ಬಾಂಗ್ಲಾ ಯುದ್ಧದ ಹೀರೋ, ಕನ್ನಡಿಗ ಗೋಪಾಲ್‌ ರಾವ್‌ ವಿಧಿವಶ!

By Suvarna NewsFirst Published Aug 10, 2021, 1:46 PM IST
Highlights

* ಪಾಕ್‌ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

* ಬಾಂಗ್ಲಾ ಯುದ್ಧದ ಹೀರೋ, ಕನ್ನಡಿಗ ಗೋಪಾಲ್‌ ರಾವ್‌ ವಿಧಿವಶ

ಚೆನ್ನೈ(ಆ.10): ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ 1971ರ ಭಾರತ ಮತ್ತು ಪಾಕಿಸ್ತಾನದ ಯುದ್ಧದ ಹೀರೋ ಹಾಗೂ ಹಿರಿಯ ಕಮೊಡೋರ್‌ ಕಾಸರಗೋಡು ಪಟ್ನಶೆಟ್ಟಿಗೋಪಾಲ್‌ ರಾವ್‌(94) ಅವರು ಶನಿವಾರ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ವಯೋಸಹಜ ಕಾಯಿಲೆಗಳಿಂದಾಗಿ ಅವರು ವಿಧಿವಶರಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಗೋಪಾಲ್‌ ರಾವ್‌ ಅವರ ಅಂತ್ಯ ಸಂಸ್ಕಾರವು ಸೋಮವಾರ ಸಂಜೆ ನೆರವೇರಿತು.

1926ರ ನವೆಂಬರ್‌ 13ರಂದು ಮಂಗಳೂರಿನಲ್ಲಿ ಜನಿಸಿದ್ದ ಗೋಪಾಲ್‌ ರಾವ್‌ ಅವರು ಬಳಿಕ ಸೇನೆಗೆ ಸೇರಿದ್ದರು. ಬಾಂಗ್ಲಾದೇಶ ವಿಮೋಚನೆಗೊಳಿಸಿದ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿನ ಗಣನೀಯ ಸೇವೆಗಾಗಿ ಗೋಪಾಲ್‌ ರಾವ್‌ ಅವರು ಭಾರತೀಯ ಸೇನೆಯ 2ನೇ ಅತ್ಯುನ್ನತ ಪುರಸ್ಕಾರವಾದ ‘ಮಹಾವೀರ ಚಕ್ರ’, ವೀರ ಸೇನಾ ಪದಕ ಹಾಗೂ ವಿಶಿಷ್ಟಸೇನಾ ಪದಕಕ್ಕೂ ಪಾತ್ರರಾಗಿದ್ದಾರೆ.

ರಾವ್‌ ಪಾತ್ರವೇನು?:

1971ರ ಯುದ್ಧದ ವೇಳೆ ಆಪರೇಷನ್‌ ‘ಕ್ಯಾಕ್ಟಸ್‌ ಲಿಲಿ’ ಭಾಗವಾಗಿ ರಾವ್‌ ನೇತೃತ್ವದ ಸಣ್ಣ ನೌಕಾ ತುಕಡಿಯು ಪಾಕಿಸ್ತಾನದ ಕರಾಚಿಯ ಕರಾವಳಿ ತೀರಕ್ಕೆ ಡಿ.4ರಂದು ಮುಟ್ಟಿತು. ಈ ವೇಳೆ ಶತ್ರು ಸೈನ್ಯವು ಡೆಸ್ಟ್ರಾಯರ್‌ಗಳ ಮುಖಾಂತರ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿತು. ಆದರೆ ಕಮಾಂಡರ್‌ ಗೋಪಾಲ್‌ ರಾವ್‌ ಅವರು ತಮ್ಮ ಪ್ರಾಣದ ಹಂಗು ತೊರೆದು ಲಘು ನೌಕಾವ್ಯೂಹದ ದಾಳಿ ನಡೆಸಿ ಪಾಕಿಸ್ತಾನದ 2 ಡೆಸ್ಟ್ರಾಯರ್‌ಗಳು ಮತ್ತು ಮೈನ್‌ಸ್ವೀಪರ್‌ ಸೇರಿ 3 ಹಡಗುಗಳನ್ನು ನಾಶ ಮಾಡಿದರು. ಆ ಬಳಿಕ 1971ರ ಯುದ್ಧದಲ್ಲಿ ಭಾರತವು ಮೇಲುಗೈ ಸಾಧಿಸಿತು.

click me!