
ಪಾಟ್ನಾ (ಆ.19) ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ಮತಗಳ್ಳತನ ಆರೋಪದ ಬಳಿಕ ರಾಹುಲ್ ಗಾಂಧಿ ಬಿಹಾರದಲ್ಲಿ ವೋಟ್ ಅಧಿಕಾರ್ ಯಾತ್ರೆ ನಡೆಸುತ್ತಿದ್ದಾರೆ. ನಮ್ಮ ಮತ ನಮ್ಮ ಹಕ್ಕು ಅನ್ನೋ ಧ್ಯೇಯದೊಂದಿಗೆ ರಾಹುಲ್ ಗಾಂಧಿ ಯಾತ್ರೆ ನಡೆಸುತ್ತಿದ್ದಾರೆ. ಭಾರಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಜೊತೆ ಈ ಯಾತ್ರೆ ನಡೆಯುತ್ತಿದೆ. ಆದರೆ ಈ ರಾಹುಲ್ ಗಾಂಧಿ ಯಾತ್ರೆಯಲ್ಲಿ ಅವಘಡ ಸಂಭವಿಸಿದೆ. ರಾಹುಲ್ ಗಾಂಧಿ ಯಾತ್ರೆಯಲ್ಲಿ ಕಿಕ್ಕಿರಿದು ತುಂಬಿದ ಬೆಂಬಲಿಗರು, ಕಾರ್ಯಕರ್ತರನ್ನು ನಿಯಂತ್ರಿಸಲು, ಭದ್ರತೆ ನೀಡಲು ಪೊಲೀಸ್ ನಿಯೋಜನೆಗೊಂಡಿದೆ. ಆದರೆ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಮೇಲೆ ರಾಹುಲ್ ಗಾಂಧಿ ಕಾರು ಹರಿದಿದೆ. ಘಟನೆಯಲ್ಲಿ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಿಜೆಪಿ ಹೇಳಿದೆ. ಇಷ್ಟೇ ಅಲ್ಲ ಈ ಘಟನೆಯ ವಿಡಿಯೋ ಹಂಚಿಕೊಂಡು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದೆ.
ಬಿಜೆಪಿ ವಕ್ತಾರ ಶೆಹಜಾಜ್ ಪೂನವಾಲ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಯಾತ್ರೆ ಮಾಡುತ್ತಿದ್ದ ಕಾರು ಪೊಲೀಸ್ ಪೇದೆಗೆ ಮೇಲೆ ಹತ್ತಿದೆ. ಇದರಿಂದ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ರಾಹುಲ್ ಗಾಂಧಿ ಕನಿಷ್ಠ ವಾಹನದಿಂದ ಇಳಿದು ಪರಿಶೀಲನೆ ನಡೆಸಲಿಲ್ಲ ಎಂದು ಪೂನವಾಲ ಆಕ್ರೋಶ ಹೊರಹಾಕಿದ್ದಾರೆ.
ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯ ಕಾಲಿನ ಮೇಲೆ ಕಾರು ಹತ್ತಿದೆ. ಕಿಕ್ಕಿರಿದು ತುಂಬಿದ್ದ ಜನರಿಂದ ಅಚಾತುರ್ಯ ನಡೆದಿದೆ. ತಕ್ಷಣವೇ ರಾಹುಲ್ ಗಾಂಧಿ ಕಾರಿನಿಂದಲೇ ಆರೋಗ್ಯ ವಿಚಾರಿಸಿದ್ದಾರೆ. ಪೊಲೀಸ್ ಪೇದೆ ಕಾಲಿಗೆ ಗಾಯವಾಗಿದೆ.ಪೇದೆಗೆ ಚಿಕಿತ್ಸೆ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿದೆ.
ಬಿಹಾರದಲ್ಲಿ ರಾಹುಲ್ ಗಾಂಧಿ ಕಳೆದ ಕೆಲ ದಿನಗಳಿಂದ ವೋಟ್ ಅಧಿಕಾರ್ ಯಾತ್ರೆ ನಡೆಸುತ್ತಿದ್ದಾರೆ. ಚುನಾವಣಾ ಆಯೋಗದ ಮತಗಳ್ಳತನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅದಿಕಾರಕ್ಕೆ ಬಂದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ಸುದ್ದಿಗೋಷ್ಠಿ ಮೂಲಕ ಉತ್ತರಿಸಿದೆ. ಇಷ್ಟೇ ಅಲ್ಲ 7 ದಿನಗಳ ಒಳಗೆ ಅಫಿಡವಿತ್ ಸಲ್ಲಿಕೆ ಮಾಡಬೇಕು, ಇಲ್ಲದಿದ್ದರೆ ಕ್ಷಮೆ ಕೇಳಬೇಕು ಎಂದು ಚುನಾವಣಾ ಆಯೋಗ ಖಡಕ್ ವಾರ್ನಿಂಗ್ ನೀಡಿದೆ.
ಬೆಂಗಳೂರಿನ ಮಹಾದೇವಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಮತಗಳ್ಳತನ ಮಾಡಿದೆ ಅನ್ನೋ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಸಾಕ್ಷಿ, ಆಧಾರ ರಹಿತ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ಸಾಕ್ಷಿ ಇಲ್ಲದೆ ಇದೀಗ ಅಫಿದವಿತ್ ಸಲ್ಲಿಕೆ ಮಾಡುತ್ತಿಲ್ಲ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ