Latest Videos

ಪಶ್ಚಿಮ ಬಂಗಾಳಕ್ಕೆ ನಾಡಿದ್ದು ರೆಮಲ್‌ ಚಂಡಮಾರುತ?

By Kannadaprabha NewsFirst Published May 24, 2024, 6:30 AM IST
Highlights

ಇಂದು(ಶುಕ್ರವಾರ) ಬೆಳಗಿನ ಹೊತ್ತಿಗೆ ರೆಮಲ್‌ ಚಂಡಮಾರುತ ಸ್ಪಷ್ಟ ರೂಪ ಪಡೆಯಲಿದೆ. ನಂತರ ಇದು ಶನಿವಾರ ತೀವ್ರ ಸ್ವರೂಪ ಪಡೆದು, ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದ ಕರಾವಳಿಗೆ ಭಾನುವಾರ ಸಂಜೆಯ ಹೊತ್ತಿಗೆ ಭಾರಿ ಪ್ರಮಾಣದಲ್ಲಿ ಅಪ್ಪಳಿಸಲಿದೆ ಎಂದು ಹೇಳಿದ ಭಾರತೀಯ ಹವಾಮಾನ ಇಲಾಖೆ

ನವದೆಹಲಿ(ಮೇ.24):  ಬಂಗಾಳ ಕೊಲ್ಲಿಯಲ್ಲಿ ಈ ವರ್ಷದ ಮುಂಗಾರು ಪೂರ್ವ ಅವಧಿಯ ಮೊದಲ ಚಂಡಮಾರುತ ರೂಪುಗೊಳ್ಳುತ್ತಿದ್ದು, ಇದೇ ಭಾನುವಾರ ಪಶ್ಚಿಮ ಬಂಗಾಳ ಹಾಗೂ ಪಕ್ಕದ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಈ ಚಂಡಮಾರುತಕ್ಕೆ ರೆಮಲ್‌ ಎಂದು ಹೆಸರಿಡಲಾಗಿದೆ.

‘ಶುಕ್ರವಾರದ ಬೆಳಗಿನ ಹೊತ್ತಿಗೆ ರೆಮಲ್‌ ಚಂಡಮಾರುತ ಸ್ಪಷ್ಟ ರೂಪ ಪಡೆಯಲಿದೆ. ನಂತರ ಇದು ಶನಿವಾರ ತೀವ್ರ ಸ್ವರೂಪ ಪಡೆದು, ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದ ಕರಾವಳಿಗೆ ಭಾನುವಾರ ಸಂಜೆಯ ಹೊತ್ತಿಗೆ ಭಾರಿ ಪ್ರಮಾಣದಲ್ಲಿ ಅಪ್ಪಳಿಸಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಕರ್ನಾಟಕಕ್ಕೆ 5 ದಿನ ಚಂಡಮಾರುತ ಭೀತಿ: ರಾಜ್ಯದ 23 ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಮಳೆ ಸಾಧ್ಯತೆ

ರೆಮಲ್‌ ಚಂಡಮಾರುತ ಗಂಟೆಗೆ 102 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದ್ದು, ಮೇ 26 ಹಾಗೂ 27ರಂದು ಪಶ್ಚಿಮ ಬಂಗಾಳ, ಒಡಿಶಾ, ಮಿಜೋರಂ, ತ್ರಿಪುರ ಹಾಗೂ ದಕ್ಷಿಣ ಮಣಿಪುರದ ಜಿಲ್ಲೆಗಳಲ್ಲಿ ಅತಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಸಲಿದೆ. ಮೇ 27ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆಯಿಂದ ಸಮುದ್ರದ ನೀರಿನ ಉಷ್ಣತೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಇದು ಚಂಡಮಾರುತಗಳು ರೂಪುಗೊಳ್ಳಲು ಕಾರಣವಾಗಿದ್ದು, ಕಳೆದ 30 ವರ್ಷಗಳಲ್ಲಿ ಅತಿಹೆಚ್ಚು ಚಂಡಮಾರುತಗಳು ಸೃಷ್ಟಿಯಾಗಿವೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಹೇಳಿದ್ದಾರೆ.

click me!