ಪೌರತ್ವ ಕಾಯ್ದೆ ಗೊಂದಲ ನಿವಾರಿಸಲು ಬಂಗಾಳಕ್ಕೆ 30000 ಕಾರ್ಯಕರ್ತರು| ಪ್ರತೀ ಮನೆಗಳಿಗೂ ಭೇಟಿ ಕುಟುಂಬಸ್ಥರ ಜತೆ ಮಾತುಕತೆ| ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಯೋಜನೆ
ನವದೆಹಲಿ[ಡಿ.27]: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬಗ್ಗೆ ಇರುವ ಗೊಂದಲಗಳಿಂದಾಗಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಗೊಂದಲ ನಿವಾರಣೆಗೆ ಪಶ್ಚಿಮ ಬಂಗಾಳಕ್ಕೆ 30000 ಸ್ವಯಂಸೇವಕರನ್ನು ನಿಯೋಜಿಸಲು ಬಿಜೆಪಿ ನಿರ್ಧರಿಸಿದೆ.
ಪೌರತ್ವ ಕುರಿತ ಗೊಂದಲಗಳು, 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗಬಹುದು ಎಂಬ ಭೀತಿಯಲ್ಲಿ ಪಕ್ಷ ಇಂಥದ್ದೊಂದು ಯೋಜನೆ ರೂಪಿಸಿದೆ.
ಈ 30000 ಸ್ವಯಂ ಸೇವಕರು, ಪೌರತ್ವ ಗೊಂದಲ ಹೆಚ್ಚಿರುವ ಪ್ರದೇಶಗಳ ಪ್ರತಿ ಮನೆಗೂ ತೆರಳಿ, ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ. ಇವರೆಲ್ಲಾ ಜನವರಿ ಮಾಸಾಂತ್ಯದ ವೇಳೆಗೆ ತಮ್ಮ ಕೆಲಸ ಆರಂಭಿಸಲಿದ್ದಾರೆ.
ಈ ಯೋಜನೆಯ ಮಹಿಳಾ ಸ್ವಯಂಸೇವಕರನ್ನೂ ಬಳಸಿಕೊಳ್ಳುವ ಇರಾದೆ ಪಕ್ಷಕ್ಕಿದ್ದು, ಈ ಬಗ್ಗೆ ಶೀಘ್ರವೇ ಮಹಿಳಾ ಘಟಕದ ಜೊತೆಗೆ ಮಾತುಕತೆಯನ್ನೂ ಪಕ್ಷ ನಿಗದಿ ಮಾಡಿದೆ. ಇದಲ್ಲದೆ ಸಿಎಎಗೆ ದೇಶದ ಜನತೆ ಬೆಂಬಲ ಇದೆ ಎಂಬುದರ ಕುರಿತಾಗಿ ಕೋಟ್ಯಂತರ ಜನರ ಪತ್ರಗಳನ್ನು ಪ್ರಧಾನಿ ಮೋದಿ ಅವರಿಗೆ ರವಾನಿಸುವ ಬಗ್ಗೆಯೂ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.