ನಮೋ 71ನೇ ಜನ್ಮದಿನ: ಸೆ.17ರಿಂದ 20 ದಿನ ಬಿಜೆಪಿ ಮೋದಿ ಉತ್ಸವ!

By Kannadaprabha NewsFirst Published Sep 5, 2021, 8:03 AM IST
Highlights

* ನಮೋ 71ನೇ ಜನ್ಮದಿನ: ಸೇವಾ ಅಭಿಯಾನ

* ಅಧಿಕಾರದ 20 ವರ್ಷ: 5 ಕೋಟಿ ಪತ್ರ ಗುರಿ

* ಸೆ.17ರಿಂದ 20 ದಿನ ಬಿಜೆಪಿ ಮೋದಿ ಉತ್ಸವ!

ನವದೆಹಲಿ(ಸೆ.05): ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದ ಗದ್ದುಗೆ ಹಿಡಿದು 20 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ‘ಸೇವೆ ಹಾಗೂ ಸಮರ್ಪಣಾ ಅಭಿಯಾನ’ದ ಹೆಸರಿನಲ್ಲಿ ಬೃಹತ್ತಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ಸೆ.17ರಂದು ಮೋದಿ ಅವರ 71ನೇ ಹುಟ್ಟುಹಬ್ಬ ಇದ್ದು, ಅಂದಿನಿಂದ 20 ದಿನಗಳ ಕಾಲ ಬಿಜೆಪಿಯ ಮೆಗಾ ಅಭಿಯಾನ ದೇಶಾದ್ಯಂತ ನಡೆಯಲಿದೆ.

2001ರ ಅ.7ರಂದು ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2014ರವರೆಗೂ ಆ ಪಟ್ಟದಲ್ಲಿದ್ದ ಅವರು ಬಳಿಕ ದೇಶದ ಪ್ರಧಾನಿಯಾದರು. ಮೋದಿ ಅವರು ಅಧಿಕಾರದ ಗದ್ದುಗೆಗೇರಿ ಅ.7ಕ್ಕೆ 20 ವರ್ಷ ಪೂರ್ಣಗೊಳ್ಳಲಿದೆ. ಅವರು ಒಮ್ಮೆಯೂ ಮಾಜಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಏನೇನು ಕಾರ‍್ಯಕ್ರ​ಮ?:

ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ, ಬಡವರಿಗೆ ಉಚಿತ ಆಹಾರ ಧಾನ್ಯ ಹಾಗೂ ಲಸಿಕೆ ವಿತರಣೆ ಈ ಕಾರ್ಯಕ್ರಮದ ಭಾಗವಾಗಿರಲಿದೆ. ಇದಲ್ಲದೆ, ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿ ಬೂತ್‌ಗಳಿಂದ ಬಿಜೆಪಿ ಕಾರ್ಯಕರ್ತರು 5 ಕೋಟಿ ಅಂಚೆಚೀಟಿಗಳನ್ನು ಪ್ರಧಾನಿ ಅವರಿಗೆ ರವಾನಿಸಲಿದ್ದಾರೆ. ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆ ನೀಡಿ​ದ್ದಾ​ರೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.

ಮೋದಿ ಅವರ ಜೀವನ ಕುರಿತು ವಿಶೇಷ ಪ್ರದರ್ಶನ ಆಯೋಜಿಸಬೇಕು. ಪಡಿತರ ಕೇಂದ್ರಗಳಿಗೆ ಎಲ್ಲ ಪ್ರತಿನಿಧಿಗಳೂ ಹೋಗಿ ಪ್ರಧಾನಿ ಅವರಿಗೆ ಧನ್ಯವಾದ ಹೇಳುವ ವಿಡಿಯೋ ಚಿತ್ರೀಕರಿಸಬೇಕು. ಯುವ ಘಟಕ ರಕ್ತದಾನ ಶಿಬಿರ ಆಯೋಜಿಸಬೇಕು ಎಂದು ಪಕ್ಷ ತನ್ನ ಸದಸ್ಯರಿಗೆ ಸೂಚನೆ ನೀಡಿದೆ.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರು ಗಂಗಾ ನದಿ ತೀರದ 71 ಸ್ಥಳಗಳಲ್ಲಿ ಸ್ವಚ್ಛತಾ ಶಿಬಿರ ನಡೆಸಲಿದ್ದಾರೆ. ಇದಲ್ಲದೆ ದೇಶಾದ್ಯಂತ ಮೋದಿ ಅವರ ಜೀವನ ಹಾಗೂ ಸಾಧನೆ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು, ಇದಕ್ಕೆ ಪ್ರಸಿದ್ಧ ವ್ಯಕ್ತಿಗಳು ಹಾಗೂ ಚಿಂತಕರನ್ನು ಆಹ್ವಾನಿಸಲಾಗುತ್ತದೆ. ವಿವಿಧ ಭಾಷೆಗಳಲ್ಲಿ ಗಣ್ಯ ವ್ಯಕ್ತಿಗಳಿಂದ ಅಭಿಪ್ರಾಯ ಹಾಗೂ ಲೇಖನವನ್ನು ಪ್ರಕಟಿಸಿ, ಹೆಚ್ಚಿನ ಜನರಿಗೆ ಸಂದೇಶ ತಲುಪುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿಕೆಯಲ್ಲಿ ಬಿಜೆಪಿ ವಿವರಿಸಿದೆ.

ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗುತ್ತದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಆಹಾರ ವಿತರಣೆ ಮಾಡಲಾಗುತ್ತದೆ. ಇದರಲ್ಲಿ ಮಹಿಳಾ ನಾಯಕಿಯರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಎಲ್ಲ ಪ್ರತಿನಿಧಿಗಳು ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಪ್ರಧಾನಿಗೆ ಧನ್ಯವಾದ ಸಲ್ಲಿಸಲಿದ್ದಾರೆ. ಈ ಕುರಿತು ಸದಸ್ಯರಿಗೆ ಸೂಚನೆ ನೀಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ಅ.2ರ ಗಾಂಧಿ ಜಯಂತಿಯ ದಿನ ಸಾಮೂಹಿಕ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತದೆ. ಖಾದಿ ಹಾಗೂ ಸ್ಥಳೀಯ ಉತ್ಪನ್ನ ಬಳಸುವಂತೆ ಸಾರ್ವಜನಿಕರಿಗೆ ಸಂದೇಶ ರವಾನಿಸಲಾಗುತ್ತದೆ. ಕೋವಿಡ್‌ ಸಂದರ್ಭದಲ್ಲಿ ಅನಾಥರಾದ ಮಕ್ಕಳನ್ನು ಬಿಜೆಪಿ ಕಾರ್ಯಕರ್ತರು ನೋಂದಾಯಿಸಲಿದ್ದಾರೆ. ತನ್ಮೂಲಕ ಪಿಎಂ-ಕೇರ್‌ ನಿಧಿಯಡಿ ಪ್ರಯೋಜನ ಪಡೆಯಲು ನೆರವಾಗಲಿದ್ದಾರೆ. ಪ್ರಧಾನಿ ಅವರು ಸ್ವೀಕರಿಸಿರುವ ಎಲ್ಲ ಉಡುಗೊರೆಗಳನ್ನು ಹರಾಜು ಹಾಕಲಾಗುತ್ತದೆ ಎಂದು ವಿವರಿಸಿದೆ.

ಈ ಎಲ್ಲ ಕಾರ್ಯಕ್ರಮಗಳನ್ನು ಕೋವಿಡ್‌ ನಿಯಮಗಳನ್ನು ಪಾಲಿಸಿ ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮಗಳ ಉಸ್ತುವಾರಿ ಹೊಣೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೈಲಾಸ್‌ ವಿಜಯವರ್ಗೀಯ, ಡಿ. ಪುರಂದೇಶ್ವರಿ, ವಿನೋದ್‌ ಸೊಂಕಾರ್‌ ಹಾಗೂ ರಾಷ್ಟ್ರೀಯ ಕಿಸಾನ್‌ ಮೋರ್ಚಾ ಅಧ್ಯಕ್ಷ ರಾಜಕುಮಾರ್‌ ಚಾಹಾರ್‌ ಅವರಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದೆ.

click me!