ಕೋವಿಶೀಲ್ಡ್ ದರ ಭಾರತದಲ್ಲೇ ದುಬಾರಿ!| 1 ಡೋಸ್ ದರವನ್ನು 600 ರು.ಗೆ ನಿಗದಿಪಡಿಸಿರುವ ಸೀರಂ| ‘ಮೊದಲು ಸರ್ಕಾರದ ಮುಂಗಡ ಹಣದಲ್ಲಿ ದರ ನಿಗದಿ ಆಗಿತ್ತು’| ‘ಈಗ ಲಸಿಕೆಗೆ ಬೇಡಿಕೆ ಹೆಚ್ಚಿದೆ, ಉತ್ಪಾದನೆ ತೀವ್ರಗೊಳಿಸಬೇಕಿದೆ’| ‘ಅದಕ್ಕೆ ಅನುಗುಣವಾಗಿ ದರ ಪರಿಷ್ಕರಣೆ’| ಆದರೂ ಕೋವಿಶೀಲ್ಡ್ ಅತಿ ಕೈಗೆಟಕುವ ಬೆಲೆ ಹೊಂದಿದೆ: ಸೀರಂ
ನವದೆಹಲಿ(ಏ.25): ಪುಣೆಯ ಸೀರಂ ಇನ್ಸ್‌ಟಿಟ್ಯೂಟ್ ಉತ್ಪಾದಿಸುತ್ತಿರುವ ‘ಕೋವಿಶೀಲ್ಡ್’ ಕೊರೋನಾ ಲಸಿಕೆಯ ಬೆಲೆ ವಿಶ್ವದ ಇತರೆಡೆ ಹೋಲಿಸಿದರೆ ಭಾರತದಲ್ಲೇ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ.
ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್‌ನ 1 ಡೋಸ್ ಬೆಲೆಯನ್ನು ಈವರೆಗೆ ಇರುವ 250 ರು.ನಿಂದ 600 ರು.ಗೆ ಪರಿಷ್ಕರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ದರವನ್ನು 150 ರು.ನಿಂದ 400 ರು.ಗೆ ಹೆಚ್ಚಿಸಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳಿಗೆ ಅದು ಪೂರೈಸುತ್ತಿರುವ ಲಸಿಕೆ ದರವನ್ನು ವಿಶ್ವದ ಇತರ ದೇಶಗಳಲ್ಲಿನ ಕೋವಿಶೀಲ್ಡ್ ಲಸಿಕೆ ದರಕ್ಕೆ ಹೋಲಿಸಿದಾಗ ಭಾರತದಲ್ಲೇ ಹೆಚ್ಚಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
undefined
ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ದರ ಇನ್ನು 1 ಡೋಸ್‌ಗೆ 600 ರು. ಆಗಲಿದೆ. ಇದೇ ದರ, ಸೌದಿ ಅರೇಬಿಯಾದಲ್ಲಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಸುಮಾರು 400 ರುಪಾಯಿ, ಅಮೆರಿಕದಲ್ಲಿ ಹಾಗೂ ಬಾಂಗ್ಲಾದೇಶದಲ್ಲಿ 300 ರುಪಾಯಿ, ಬ್ರೆಜಿಲ್‌ನಲ್ಲಿ 240 ರುಪಾಯಿ, ಬ್ರಿಟನ್‌ನಲ್ಲಿ 225 ರುಪಾಯಿ, ಹಾಗೂ ಯುರೋಪ್ ಒಕ್ಕೂಟದ ದೇಶಗಳಲ್ಲಿ 200ರಿಂದ 300 ರುಪಾಯಿ ನಡುವೆ ಇದೆ.
ಸೀರಂ ಸ್ಪಷ್ಟನೆ:
ವರದಿಯ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸೀರಂ, ‘ಮೊದಲ ಹಂತದಲ್ಲಿ ನಾವು ವಿಶ್ವದೆಲ್ಲೆಡೆ ಸರ್ಕಾರಗಳು ನೀಡಿದ ಮುಂಗಡ ಅನುದಾನದ ಅಡಿ ಲಸಿಕೆ ಸಿದ್ಧಪಡಿಸಿ ತುರ್ತು ಬಳಕೆಗಾಗಿ ನೀಡಿದ್ದೆವು. ಆದರೆ ಈಗ ಕಾಲ ಬದಲಾಗಿದೆ. ಕೊರೋನಾ 2ನೇ ಅಲೆ ಎದ್ದಿರುವ ಕಾರಣ ಜನರ ಜೀವ ಅಪಾಯದಲ್ಲಿದೆ. ಲಸಿಕೆಗೆ ಭಾರೀ ಬೇಡಿಕೆ ಬಂದಿದೆ. ಇದಕ್ಕೆ ಅನುಗುಣವಾಗಿ ಉತ್ಪಾದನೆಯನ್ನು ತೀವ್ರಗತಿಯಲ್ಲಿ ಹೆಚ್ಚಿಸಬೇಕಿದೆ. ಹೀಗಾಗಿ ದರ ಪರಿಷ್ಕರಿಸಲಾಗಿದೆ’ ಎಂದು ಹೇಳಿದೆ.
ಆದರೆ ಕೋವಿಶೀಲ್ಡ್ ಮಾರುಕಟ್ಟೆಯಲ್ಲಿ ಈಗಲೂ ಕೈಗೆಟಕುವ ದರದಲ್ಲಿ ಸಿಗುವ ಲಸಿಕೆ. ಇತರ ಮಾರಣಾಂತಿಕ ಕಾಯಿಲೆಗಳಿಗೆ ಇರುವ ಚಿಕಿತ್ಸಾ ವೆಚ್ಚಕ್ಕಿಂತ ಲಸಿಕೆಯ ದರ ಭಾರೀ ಕಡಿಮೆ’ ಎಂದು ಅದು ಹೇಳಿಕೊಂಡಿದೆ.
ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿ ಹಾಗೂ ಸ್ವೀಡನ್‌ನ ಆಸ್ಟ್ರಾಜೆನೆಕಾ ಕಂಪನಿಗಳು ಜಂಟಿಯಾಗಿ ಸಿದ್ಧಪಡಿಸಿರುವ ಲಸಿಕೆಯನ್ನು ಪುಣೆಯ ಸೀರಂ ಇನ್ಸ್‌ಟಿಟ್ಯೂಟ್ ಉತ್ಪಾದಿಸುತ್ತಿದ್ದು, ವಿಶ್ವವ್ಯಾಪಿ ಪೂರೈಕೆ ಮಾಡುತ್ತಿದೆ.
ಯಾವ ದೇಶದಲ್ಲಿ ಎಷ್ಟು? (1 ಡೋಸ್)
ಭಾರತ 600 ರು.
ಸೌದಿ ಅರೇಬಿಯಾ 400 ರು.
ದ.ಆಫ್ರಿಕಾ 400 ರು.
ಅಮೆರಿಕ 300 ರು.
ಬಾಂಗ್ಲಾದೇಶ 300 ರು.
ಬ್ರೆಜಿಲ್ 240 ರು.
ಬ್ರಿಟನ್ 225 ರು.
ಯುರೋಪ್ ಒಕ್ಕೂಟ 200-300 ರು.