
ನವದೆಹಲಿ : ಸುದೀರ್ಘ 11 ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿರುವ ವಿಪಕ್ಷ ಕಾಂಗ್ರೆಸ್, ‘ಈ 11 ವರ್ಷಗಳು ದೇಶದ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ರಚನೆಯ ಪಾಲಿಗೆ ದೊಡ್ಡ ಹೊಡೆತ. ಸರ್ವಾಧಿಕಾರಿಯಂತೆ ಆಡಳಿತ ನಡೆಸಿದರು’ ಎಂದು ವಾಗ್ದಾಳಿ ನಡೆಸಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೇರಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಅವುಗಳ ಸ್ವಾಯತ್ತತೆಯ ಮೇಲೆ ದಾಳಿ ಮಾಡಿವೆ. ಸರ್ಕಾರವು ಸಂವಿಧಾನದ ಪ್ರತಿ ಪುಟಕ್ಕೆ ಸರ್ವಾಧಿಕಾರದ ಶಾಯಿಯನ್ನು ಬಳಿದಿದೆ. ರಾಜ್ಯಗಳ ಹಕ್ಕುಗಳನ್ನು ನಿರ್ಲಕ್ಷಿಸಿ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸಿದೆ. ಆರ್ಥಿಕತೆಯ ಬೆಳವಣಿಗೆಯೂ ಕುಸಿದಿದೆ’ ಎಂದು ಆರೋಪಿಸಿದ್ದಾರೆ. ‘ದ್ವೇಷ, ಬೆದರಿಕೆ ಮತ್ತು ಭಯದ ವಾತಾವರಣ ಸೃಷ್ಟಿಗೆ ಯತ್ನಗಳು ನಡೆಯುತ್ತಿವೆ. ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳ ಮೇಲಿನ ಶೋಷಣೆ ಹೆಚ್ಚುತ್ತಿದ್ದು, ಮೀಸಲಾತಿ ಮತ್ತು ಸಮಾನ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ಮುಂದುವರೆದಿದೆ. ಬಿಜೆಪಿ ಆಡಳಿತದ ವೈಫಲ್ಯಕ್ಕೆ ಮಣಿಪುರ ಹಿಂಸಾಚಾರವೇ ಸಾಕ್ಷಿ’ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸುದ್ದಿಗೋಷ್ಠಿ ನಡೆಸಿ:ಅತ್ತ, ‘ಪ್ರಧಾನಿ ಮೋದಿ ಈವರೆಗೆ ಒಂದೇ ಒಂದೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಕೇಳಲಾಗುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿಲ್ಲ. ಯಾಕೆ ಅವರು ಇದರಿಂದ ಓಡುತ್ತಿದ್ದಾರೆ?’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ವ್ಯಂಗ್ಯವಾಗಿದ್ದಾರೆ.
ಅಂತೆಯೇ, ‘ಸರ್ಕಾರ 11 ವರ್ಷ ಪೂರೈಸಿರುವ ಹೊತ್ತಿನಲ್ಲಾದರೂ ಮೋದಿ ಪತ್ರಿಕಾಗೋಷ್ಠಿ ನಡೆಸಲಿ. ಹಿಂದಿನ ನಾಯಕರಂತೆ ನೇರವಾಗಿ ಮಾತನಾಡಲು ಅವರಿಗೆ ಧೃರ್ಯವಿಲ್ಲವೇ’ ಎಂದು ಸವಾಲೆಸೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ