
ನವದೆಹಲಿ (ಮೇ.1): ದೇಶದ ಪ್ರಮುಖ ರಾಜ್ಯಗಳು ಆರ್ಥಿಕ ಸಂಕಷ್ಟದತ್ತ ಮುನ್ನುಗ್ಗುತ್ತಿವೆಯೇ? ಕೇಂದ್ರ ಹಣಕಾಸು ಇಲಾಖೆಯ ಇತ್ತೀಚಿನ ವರದಿ ಇಂತಹದ್ದೊಂದು ಗಂಭೀರ ಮುನ್ಸೂಚನೆಯನ್ನು ನೀಡಿದೆ. ಆದಾಯ ಕೊರತೆ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯಿಂದಾಗಿ ಕರ್ನಾಟಕ ಸೇರಿದಂತೆ ಒಟ್ಟು 9 ರಾಜ್ಯಗಳು ಶೀಘ್ರದಲ್ಲೇ ಭಾರಿ ಹಣಕಾಸು ಒತ್ತಡಕ್ಕೆ ಸಿಲುಕಲಿವೆ ಎಂದು ಕೇಂದ್ರ ಎಚ್ಚರಿಸಿದೆ.
ಕೇಂದ್ರ ಹಣಕಾಸು ಇಲಾಖೆಯ ವಿಶ್ಲೇಷಣೆಯ ಪ್ರಕಾರ, 2026-27ನೇ ಹಣಕಾಸು ಸಾಲಿನಲ್ಲಿ ದೇಶದ 18 ದೊಡ್ಡ ರಾಜ್ಯಗಳ ಪೈಕಿ ಅರ್ಧದಷ್ಟು ಅಂದರೆ 9 ರಾಜ್ಯಗಳು ಆರ್ಥಿಕ ಅಸ್ಥಿರತೆಯನ್ನು ಎದುರಿಸಲಿವೆ. ರಾಜಸ್ವ ಸಂಗ್ರಹದ ಕೊರತೆ ಮತ್ತು ಅನಿಯಂತ್ರಿತ ಸಾಲದ ಪ್ರಮಾಣವೇ ಈ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.
ವರದಿಯ ಅನ್ವಯ ಅತಿ ಹೆಚ್ಚು ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿ ನೋಡುವುದಾದರೆ, ಹಿಮಾಚಲ ಪ್ರದೇಶ ಶೇ.2.4 ರಷ್ಟು ಕೊರತೆಯೊಂದಿಗೆ ಮೊದಲ ಸ್ಥಾನ ದಲ್ಲಿದೆ 2ನೇ ಸ್ಥಾನದಲ್ಲಿ ಪಂಜಾಬ್ (ಶೇ.2.2ಕೊರತೆ), 3ನೇ ಸ್ಥಾನದಲ್ಲಿ ಕೇರಳ ( ಶೇ2.1), 4ನೇ ಸ್ಥಾನದಲ್ಲಿ ಆಂಧ್ರಪ್ರದೇಶ, ರಾಜಸ್ಥಾನ ( ಶೇ 1.1), 5ನೇ ಸ್ಥಾನದಲ್ಲಿ ಹರಿಯಾಣ (ಶೇ 0.9), 6ನೇ ಸ್ಥಾನದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ( ಶೇ 0.7) ಹಾಗೂ ಛತ್ತೀಸ್‌ಗಢ (ಶೇ 0.3) ಸ್ಥಾನದಲ್ಲಿವೆ.
ಆರ್ಥಿಕವಾಗಿ ಸದೃಢವೆಂದು ಪರಿಗಣಿಸಲ್ಪಟ್ಟಿರುವ ಕರ್ನಾಟಕವು ಶೇ. 0.7 ರಷ್ಟು ಆದಾಯ ಕೊರತೆಯೊಂದಿಗೆ ಆರನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರವು ತನ್ನ ಸಾಲದ ಪ್ರಮಾಣವನ್ನು ನಿಯಂತ್ರಿಸದಿದ್ದರೆ ಮತ್ತು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳದಿದ್ದರೆ ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದು ಕೇಂದ್ರದ ವರದಿ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ