ಮಹಾರಾಷ್ಟ್ರ ಈಗ ದೇಶದ ಕೊರೋನಾ ರಾಜಧಾನಿ!

By Kannadaprabha News  |  First Published Apr 12, 2020, 9:02 AM IST

ಮಹಾರಾಷ್ಟ್ರ ಈಗ ದೇಶದ ಕೊರೋನಾ ರಾಜಧಾನಿ!  ಸಾವಿನ ಪ್ರಮಾಣ ಜಾಗತಿಕ ಸರಾಸರಿಗಿಂತ ಹೆಚ್ಚು | ಅರ್ಧದಷ್ಟು ಪ್ರಕರಣಗಳು ಮುಂಬೈನಲ್ಲೇ ದಾಖಲು


ಮುಂಬೈ (ಏ. 12):  ಕೊರೋನಾ ಸೋಂಕು ನಿಯಂತ್ರಣಕ್ಕೆ ದೇಶವ್ಯಾಪಿ ನಾನಾ ಕ್ರಮ ಘೋಷಿಸಿದ ಹೊರತಾಗಿಯೂ, ಮಹಾರಾಷ್ಟ್ರದಲ್ಲಿ ಮಾತ್ರ ಒಂದೇ ಸಮನೆ ಸೋಂಕಿತರು ಮತ್ತು ಸಾವಿನ ಸಂಖ್ಯೆ ಏರುತ್ತಲೇ ಇದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಬ್ಬುತ್ತಿರುವ ಸೋಂಕು ಸಹಜವಾಗಿಯೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಚಿಂತೆಗೀಡು ಮಾಡಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 1000 ಮತ್ತು ಸಾವಿನ ಸಂಖ್ಯೆ 100 ದಾಟಿದ ಏಕೈಕ ರಾಜ್ಯವಾಗಿ ಹೊರಹೊಮ್ಮಿರುವ ಮಹಾರಾಷ್ಟ್ರದಲ್ಲಿ, ಸೋಂಕು ನಿಯಂತ್ರಣಕ್ಕೆ ಘೋಷಿಸಿದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದೇ ಕೊರೋನಾ ಹಬ್ಬಲು ಪ್ರಮುಖ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

Tap to resize

Latest Videos

undefined

ದೇಶದಲ್ಲಿ ಅತಿ ಹೆಚ್ಚಿನ ಸೋಂಕು ಕಂಡುಬಂದ ಇತರೆ ರಾಜ್ಯಗಳಾದ ತಮಿಳುನಾಡು ಮತ್ತು ದೆಹಲಿಯಲ್ಲಿ, ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳಿಗೆ ತಬ್ಲೀಘಿಗಳೇ ಕಾರಣವಾಗಿದ್ದರೆ, 1600ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದ ಮಹಾರಾಷ್ಟ್ರದಲ್ಲಿ ಈ ಪಾಲು ಕೇವಲ ಶೇ.25ರ ಆಸುಪಾಸಿನಲ್ಲಿದೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊತ್ತ ಆನಂದ ಸಿಂಗ್‌ಗೆ ದೊಡ್ಡ ಸವಾಲು!

ಇನ್ನು ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಮಾಣ ಮತ್ತು ಪ್ರತಿಶತ ಸಾವಿನ ಪ್ರಮಾಣ (ಶೇ.6.2) ಕೂಡಾ ಒಟ್ಟಾರೆ ಭಾರತದ ಪ್ರಮಾಣ (ಶೇ.2.66)ಕ್ಕಿಂತ ಮತ್ತು ಜಾಗತಿಕ ಪ್ರಮಾಣಕ್ಕಿಂತ (ಶೇ.5.58)ಲೂ ಹೆಚ್ಚಿದೆ ಎಂಬುದು ಮತ್ತೊಂದು ಆತಂಕಕಾರಿ ಸಂಗತಿ.

ಅದರಲ್ಲೂ ಏಷ್ಯಾದ ಅತಿದೊಡ್ಡ ಕೊಳಚೆಪ್ರದೇಶ ಧಾರಾವಿಯಲ್ಲಿ ಈಗಾಗಲೇ ಒಂದು ಸಾವು ಸಂಭವಿಸಿದ್ದು, 7 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮುಂದಿನ ದಿನಗಳಲ್ಲಿ ದಿಢೀರ್‌ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯ ಭೀತಿ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ದಾಖಲಾದ 1600ಕ್ಕೂ ಹೆಚ್ಚು ಪ್ರಕರಣಗಳ ಪೈಕಿ 800ಕ್ಕಿಂತ ಹೆಚ್ಚು ಮುಂಬೈನಲ್ಲಿ ದಾಖಲಾಗಿದೆ. ಇನ್ನು 110 ಸಾವಿನ ಪೈಕಿ 60 ಸಾವು ಮುಂಬೈನಲ್ಲಿ ಸಂಭವಿಸಿದೆ. ದೇಶದ ಒಟ್ಟು ಸಾವಿನ ಪ್ರಕರಣದಲ್ಲಿ ಮಹಾರಾಷ್ಟ್ರದ ಪಾಲು ಶೇ.45ರಷ್ಟಿದೆ.

ಸೋಂಕಿತ ಪಕ್ಕಕ್ಕೆ ಬಂದರೆ ಅಲರ್ಟ್ ಮಾಡುತ್ತೆ ಈ ಆ್ಯಪ್!

ಏರಿಕೆಗೆ ಕಾರಣಗಳೇನು?

1. ವಿದೇಶದಿಂದ ಬಂದವರು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಹೊರತುಪಡಿಸಿದರೆ ಹೆಚ್ಚಿನ ಪ್ರಕರಣಗಳ ಮೂಲವೇ ಗೊತ್ತಿಲ್ಲ

2. ಸರ್ಕಾರ ಮತ್ತು ಇತರೆ ಖಾಸಗಿ ಸಂಸ್ಥೆಗಳು ಉಚಿತ ಆಹಾರ ವಿತರಣೆ ಮಾಡುವಾಗ ಸೂಕ್ತ ರೀತಿಯಲ್ಲಿ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ

3. ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ತರಕಾರಿ ಮಂಡಿಗಳು, ಹಾಲಿನ ಬೂತ್‌, ದಿನಸಿ ಅಂಗಡಿಗಳಲ್ಲಿ ಜನ ಹೆಚ್ಚಾಗಿ ಗುಂಪುಗೂಡುತ್ತಿದ್ದಾರೆ

4. ನಿರ್ಬಂಧ ಇದ್ದರೂ ಜನ ಎಲ್ಲೆಂದರಲ್ಲಿ ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಸಂಚರಿಸುತ್ತಲೇ ಇದ್ದಾರೆ. ಈ ಪ್ರಮಾಣ ದೇಶದಲ್ಲೇ ಹೆಚ್ಚು

ರಾಜ್ಯದ ಸ್ಥಿತಿಗತಿ

11.19 ಕೋಟಿ: ಮಹಾರಾಷ್ಟ್ರ ಒಟ್ಟು ಜನಸಂಖ್ಯೆ

12 ಲಕ್ಷ: ಈವರೆಗೆ ಸೋಂಕು ಪರೀಕ್ಷೆಗೆ ಗುರಿಯಾದವರು.

0.077%: ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ ಸೋಂಕು

1574 ಮಂದಿ: ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ

110 ಸಾವು: ಈವರೆಗೆ ಕೊರೋನಾಗೆ ಬಲಿಯಾದವರು

ತಬ್ಲೀಘಿಗಳಿಂದ ತ.ನಾಡಿಗೆ ದೇಶದಲ್ಲೇ 2ನೇ ಸ್ಥಾನ

- ಒಟ್ಟು ಸೋಂಕಿತರಲ್ಲಿ 80% ಜನ ತಬ್ಲೀಘಿಗಳು!

ಒಟ್ಟು ಸೋಂಕಿತರು: 911

ಒಟ್ಟು ಸಾವು: 8

ಕ್ವಾರಂಟೈನ್‌ನಲ್ಲಿ ಇರುವರು: 60000

ಚೆನ್ನೈ: ಒಟ್ಟಾರೆ ಸೋಂಕಿತರ ಪಟ್ಟಿಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ತಮಿಳುನಾಡನ್ನು ಇನ್ಯಾವುದೇ ರಾಜ್ಯಕ್ಕಿಂತ ಹೆಚ್ಚಾಗಿ ಕಾಡಿದ್ದು ತಬ್ಲೀಘಿ ಕಾರ್ಯಕ್ರಮದಲ್ಲಿ ಭಾಗಿಯಾದವರು. ರಾಜ್ಯದಲ್ಲಿ ಈವರೆಗೆ ಪತ್ತೆಯಾದ 911 ಪ್ರಕರಣಗಳ ಪೈಕಿ 770ಕ್ಕೂ ಹೆಚ್ಚು ಜನರ ತಬ್ಲೀಘಿ ಜಮಾತ್‌ ಸದಸ್ಯರು ಎಂಬುದೇ ಆತಂಕಕಾರಿ ವಿಷಯ. ಅಂದರೆ ಒಟ್ಟು ಪ್ರಕರಣಗಳಲ್ಲಿ ಅಂದಾಜು ಶೇ.80ರಷ್ಟುಪಾಲು ತಬ್ಲೀಘೀಗಳದ್ದೇ ಆಗಿದೆ.

ರಾಜಧಾನಿ ದಿಲ್ಲಿಗೆ 3ನೇ ಸ್ಥಾನ

- ಒಟ್ಟು ಸೋಂಕಿತರಲ್ಲಿ ತಬ್ಲೀಘಿಗಳ ಪಾಲು ಶೇ.50

ಒಟ್ಟು ಸೋಂಕಿತರು: 903

ಸಾವು: 13

ಕ್ವಾರಂಟೈನ್‌ನಲ್ಲಿ ಇರುವವರು:18000

ನವದೆಹಲಿ: ಕೊರೋನಾ ನಿಯಂತ್ರಣಕ್ಕೆ ಸಾಕಷ್ಟುಕ್ರಮಗಳನ್ನು ಕೈಗೊಂಡ ಹೊರತಾಗಿಯೂ ದೇಶದಲ್ಲೇ 3ನೇ ಅತಿದೊಡ್ಡ ಪ್ರಮಾಣದಲ್ಲಿ ಸೋಂಕಿತರು ಇರುವ ರಾಜ್ಯವಾಗಿ ರಾಜಧಾನಿ ದೆಹಲಿ ಹೊರಹೊಮ್ಮಿದೆ. ಇದಕ್ಕೆ ಮುಖ್ಯ ಕಾರಣ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ತಬ್ಲೀಘಿ ಜಮಾತ್‌ ಕಾರ್ಯಕ್ರಮ ಮತ್ತು ಅದರಲ್ಲಿ ಭಾಗಿಯಾದವರು. ದೆಹಲಿಯಲ್ಲಿ ಈವರೆಗೆ 903 ಜನರಿಗೆ ಸೋಂಕು ತಗುಲಿದ್ದು, 13 ಜನ ಸಾವನ್ನಪ್ಪಿದ್ದಾರೆ.

ಸೋಂಕಿತರ ಪೈಕಿ 214 ಜನ ವಿದೇಶಕ್ಕೆ ತೆರಳಿದವರು ಇಲ್ಲವೇ ಅವರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇನ್ನು 426 ಜನ ತಬ್ಲೀಘಿ ಜಮಾತ್‌ ಕಾರ್ಯಕ್ರಮದಲ್ಲಿ ಭಾಗಿಯಾದವರು. ಇನ್ನು 250 ಜನರ ಸೋಂಕಿನ ಮೂಲ ಪತ್ತೆ ಮಾಡಲಾಗುತ್ತಿದೆ.

click me!