ಕೊರೋನಾ 2ನೇ ಅಲೆ ಗಂಭೀರ ಪರಿಸ್ಥಿತಿ ತಲುಪಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಭಾಷಣ ಮಾಡಿದ್ದಾರೆ. ಮೋದಿ ಭಾಷಣದ ಪ್ರಮುಖಾಂಶ ಇಲ್ಲಿದೆ.
ನವದೆಹಲಿ(ಏ.20): ದೇಶದಲ್ಲಿ ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ಮೀರಿ ಹಬ್ಬುತ್ತಿದೆ. ಒಂದೊಂದೆ ರಾಜ್ಯಗಳು ಲಾಕ್‌ಡೌನ್ ಘೋಷಿಸುತ್ತಿದೆ. ಇದರ ನಡುವೆ ಪ್ರಧಾನಿ ಮೋದಿ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ಲಾಕ್‌ಡೌನ್ ಅಂತಿಮ ಆಯ್ಕೆಯಾಗಿರಲಿ, ಲಾಕ್‌ಡೌನ್ ಬದಲು ಸಣ್ಣ ಸಣ್ಣ ಕಂಟೈನ್ಮೆಂಟ್ ಝೋನ್ ಮಾಡಿ ಕೊರೋನಾ ನಿಯಂತ್ರಣ ಮಾಡಿ ಎಂದು ರಾಜ್ಯಗಳಿಗೆ ಮೋದಿ ಸಲಹೆ ನೀಡಿದ್ದಾರೆ. ಎಲ್ಲರೂ ನಿಯಮ ಪಾಲನೆ ಮಾಡೋ ಮೂಲಕ ದೇಶವನ್ನು ಲಾಕ್‌ಡೌನ್‌ನಿಂದ ಕಾಪಾಡಬೇಕಿದೆ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ದೇಶದಲ್ಲಿ ಮತ್ತೆ ಲಾಕ್‌ಡೌನ್ ಹೇರುವ ಮಾತನ್ನು ಸ್ಪಷ್ಚವಾಗಿ ತಳ್ಳಿ ಹಾಕಿದ್ದಾರೆ.
ಇಂದು(ಏ.20) ರಾತ್ರಿ 8.45ಕ್ಕೆ ದೇಶವನ್ನುದ್ದೇಶಿ ಮಾತನಾಡಿದ ಮೋದಿ ಕೊರೋನಾ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಎಲ್ಲರ ಕೂಡುಗೆ ಅಗತ್ಯ. ಕೊರೋನಾ ನಿಯಮ ಪಾಲನೆ , ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಲಸಿಕೆ ಪಡೆದ ಬಳಿಕವೂ ಕೊರೋನಾ ನಿಯಮ ಪಾಲನೆ ಅಗತ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.
undefined
ಕಠಿಣ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ನಾವು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ದಿನ ರಾತ್ರಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಕೊರೋನಾ ಹೆಚ್ಚಾಗುತ್ತಿರುವ ಕಾರಣ ದೇಶದಲ್ಲಿ ಆಕ್ಸಿನ್ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಬಗೆ ಹರಿಸಲು ಕೇಂದ್ರ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡಿದೆ.
ರಾಜ್ಯದಲ್ಲಿರುವ ಆಮ್ಲಜನಕ ಘಟಕ ಉತ್ಪಾದನೆ, ಆಕ್ಸಿಜನ್ ಸಿಲಿಂಡರ್ ವಿತರಣೆ, ಆಕ್ಸಿಜನ್ ರೈಲು ಸೇರಿದಂತೆ ಆಸ್ಪತ್ರೆಗಳಿಗೆ ಸೂಕ್ತ ಆಕ್ಸಿಜನ್ ಸಿಗುವಂತೆ ಮಾಡಲು ಎಲ್ಲಾ ಸೂಚನೆ ನೀಡಲಾಗಿದೆ. ಉತ್ಪಾದನೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ದೇಶದ ಔಷಧಿ ಉತ್ಪಾದಕರ ಜೊತೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಿದ್ದೇನೆ. ಲಸಿಕೆ ಉತ್ಪಾದಕ ಕಂಪನಿಗಳು ಉತ್ಪಾದಕ ಹೆಚ್ಚಿಸಲು ಈಗಾಗಲೇ ಕಾರ್ಯನಿರತವಾಗಿದೆ. ಅತೀ ವೇಗದಲ್ಲಿ ಲಸಿಕೆಯನ್ನು ಉತ್ಪಾದಿಸುತ್ತಿದೆ.
ಮೊದಲ ಬಾರಿ ಕೊರೋನಾ ವಕ್ಕರಿಸಿದಾಗ ದೇಶದ ವಿಜ್ಞಾನಿಗಳು, ಸಂಶೋಧಕರು ಕೊರೋನಾ ಲಸಿಕೆ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಿದರು. ಆದರೆ ಅಷ್ಟೇ ವೇಗದಲ್ಲಿ ನಮ್ಮ ಸಂಶೋಧಕರು ವಿಶ್ವದ ಅತ್ಯಂತ ವಿಶ್ವಾಸಾರ್ಹ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. 2 ಮೇಡ್ ಇನ್ ಇಂಡಿಯಾ ಲಸಿಕೆಯೊಂದಿಗೆ ಭಾರತ ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನ ಆರಂಭಿಸಿದೆ.
ಎಲ್ಲರಿಗೂ ಲಸಿಕೆ ಸಿಗುವಂತಗಾಬೇಕು. ವಿಶ್ವದಲ್ಲಿ ಅತೀ ವೇಗದಲ್ಲಿ ಲಸಿಕೆ ವಿತರಣೆಯನ್ನು ಭಾರತ ಮಾಡುತ್ತಿದೆ. ಕೇವಲ 92 ದಿನದಲ್ಲಿ 12 ಕೋಟಿ ಲಸಿಕೆ ವಿತರಿಸಲಾಗಿದೆ. ಮೇ.01ರಿಂದ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ನಿರ್ಧರಿಸಿದೆ. ಬಡವರು, ಮಧ್ಯಮ ವರ್ಗದವರಿಗೂ ಸುಲಭವಾಗಿ ಲಸಿಕೆ ಸಿಗುವಂತೆ ಮಾಡಲಾಗಿದೆ.
ಕಾರ್ಮಿಕರ ವರ್ಗಕ್ಕೂ ಲಸಿಕೆ ನೀಡಲಾಗುವುದು. ಸದ್ಯ ಕಾರ್ಮಿಕ ವರ್ಗ ಎಲ್ಲಿದ್ದಾರೋ ಅಲ್ಲೇ ಇರಿ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕಾರಣ ನಿಮಗೆ ಯಾವ ರಾಜ್ಯದಲ್ಲಿದ್ದರೂ ಅಲ್ಲೇ ಲಸಿಕೆ ಸಿಗಲಿದೆ. ಜೊತೆಗೆ ಕೆಲ ದಿನಗಳಲ್ಲೇ ನಿಮ್ಮ ಕೆಲಸ ಕಾರ್ಯಗಳು ನಡೆಯಲಿದೆ ಎಂದು ಮೋದಿ ಹೇಳಿದ್ದಾರೆ.
ಮೊದಲ ಬಾರಿಗೆ ಕೊರೋನಾ ವಕ್ಕರಿಸಿದಾಗ, ಕೊರೋನಾ ಪಿಪಿಐ ಕಿಟ್ ಇರಲಿಲ್ಲ, ಪರೀಕ್ಷೆ ಲ್ಯಾಬ್ ಇರಲಿಲ್ಲ. ಕೊರೋನಾ ಕುರಿತು ಯಾರಿಗೂ ಮಾಹಿತಿ ಇರಲಿಲ್ಲ. ಆದರೆ ಈಗ ಹಾಗಲ್ಲ. ಕೆಲವೇ ಸಮಯದಲ್ಲಿ ಭಾರತ ಪಿಪಿಐ ಕಿಟ್, ಲ್ಯಾಬ್ , ಲಸಿಕೆ ಸೇರಿದಂತೆ ಎಲ್ಲಾ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ನಾವು ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಇದೀಗ ಎರಡನೇ ಅಲೆಯನ್ನು ಅಷ್ಟೇ ಯಶಸ್ವಿಯಾಗಿ ಎದುರಿಸುವ ವಿಶ್ವಾಸವಿದೆ ಎಂದು ಮೋದಿ ಹೇಳಿದರು.
ನಮ್ಮ ಯುವ ಸಮೂಹ ಅಪಾರ್ಟ್ಮೆಂಟ್ , ನಿಮ್ಮ ಸುತ್ತಮುತ್ತ ಕೊರೋನಾ ಕುರಿತು ಜಾಗೃತಿಯನ್ನು ಮೂಡಿಸುವ ಕಾರ್ಯ ಮಾಡಬೇಕಿದೆ. ಜೊತೆಗೆ ಕೊರೋನಾ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಬೇಕಿದೆ. ಹೀಗಾದಲ್ಲಿ, ದೇಶದಲ್ಲಿ ಯಾವುದೇ ಕರ್ಫ್ಯೂ ಹೇರುವ ಪ್ರಮೇಯವೇ ಬರುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಆತಂಕದ ವಾತಾರಣ ಸೃಷ್ಟಿಸಬಾರದು. ಆದರೆ ಜಾಗೃತಿಯನ್ನು ಮೂಡಿಸಬೇಕು. ನಮ್ಮ ದೇಶವನ್ನು ಲಾಕ್‌ಡೌನ್‌ನಿಂದ ಬಚಾವ್ ಮಾಡಬೇಕಿದೆ. ಎಲ್ಲಾ ರಾಜ್ಯಗಳಿಗೆ ನನ್ನ ಮನವಿ ಇಷ್ಟೇ, ಲಾಕ್‌ಡೌನ್ ಅಂತಿಮ ಆಯ್ಕೆಯಾಗಿರಲಿ. ಸಣ್ಣ ಸಣ್ಣ ಕಂಟೈನ್ಮೆಂಟ್ ಜೋನ್ ನಿರ್ಮಾಣ ಮಾಡಿ ಕೊರೋನಾ ನಿಯಂತ್ರಣ ಮಾಡಿ.
ನಾವು ಮರ್ಯಾದ ಪುರುಷೋತ್ತಮನ ರೀತಿಯಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು. ರಂಜಾನ್ ಆಚರಣೆಯ ಸಂದರ್ಭದಲ್ಲೂ ನಾವು ಮಾರ್ಗಸೂಚಿಗಳನ್ನು ಅಷ್ಟೇ ಮುಖ್ಯವಾಗಿ ಪಾಲನೆ ಮಾಡಬೇಕು. ಎಲ್ಲರಲ್ಲಿ ನನ್ನ ಇದೇ ಮನವಿ, ಎಲ್ಲರ ಸಾಹಸ, ಧೈರ್ಯದಿಂದ ಕೊರೋನಾ ಎದುರಿಸೋಣ. ಶುಚಿತ್ವ ಕಾಪಾಡಿ, ಕೊರೋನಾ ಮಾರ್ಗಸೂಚಿ ಪಾಲಿಸಿ ಎಂದು ಮೋದಿ ಭಾಷಣದಲ್ಲಿ ಹೇಳಿದ್ದಾರೆ.