದು ರಾಜಕೀಯ ಉದ್ದೇಶದಿಂದ ಕೂಡಿರಬಾರದು’ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ವಕ್ತಾರ ಕಿಡಿ:

ಈ ನಡುವೆ, ‘ದೇಶವು ಶುಕ್ರವಾರ ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಆಚರಿಸುತ್ತಿದ್ದಾಗ, ಖರ್ಗೆ ಅವರು ಪಟೇಲ್ ತೋರಿಸಿದ ಮೌಲ್ಯಗಳನ್ನು ಅನುಸರಿಸುವ ಬದಲು ಆರ್‌ಎಸ್‌ಎಸ್‌ಗೆ ಕಳಂಕ ತರಲು ಪ್ರಯತ್ನಿಸಿದರು’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ತುಹಿನ್ ಸಿನ್ಹಾ ಕಿಡಿಕಾರಿದ್ದಾರೆ.

ಖರ್ಗೆ ಚಿಕ್ಕವರಿದ್ದಾಗ ಅವರು ಮತ್ತು ಅವರ ಕುಟುಂಬವು ನಿಜಾಮನ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಬಲಿಯಾಗಿತ್ತು ಎಂದು ಜ್ಞಾಪಿಸಿದ ಅವರು, ‘ಖರ್ಗೆ ಯಾವತ್ತೂ ರಾಹುಲ್‌ ಗಾಂಧಿ ಅವರ ಹೆಜ್ಜೆ ಅನುಸರಿಸಬಾರದು. ಅವರು ದೇಶದ ನಿಜವಾದ ಶತ್ರುಗಳನ್ನು ಗುರುತಿಸಬೇಕು ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಂಪೂರ್ಣವಾಗಿ ಬದ್ಧವಾಗಿರುವ ಸಂಸ್ಥೆಯನ್ನು ದೂಷಿಸುವುದನ್ನು ನಿಲ್ಲಿಸಬೇಕು’ ಎಂದಿದ್ದಾರೆ.

- ಅಧಿಕಾರ ಇದ್ದಿದ್ದರೆ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರುತ್ತಿದ್ದೆ ಎಂದಿದ್ದ ಸಚಿವ ಪ್ರಿಯಾಂಕ್‌ ಖರ್ಗೆ

- ದೇಶದಲ್ಲಿ ಆರ್‌ಎಸ್‌ಎಸ್‌ಗೆ ನಿಷೇಧ ಹೇರಬೇಕು ಎಂದು ಮೊನ್ನೆ ಆಗ್ರಹಿಸಿದ್ದ ಮಲ್ಲಿಕಾರ್ಜುನ ಖರ್ಗೆ

- ನಿಷೇಧ ಕೂಗಿನ ಬಗ್ಗೆ ಆರ್‌ಎಸ್‌ಎಸ್‌ ಮುಂಚೂಣಿ ನಾಯಕರಿಂದ ಇದೇ ಮೊದಲ ಪ್ರತಿಕ್ರಿಯೆ

- ಹಿಂದೆ ಮೂರು ಬಾರಿ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರುವ ಪ್ರಯತ್ನಗಳು ನಡೆದಿದ್ದವು

- ನ್ಯಾಯಾಲಯಗಳು ನಮ್ಮ ಪರ ತೀರ್ಪು ನೀಡಿದ್ದವು ಎಂದು ದತ್ತಾತ್ರೇಯ ಹೊಸಬಾಳೆ ಹೇಳಿಕೆ

ಖರ್ಗೆ ಆರ್‌ಎಸ್‌ಎಸ್‌ ನಿಷೇಧಿಸುವ ಕನಸು ಈಡೇರದು: ಅಮಿತ್‌

ಪಟನಾ: ಆರೆಸ್ಸೆಸ್‌ ನಿಷೇಧಿಸಬೇಕು ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕನಸು ಈಡೇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.ಬಿಹಾರ ಚುನಾವಣೆ ನಿಮಿತ್ತ ಎನ್‌ಡಿಟೀವಿ ಜತೆ ಸಂವಾದ ನಡೆಸಿದ ಅವರು, ‘ಖರ್ಗೆ ತಮ್ಮ ಆಗ್ರಹಕ್ಕೆ ಯಾವುದೇ ಕಾರಣ ನೀಡಲಿಲ್ಲ. ನಮ್ಮ ದೇಶದ ಇಬ್ಬರು ಪ್ರಧಾನಿಗಳು ಆರ್‌ಎಸ್‌ಎಸ್‌ನಿಂದ ಬಂದವರು ಮತ್ತು ಅವರು ದೇಶ ಕಂಡ ಅತ್ಯುತ್ತಮ ಪ್ರಧಾನಿಗಳು ಎಂದು ನಾನು ಭಾವಿಸುತ್ತೇನೆ. ಸಂಘವು ಯುವಕರಿಗೆ ದೇಶಕ್ಕಾಗಿ ಬದುಕಲು ಕಲಿಸಿದೆ. ಬ್ಯಾಂಕ್‌ ಖಾತೆ ಇಲ್ಲದ ಅಥವಾ ಮನೆ ಇಲ್ಲದ ಅನೇಕ ಜನರನ್ನು ಸಂಘ ಹೊಂದಿದೆ, ಅವರಿಗೆ ದೇಶಕ್ಕಾಗಿ ಕೆಲಸ ಮಾಡುವ ಇಚ್ಛಾಶಕ್ತಿ ಮಾತ್ರ ಇದೆ. ಇಂಥ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಖರ್ಗೆ ಅವರು ಕಂಡಿರುವ ಕನಸು ಈಡೇರದು’ ಎಂದು ಖಡಕ್ಕಾಗಿ ನುಡಿದರು.

ಖರ್ಗೆ ಹೇಳಿದ್ದೇನು?

ದೇಶದಲ್ಲಿ ಕಾನೂನು, ಸುವ್ಯವಸ್ಥೆ ಸಮಸ್ಯೆ ಸೃಷ್ಟಿಯಾಗಲು ಮೂಲ ಕಾರಣವೇ ಆರೆಸ್ಸೆಸ್‌. ಹೀಗಾಗಿ ಆರೆಸ್ಸೆಸ್‌ ನಿಷೇಧಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ