* ಗೌತಮ್ ಅದಾನಿ, ಕರುಣಾ ನಂದಿ, ‘ಉಗ್ರ’ ಪರ್ವೇಜ್‌ಗೆ ಸ್ಥಾನ
* ಟೈಮ್ ವಿಶ್ವದ 100 ಪ್ರಭಾವಿಗಳಲ್ಲಿ ಭಾರತದ ಮೂವರು
* ವೈರಿಗಳಾದ ಝೆಲೆನ್ಸಿ$್ಕ, ಪುಟಿನ್‌ಗೂ ಒಂದೇ ವಿಭಾಗದಲ್ಲಿ ಸ್ಥಾನ
ನ್ಯೂಯಾರ್ಕ್(ಮೇ.24): ಅಮೆರಿಕದ ಟೈಮ್ ಮ್ಯಾಗಜಿನ್ 2022ನೇ ವಿಶ್ವದ 100 ಪ್ರಭಾವಿಗಳ ಪಟ್ಟಿಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ, ವಕೀಲೆ ಕರುಣಾ ನಂದಿ, ಕಾಶ್ಮೀರದ ಮಾನವ ಹಕ್ಕು ಹೋರಾಟಗಾರ ಖುರ್ರಂ ಪರ್ವೇಜ್ ಸ್ಥಾನ ಪಡೆದುಕೊಂಡಿದ್ದಾರೆ.
ಪಯೋನೀರ್ಸ್, ಆರ್ಟಿಸ್ಟ್, ಇನ್ನೋವೇಟರ್ಸ್, ಟೈಟನ್ಸ್, ಲೀಡರ್ಸ್ ಮತ್ತು ಐಕಾನ್ ಹೀಗೆ 6 ವಿಭಾಗಗಳಿಂದ ಒಟ್ಟು 100 ಜನರನ್ನು ಆರಿಸಲಾಗಿದೆ.
ಭಾರತದ ಗೌತಮ್ ಅದಾನಿ ಟೈಟನ್ಸ್ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದ್ದರೆ, ಕರುಣಾ ನಂದಿ, ಖುರ್ರಂ ಪರ್ವೇಜ್ ಲೀಡರ್ಸ್ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಗೌತಮ್ ಅದಾನಿ, ಅದಾನಿ ಸಮೂಹಗಳ ಮುಖ್ಯಸ್ಥರಾಗಿದ್ದು, ಕಳೆದೊಂದು ವರ್ಷದಲ್ಲಿ ಅಭೂತಪೂರ್ವ ಬೆಳವಣಿಗೆ ಮೂಲದ ವಿಶ್ವದ ಟಾಪ್ 10 ಶ್ರೀಮಂತರೊಳಗೆ ಸ್ಥಾನ ಪಡೆದಿದ್ದಾರೆ. ಇನ್ನು ಕರುಣಾ ನಂದಿ, ಮಹಿಳೆಯರ ಪರ ಧ್ವನಿ ಎತ್ತುವ ಮೂಲಕ ಅವರಿಗೆ ದನಿಯಾಗಿದ್ದಾರೆ. ಇನ್ನು ಖುರ್ರಂ ಪರ್ವೇಜ್ ಕಾಶ್ಮೀರದ ಮಾನವ ಹಕ್ಕುಗಳ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಇವರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ಪುಟಿನ್, ಝೆಲೆನ್‌ಸ್ಕಿಗೂ ಸ್ತಾನ:
ಉಳಿದಂತೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪ್ರಮುಖ ಪಾತ್ರಧಾರಿಗಳಾದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಲೀಡರ್ಸ್ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದೇ ಪಟ್ಟಿಯಲ್ಲಿದ್ದಾರೆ.
ಆಂಧ್ರದಿಂದ ಶ್ರೀಮಂತ ಉದ್ಯಮಿ ಅದಾನಿ ಅಥವಾ ಪತ್ನಿಗೆ ರಾಜ್ಯಸಭೆ ಟಿಕೆಟ್?
ಜೂನ್ 10ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ವಿಶ್ವದ 5ನೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅಥವಾ ಅವರ ಪತ್ನಿ ಡಾ| ಪ್ರೀತಿ ಅದಾನಿ ಅವರಿಗೆ ಟಿಕೆಟ್ ನೀಡಲು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯ ಸಂಖ್ಯಾಬಲ ಗಮನಿಸಿದರೆ ಎಲ್ಲ ನಾಲ್ಕೂ ಸ್ಥಾನ ಜಗನ್‌ರ ವೈಎಸ್ಸಾರ್ ಕಾಂಗ್ರೆಸ್ ಪಾಲಾಗಲಿವೆ. ಮೂಲಗಳ ಪ್ರಕಾರ ಅಮಿತ್ ಶಾ ಅವರು ಅದಾನಿ ಕುಟುಂಬದ ಹೆಸರು ಪ್ರಸ್ತಾಪಿಸಿದ್ದು, ಇದಕ್ಕೆ ಜಗನ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ವೈಎಸ್ಸಾರ್ ಕಾಂಗ್ರೆಸ್ ಈ ಹಿಂದೆ ರಿಲಯನ್ಸ್ ಗ್ರೂಪ್ ಹಿರಿಯ ಅಧ್ಯಕ್ಷ ಪರಿಮಳ್ ನಾಥ್ವಾನಿ ಅವರನ್ನು ರಾಜ್ಯಸಭೆಗೆ ಕಳಿಸಿತ್ತು.