ಬೆಂಗಳೂರು ಸೇರಿ ದೇಶದ 10 ನಗರ ಭಿಕ್ಷುಕ ಮುಕ್ತ?

By Kannadaprabha NewsFirst Published Jan 19, 2020, 8:07 AM IST
Highlights

ಭಿಕ್ಷುಕ ಮುಕ್ತ ನಗರ ನಿರ್ಮಾಣಕ್ಕಾಗಿ ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿ ರಾಷ್ಟ್ರ ಮಟ್ಟದ ಅಭಿಯಾನಕ್ಕೆ ಚಿಂತನೆ ನಡೆಸಲಾಗಿದೆ. 

ನವದೆಹಲಿ [ಜ.19]: ದೇಶದ ನೈರ್ಮಲ್ಯಕ್ಕಾಗಿ ಸ್ವಚ್ಛ ಭಾರತ ಆಂದೋಲನ ಕೈಗೊಂಡು ಅದರಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರ ಇದೀಗ ಭಿಕ್ಷುಕ ಮುಕ್ತ ನಗರ ನಿರ್ಮಾಣಕ್ಕಾಗಿ ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿ ರಾಷ್ಟ್ರ ಮಟ್ಟದ ಅಭಿಯಾನಕ್ಕೆ ಚಿಂತನೆ ನಡೆಸಿದೆ.

ಇದೇ ವರ್ಷದ ಏಪ್ರಿಲ್‌ನಿಂದ ಈ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 60:40 ಅನುದಾನದಡಿ ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಆಲೋಚನೆಯಾಗಿದೆ.

ಭಿಕ್ಷುಕ ಸಮಸ್ಯೆ ನಿರ್ಮೂಲನೆಗಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಹಾಗೂ ಎನ್‌ಜಿಒಗಳ ಜೊತೆ ಜ.14ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಭಿಕ್ಷಾಟನೆ ಹೋಗಲಾಡಿಸಲು ಅಗತ್ಯವಿರುವ ಕ್ರಿಯಾ ಯೋಜನೆಗಳು ಹಾಗೂ ಬಜೆಟ್‌ ಅನ್ನು ಮಾಚ್‌ರ್‍ ಅಂತ್ಯದೊಳಗೆ ಸಿದ್ಧಪಡಿಸಬೇಕು ಎಂದು ಚರ್ಚಿಸಲಾಗಿದೆ. ಈ ಪ್ರಕಾರ ದೇಶದ ಮೆಟ್ರೋ ಅಥವಾ ಬೃಹತ್‌ ನಗರಗಳಾದ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್‌, ನಾಗ್ಪುರ, ಪಟನಾ, ಇಂದೋರ್‌ ಹಾಗೂ ಲಖನೌಗಳಲ್ಲಿ ಅಭಿಯಾನ ಆರಂಭಿಸಲು ಚಿಂತಿಸಲಾಗಿದೆ.

ಈ ಅಭಿಯಾನದ ಸ್ಥಳಗಳಲ್ಲಿ ವೇಳೆ ಭಿಕ್ಷುಕರ ಗುರುತಿಸುವುದು ಅಲ್ಲದೆ, ಅವರಿಗೆ ಪುನರ್ವಸತಿ, ವೈದ್ಯಕೀಯ ವ್ಯವಸ್ಥೆ, ಸಮಾಲೋಚನೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಇನ್ನಿತರ ಸುಸ್ಥಿರ ಅನುಕೂಲತೆಗಳನ್ನು ಮಾಡಿಕೊಡುವ ಬಗ್ಗೆ ಕಾರ್ಯಸೂಚಿ ಸಿದ್ಧಪಡಿಸಬೇಕು ಎಂದು ನಿರ್ಧರಿಸಲಾಗಿದೆ. ನಿರ್ಗತಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ಯೋಜನೆ ನೆರವಾಗಲಿದೆ ಎಂದು ಹೇಳಲಾಗಿದೆ.

click me!