ಬೈಕ್‌ ಟ್ಯಾಕ್ಸಿಗೆ ಕೇಂದ್ರ ಸರ್ಕಾರ ಅನುಮತಿ: ರಾಜ್ಯಗಳು ಅನುಮತಿಸಿದರೆ ಅಗ್ರಿಗೇಟರ್‌ ಸೇವೆ

Kannadaprabha News   | Kannada Prabha
Published : Jul 02, 2025, 09:06 AM IST
Rapido Ola and Uber Bike Taxi service

ಸಾರಾಂಶ

ಬೈಕ್‌ ಟ್ಯಾಕ್ಸಿ ಸೇವೆಗೆ ಕರ್ನಾಟಕ ಸರ್ಕಾರ ನಿಷೇಧ ಹೇರಿ, ಅದರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ, ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ನವದೆಹಲಿ (ಜು.02): ಬೈಕ್‌ ಟ್ಯಾಕ್ಸಿ ಸೇವೆಗೆ ಕರ್ನಾಟಕ ಸರ್ಕಾರ ನಿಷೇಧ ಹೇರಿ, ಅದರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ, ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ವಾಣಿಜ್ಯೇತರ (ಖಾಸಗಿ) ಬೈಕ್‌ಗಳನ್ನು ಬಳಸಿಕೊಂಡು ಅಗ್ರಿಗೇಟರ್‌ಗಳು ಬೈಕ್‌ ಟ್ಯಾಕ್ಸಿ ಸೇವೆ ನೀಡಬಹುದು. ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.

ಜೊತೆಗೆ ಈ ಕುರಿತು ಅದು ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಮೋಟಾರು ವಾಹನ ಕಾಯ್ದೆ 1988ರ ಅಡಿಯ ‘ಮೋಟಾರು ವಾಹನಗಳ ಅಗ್ರಿಗೇಟರ್‌ ಮಾರ್ಗಸೂಚಿ 2025’ ಅನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡಿದ್ದು ಇದೇ ಮೊದಲು ಎಂಬುದು ಗಮನಾರ್ಹ.

ಮಾರ್ಗಸೂಚಿಯಲ್ಲೇನಿದೆ?: ಮಾರ್ಗಸೂಚಿಯಲ್ಲಿ ‘ರಾಜ್ಯ ಸರ್ಕಾರಗಳು ಖಾಸಗಿ ಬೈಕ್‌ಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರ್‌ಗಳಿಗೆ ಅನುಮತಿ ಕೊಡಬಹುದು. ಇದರಿಂದ ಸಂಚಾರ ದಟ್ಟಣೆ, ವಾಹನದಿಂದಾಗುವ ಮಾಲಿನ್ಯ ನಿಯಂತ್ರಣ, ಕೈಗೆಟುಕುವ ದರದ ಪ್ರಯಾಣ, ಸ್ಥಳೀಯ ಸಾರಿಗೆ ಅಭಿವೃದ್ಧಿ ಮತ್ತು ಜೀವನವನ್ನು ರೂಪಿಸುವ ಅವಕಾಶ ಮಾಡಿಕೊಡಬಹುದಾಗಿದೆ’ ಎಂದು ಹೇಳಿದೆ.

‘ರಾಜ್ಯ ಸರ್ಕಾರಗಳು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 67ರ ಸಬ್‌ ಸೆಕ್ಷನ್‌ (3)ರ ಅಡಿಯಲ್ಲಿ ಅಗ್ರಿಗೇಟರ್‌ಗಳಿಗೆ ಖಾಸಗಿ ವಾಹನಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅನುಮತಿ ಕೊಡಬಹುದು. ಇದರಡಿಯಲ್ಲಿ ಅಗ್ರಿಗೇಟರ್‌ಗಳಿಗೆ ದೈನಂದಿನ, ವಾರದ, ಹದಿನೈದು ದಿನದ ಅನುಮತಿಗಾಗಿ ಸರ್ಕಾರ ಶುಲ್ಕ ವಿಧಿಸಬಹುದು’ ಎಂದು ಮಾರ್ಗಸೂಚಿಯಲ್ಲಿ ಕೇಂದ್ರ ತಿಳಿಸಿದೆ.

ಆ್ಯಪ್‌ಗಳ ಸ್ವಾಗತ: ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಬಗ್ಗೆ ಬೈಕ್‌ ಟ್ಯಾಕ್ಸಿ ಆ್ಯಪ್‌ ರ್‍ಯಾಪಿಡೋ, ಊಬರ್‌ ಸ್ವಾಗತಿಸಿವೆ. ಈ ಮಾರ್ಗಸೂಚಿಯು ವಿಕಸಿತ ಭಾರತದೆಡೆಗಿನ ಪ್ರಯಾಣದ ಮೈಲುಗಲ್ಲು’ ಎಂದು ರ್‍ಯಾಪಿಡೋ ಕೊಂಡಾಡಿದೆ. ‘ನಾವೀನ್ಯತೆ ಮತ್ತು ನಿಯಂತ್ರಕ ಸ್ಪಷ್ಟತೆಯನ್ನು ಬೆಳೆಸುವತ್ತ ಭವಿಷ್ಯವಾಣಿಯ ಹೆಜ್ಜೆ’ ಎಂದು ಊಬರ್‌ ಹೇಳಿದೆ.

ಸರ್ಕಾರ ಹೇಳಿದ್ದೇನು?
-ಖಾಸಗಿ ವಾಹನ ಬಳಸಿ ಅಗ್ರಿಗೇಟರ್‌ಗಳು ಬೈಕ್‌ ಟ್ಯಾಕ್ಸಿ ಸೇವೆ ನೀಡಬಹುದು
-ಇದಕ್ಕೆ ದೈನಂದಿನ, ವಾರ, ಮಾಸಿಕ ಅವಧಿಗೆ ಸರ್ಕಾರ ಶುಲ್ಕ ವಿಧಿಸಬಹುದು
-ಇದರಿಂದ ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಣ, ಅಗ್ಗದ ಪ್ರಯಾಣ ಸಾಧ್ಯ
-ಸ್ಥಳೀಯ ಸಾರಿಗೆ ಅಭಿವೃದ್ಧಿ, ಜೀವನ ರೂಪಿಸುವ ಅವಕಾಶ ಮಾಡಿಕೊಡಬಹುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ