'ಅಮೇಠಿಯಲ್ಲಿ ತಿರಸ್ಕೃತಗೊಂಡು ಕೇರಳಕ್ಕೆ ಗುಳೆ, ರಾಹುಲ್‌ ವಲಸಿಗ ನಾಯಕ'

By Suvarna NewsFirst Published Feb 17, 2021, 9:32 AM IST
Highlights

ರಾಹುಲ್‌ ವಲಸಿಗ ನಾಯಕ: ಜೋಶಿ ವ್ಯಂಗ್ಯ| ಅಮೇಠಿಯಲ್ಲಿ ತಿರಸ್ಕೃತಗೊಂಡು ಕೇರಳಕ್ಕೆ ಗುಳೆ| ಶಬರಿಮಲೆ ವಿಷಯದಲ್ಲಿ ರಾಹುಲ್‌ ಸ್ಪಷ್ಟನೆ ನೀಡಲಿ| ಫೆ.21ರಿಂದ ಕಾಸರಗೋಡಿನಿಂದ ಬಿಜೆಪಿ ವಿಜಯ ಯಾತ್ರೆ

ತ್ರಿಶ್ಶೂರು(ಫೆ.17): ಕಾಂಗ್ರೆಸ್‌ ಮುಖಂಡ ಹಾಗೂ ವಯನಾಡ್‌ ಸಂದದ ರಾಹುಲ್‌ ಗಾಂಧಿ ಅವರನ್ನು ‘ಕೇರಳಕ್ಕೆ ಆಶ್ರಯ ಬಯಸಿ ಬಂದ ವಲಸಿಗ ನಾಯಕ’ ಎಂದು ಕೇರಳ ವಿಧಾನಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ. ಇದಲ್ಲದೆ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಮಹಿಳೆಯರ ಪ್ರವೇಶ ಕುರಿತಂತೆ ಕಾಂಗ್ರೆಸ್‌ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಈ ವಿಚಾರವಾಗಿ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೇಠಿಯಲ್ಲಿನ ಜನರಿಂದ ರಾಹುಲ್‌ ತಿರಸ್ಕರಿಸಲ್ಪಟ್ಟಿದ್ದಾರೆ. ಏಕೆಂದರೆ 3 ಬಾರಿ ಸಂಸದನಾದರೂ ಅಮೇಠಿ ಅಭಿವೃದ್ಧಿಗೆ ಅವರು ಏನೂ ಮಾಡಿರಲಿಲ್ಲ. ಹಾಗಾಗಿ ಅವರು ಕೇರಳಕ್ಕೆ ಆಶ್ರಯ ಬಯಸಿ ಬಂದಿದ್ದಾರೆ. ಶೀಘ್ರದಲ್ಲೇ ಕೇರಳದ ಜನರು ಕೂಡ ಕಾಂಗ್ರೆಸ್ಸನ್ನು ಬೆಂಬಲಿಸಿದ್ದಕ್ಕೆ ಪಶ್ಚಾತ್ತಾಪ ಪಡಲಿದ್ದಾರೆ’ ಎಂದು ಹೇಳಿದರು.

‘ಶಬರಿಮಲೆ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರು, ಮಹಿಳಾ ಪ್ರವೇಶಕ್ಕೆ ಅನುಮತಿಸಿದ ಸುಪ್ರೀಂ ಕೋರ್ಟ್‌ ತೀರ್ಪು ಬೆಂಬಲಿಸಿದರು. ಆದರೆ ರಾಜ್ಯ ನಾಯಕತ್ವವು ಮಹಿಳೆಯರ ಪ್ರವೇಶದ ವಿರುದ್ಧ ನಿಲುವು ತಾಳಿದೆ. ಇದರಿಂದಾಗಿ ಹಿಂದೂಗಳ ಭಾವನೆಗೆ ಕಾಂಗ್ರೆಸ್‌ ಬೆಲೆ ಕೊಡುವುದಿಲ್ಲ ಎಂಬುದು ಸಾಬೀತಾಗಿದೆ. ಈ ಬಗ್ಗೆ ರಾಹುಲ್‌ ಗಾಂಧಿ ಏಕೆ ಮೌನ ತಾಳಿದ್ದಾರೆ?’ ಎಂದು ಪ್ರಶ್ನಿಸಿದರು.

‘ಇನ್ನು ಟರ್ಕಿಯಲ್ಲಿನ ಚಚ್‌ರ್‍ ಒಂದನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. ಇದನ್ನು ಯುಡಿಎಫ್‌ ಬೆಂಬಲಿಸಿದೆ’ ಎಂದು ಆರೋಪಿಸುವ ಮೂಲಕ, ಕ್ರೈಸ್ತ ಮತದಾರರ ಸೆಳೆಯಲು ಜೋಶಿ ಯತ್ನಿಸಿದರು.

ಫೆ.21ರಿಂದ ಕಾಸರಗೋಡಿನಲ್ಲಿ ಬಿಜೆಪಿ ವಿಜಯ ಯಾತ್ರೆ ಆರಂಭವಾಗಲಿದೆ. ಮಾ.7ರಂದು ತಿರುವನಂತಪುರಕ್ಕೆ ಬರುವ ಯಾತ್ರೆಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ ಎಂದರು.

click me!