*ವೀಕೆಂಡ್ ಕರ್ಫ್ಯೂ ಕ್ರಮೇಣ ಲಾಕ್ಡೌನ್ ಆಗಬಹುದೆಂಬ ಭೀತಿ
*ಕಳೆದೆರಡು ಅಲೆಗಳ ವೇಳೆ ಅನುಭವಿಸಿದ್ದ ಕಷ್ಟನೆನೆದು ಊರಿಗೆ
*ದೇಶಾದ್ಯಂತ ಜನವರಿ ಅಂತ್ಯದಲ್ಲಿ 3ನೇ ಅಲೆ ಗರಿಷ್ಠಕ್ಕೆ: ಅಧ್ಯಯನ
*ವೇಗವಾಗಿ ಏರಿಕೆಯಾಗಿ ಮತ್ತದೇ ವೇಗದಲ್ಲಿ ಸೋಂಕು ಇಳಿಕೆ ಸಾಧ್ಯತೆ
ನವದೆಹಲಿ (ಜ. 10): ಕಳೆದೆರಡು ಕೋವಿಡ್ ಅಲೆಗಳ (Covid 19) ವೇಳೆ ಲಾಕ್‌ಡೌನ್ ಸಮಯದಲ್ಲಿ ದೇಶಾದ್ಯಂತ ಮಹಾನಗರಗಳಿಂದ ತಮ್ಮ ಊರುಗಳಿಗೆ ಭಾರಿ ಪ್ರಮಾಣದಲ್ಲಿ ಮರುವಲಸೆ ಹೋಗಿದ್ದ ಕಾರ್ಮಿಕರು (Migrant Workers) ಮತ್ತೆ ಈಗ ಲಾಕ್‌ಡೌನ್ ಭೀತಿಯಿಂದ ಊರುಗಳಿಗೆ ಮರಳತೊಡಗಿದ್ದಾರೆ. ವಿಶೇಷವಾಗಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಕೋವಿಡ್ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ವಿಧಿಸುತ್ತಿದ್ದಂತೆ ಇದು ಕ್ರಮೇಣ ಲಾಕ್‌ಡೌನ್ ಆಗಿ ಬದಲಾಗಬಹುದು ಎಂಬ ಭೀತಿಯಿಂದ ಕಾರ್ಮಿಕರು ಗುಳೆ ಆರಂಭಿಸಿದ್ದಾರೆ.
ಕೊರೋನಾದ ಮೊದಲೆರಡು ಅಲೆಗಳ ವೇಳೆ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರು ಆಹಾರವಿಲ್ಲದೆ, ಆರೋಗ್ಯ ಸೌಕರ್ಯಗಳಿಲ್ಲದೆ ಹಾಗೂ ಜೀವನ ನಡೆಸಲು ಹಣವೂ ಇಲ್ಲದೆ ಪಡಬಾರದ ಪಾಡು ಪಟ್ಟಿದ್ದರು. ಲಕ್ಷಾಂತರ ಕಾರ್ಮಿಕರು ಸಿಕ್ಕಸಿಕ್ಕ ವಾಹನ ಏರಿ, ಕೆಲವರು ಕಾಲ್ನಡಿಗೆಯಲ್ಲಿ, ಇನ್ನು ಕೆಲವರು ಬೈಕು, ಸೈಕಲ್‌ಗಳಲ್ಲೂ ಊರುಗಳಿಗೆ ಮರಳಿದ್ದರು. ಅನೇಕರು ದಾರಿ ಮಧ್ಯೆ ಅಸುನೀಗಿದ ದಾರುಣ ಘಟನೆಗಳೂ ನಡೆದಿದ್ದವು. ಆ ಸಮಯದಲ್ಲಿ ನಗರಗಳಲ್ಲೇ ಉಳಿದು ಕಷ್ಟಅನುಭವಿಸಿದವರು ಹಾಗೂ ಕೋವಿಡ್ ಜಾಸ್ತಿಯಾದಂತೆ ಸಾರಿಗೆ ಸೌಕರ್ಯಗಳು ಸಿಗದೆಹೋಗಬಹುದು ಎಂದು ಭಯಕ್ಕೆ ಬಿದ್ದವರು ಈಗಲೇ ಊರುಗಳಿಗೆ ಧಾವಿಸತೊಡಗಿದ್ದಾರೆ.
ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 12,000 ಹೊಸ ಕೇಸ್ ಪತ್ತೆ
ದೆಹಲಿಯಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರದ ಕಾರ್ಮಿಕರು ಹೆಚ್ಚಿದ್ದಾರೆ. ಇವರು ಕಟ್ಟಡ ನಿರ್ಮಾಣ, ರಸ್ತೆ, ಹೋಟೆಲ್ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಜೀವನೋಪಾಯ ಕಂಡುಕೊಂಡಿದ್ದಾರೆ. ಈಗ ವೀಕೆಂಡ್ ಕರ್ಫ್ಯೂ ಜಾರಿಯಾಗಿ ಎರಡು ದಿನ ಕೆಲಸ ಇಲ್ಲವಾಗುತ್ತಿದ್ದಂತೆ ಮುಂದೆ ಲಾಕ್‌ಡೌನ್ ವಿಧಿಸಬಹುದು ಎಂಬ ಭಯದಿಂದ ಅನೇಕರು ಊರುಗಳಿಗೆ ಮರಳುತ್ತಿದ್ದಾರೆ.ದೆಹಲಿಯಲ್ಲಿ ಸದ್ಯ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗುತ್ತಿದ್ದು, ಕೇಸು ನಿಯಂತ್ರಣಕ್ಕೆ ಬಾರದಿದ್ದರೆ ಲಾಕ್‌ಡೌನ್ ಜಾರಿಗೊಳಿಸುವ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಮುಂದಿನ ವಾರ ದೆಹಲಿ, ಮುಂಬೈ 3ನೇ ಅಲೆ ಗರಿಷ್ಠಕ್ಕೆ
ಭಾರತದಲ್ಲಿ ಕೋವಿಡ್ 3ನೇ ಅಲೆಯು (Covid 3rd Wave) ಜನವರಿ ಅಂತ್ಯದ ವೇಳೆಗೆ ಗರಿಷ್ಠಕ್ಕೆ ತಲುಪಬಹುದು. ಆಗ ದೇಶದಲ್ಲಿ ನಿತ್ಯ 4-8 ಲಕ್ಷ ಕೇಸ್ ದೃಢಪಡಬಹುದು ಎಂದು ಐಐಟಿ ಕಾನ್ಪುರ ಪ್ರೊ. ಮನೀಂದ್ರ ಅಗರ್ವಾಲ್ ನೇತೃತ್ವದ ಸೂತ್ರ ಮಾಡೆಲ್ ಆಧರಿತ ಅಧ್ಯಯನ ತಿಳಿಸಿದೆ. ಕೋವಿಡ್ ಪತ್ತೆಯಾಗುತ್ತಿರುವ ಪ್ರಮಾಣ ಮತ್ತು ಸೋಂಕು ವ್ಯಾಪಿಸುತ್ತಿರುವ ದರ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. 3ನೇ ಅಲೆ ಕುರಿತ ಸ್ಪಷ್ಟಚಿತ್ರಣ ಇನ್ನು ಮೂರ್ನಾಲ್ಕು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: PM Covid 19 Meeting ಪ್ರಧಾನಿ ಅಧ್ಯಕ್ಷತೆಯಲ್ಲಿ ಕೋವಿಡ್ 19 ಉನ್ನತ ಮಟ್ಟದ ಸಭೆ ಅಂತ್ಯ, ಮಹತ್ವದ ಸೂಚನೆ ನೀಡಿದ ಮೋದಿ!
ಇದೇ ವೇಳೆ ಮುಂಬೈ ಮತ್ತು ದೆಹಲಿ ಈಗಾಗಲೇ 3ನೇ ಅಲೆಗೆ ಸಾಕ್ಷಿಯಾಗಿವೆ. ಉಭಯ ಮಹಾನಗರಗಳಲ್ಲೂ ಜನವರಿ ಮಧ್ಯದಲ್ಲಿ ಅಂದರೆ ಮುಂದಿನ ವಾರವೇ ಸೋಂಕು ಗರಿಷ್ಠಕ್ಕೆ ತಲುಪಬಹುದು. ದೆಹಲಿಯಲ್ಲಿ ನಿತ್ಯ 50000-60,000 ಕೇಸ್ ದಾಖಲಾದರೆ, ಮುಂಬೈನಲ್ಲಿ 30,000 ಪ್ರಕರಣ ಪತ್ತೆಯಾಗಲಿವೆ ಎಂದು ಅಂದಾಜಿಸಿದ್ದಾರೆ. ಸಾಂಕ್ರಾಮಿಕವೊಂದು ವೇಗವಾಗಿ ಏರಿಕೆಯಾಗಿ ಅದೇ ವೇಗದಲ್ಲಿ ಇಳಿಕೆಯಾಗುತ್ತದೆ. ಈ ಬಾರಿಯೂ ಅದೇ ರೀತಿ ಸೋಂಕು ಇಳಿಮುಖವಾಗಲಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಮಾದರಿಯನ್ನು ನಾವೆಲ್ಲಾ ನೋಡುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕೊರೋನಾ ಸ್ಫೋಟ
ಕರ್ನಾಟಕದಲ್ಲಿ(Karnataka) ಕೊರೋನಾ ಸೋಂಕು (Coronavirus) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇಂದು (ಜ.09) 1,89,499 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಬರೋಬ್ಬರಿ 12,000 ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರಲ್ಲಿ 9,020 ಹೊಸ ಕೇಸ್‍ಗಳು ದೃಢಪಟ್ಟಿವೆ.ಈ ಮೂಲಕ ಕೊರೋನಾ ಸೋಂಕಿರ ಸಂಖ್ಯೆ 3051958ಕ್ಕೆ ಏರಿದ್ರೆ, 38370 ಜನರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 901 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 29,63,957 ಮಂದಿ ಗುಣಮುಖರಾಗಿದ್ದಾರೆ.ನ್ನು ರಾಜ್ಯದಲ್ಲಿ 49,602 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಪಾಸಿಟಿವಿ ರೇಟ್ 6.33ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.