ಮುಂದಿನ ವಾರ ಚಂಡಮಾರುತ ದಾಳಿ: ಕರ್ನಾಟಕ, ಕೇರಳದ ಕರಾವಳಿ ತೀರದಲ್ಲಿ ಪರಿಣಾಮ!

By Kannadaprabha NewsFirst Published May 13, 2021, 8:20 AM IST
Highlights

* ಮುಂದಿನ ವಾರ ಭಾರತಕ್ಕೆ ಚಂಡಮಾರುತ ದಾಳಿ

* ಕರ್ನಾಟಕ, ಕೇರಳದ ಕರಾವಳಿ ತೀರದಲ್ಲಿ ಪರಿಣಾಮ

* ಮಹಾರಾಷ್ಟ್ರ, ಗೋವಾ, ಲಕ್ಷದ್ವೀಪದಲ್ಲಿ ಭಾರೀ ಹಾನಿ ಸಾಧ್ಯತೆ

* ಚಂಡಮಾರುತಕ್ಕೆ ತಾಕ್ಟೇ ಎಂದು ನಾಮಕರಣ ಮಾಡಿದ ಮ್ಯಾನ್ಮಾರ್‌

ಮುಂಬೈ(ಮೇ.13): ದೇಶ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ಇದೀಗ ಚಂಡಮಾರುತ ದಾಳಿಯ ಭೀತಿ ಎದುರಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಪೂರ್ವ-ಮಧ್ಯ ಅರೇಬಿಯಾ ಸಮುದ್ರದಲ್ಲಿ ಚಂಡಮಾರುತ ಉದ್ಭವವಾಗುವ ಸಾಧ್ಯತೆಯಿದೆ. ಈ ಚಂಡಮಾರುತವು ಮೇ 16ರ ಒಳಗೆ ಭಾರತದ ಪಶ್ಚಿಮ ಭಾಗದ ಕರಾವಳಿಗೆ ಅಪ್ಪಳಿಸಲಿದೆ.

ಚಂಡಮಾರುತದಿಂದ ಲಕ್ಷದ್ವೀಪದ ತಗ್ಗು ಪ್ರದೇಶಗಳಲ್ಲಿ ಪ್ರವಾಹದಂಥ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದು 2021ನೇ ಸಾಲಿನ ಮೊದಲ ಚಂಡಮಾರುತ ಎನ್ನಿಸಿಕೊಳ್ಳಲಿದ್ದು, ಈ ಚಂಡಮಾರುತಕ್ಕೆ ಮ್ಯಾನ್ಮಾರ್‌ ‘ತಾಕ್ಟೇ’ ಎಂಬ ನಾಮಕರಣ ಮಾಡಿದ್ದು, ತಾಕ್ಟೇ ಎಂದರೆ ಹಲ್ಲಿ ಎಂದರ್ಥ.

ಮೇ 14ರಂದು ಅರೇಬಿಯಾದ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡ ಸೃಷ್ಟಿಯಾಗಲಿದೆ. ಮೇ 15ರಂದು ಲಕ್ಷದ್ವೀಪದ ಹತ್ತಿರದ ಅರೇಬಿಯಾ ಸಮುದ್ರದ ಉತ್ತರ ಮತ್ತು ವಾಯುವ್ಯ ದಿಕ್ಕಿನಲ್ಲಿ ಸಂಚರಿಸಲಿದೆ. ಕೊನೆಗೆ ಮೇ 16ರಂದು ಪೂರ್ವ-ಮಧ್ಯ ಅರೇಬಿಯಾ ಸಮುದ್ರದಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳಲಿದೆ.

ಇದರಿಂದಾಗಿ ಕರ್ನಾಟಕ ಮತ್ತು ಕೇರಳದ ಕರಾವಳಿ ತೀರ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಮೇ 17 ಅಥವಾ 18ರಂದು ಈ ಚಂಡಮಾರುತವು ಗುಜರಾತ್‌ ಕರಾವಳಿಗೆ ಅಪ್ಪಳಿಸಲಿದೆ.

click me!