
ಎರಡೂವರೆ ದಶಕಗಳಲ್ಲೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಸ್ಪರ್ಧಾಳು ಇಲ್ಲದ ಕಾರಣ ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರ ಈ ಬಾರಿ ಸ್ವಲ್ಪ ಗ್ಲಾಮರ್ ಕಳೆದುಕೊಂಡಿದೆ. ಕಳೆದ ಬಾರಿ ತುರುಸಿನ ಸ್ಪರ್ಧೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತಿದ್ದ ರಾಹುಲ್ ಗಾಂಧಿ, ಈ ಬಾರಿ ಕ್ಷೇತ್ರವನ್ನೇ ತೊರೆದು ಇದುವರೆಗೂ ತಮ್ಮ ತಾಯಿ ಸೋನಿಯಾ ಸ್ಪರ್ಧಿಸುತ್ತಿದ್ದ ರಾಯ್‌ಬರೇಲಿಗೆ ವಲಸೆ ಹೋಗಿದ್ದಾರೆ.
ಹೀಗಾಗಿ ಅಮೇಠಿಯಲ್ಲಿ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಮತ್ತೊಂದೆಡೆ ಬಿಜೆಪಿಯಿಂದ ಹಾಲಿ ಸಂಸದೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತೊಮ್ಮೆ ಕಣಕ್ಕೆ ಇಳಿದಿದ್ದಾರೆ.
ಶರ್ಮಾ ಗೆಲ್ಲಲು ಸಾಧ್ಯವೇ?
ಕಾಂಗ್ರೆಸ್ ಪಕ್ಷವು ಕಡೇ ಕ್ಷಣದಲ್ಲಿ ಕೆ.ಎಲ್ ಶರ್ಮಾ ಅವರಿಗೆ ಟಿಕೆಟ್ ನೀಡಿದೆ. ಕಿಶೋರಿ ಲಾಲ್ ಶರ್ಮಾ 1983ರಿಂದ ಅಮೇಠಿ ಮತ್ತು ರಾಯ್‌ಬರೇಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಚುನಾವಣಾ ರಣತಂತ್ರಗಾರನಾಗಿ ಕೆಲಸ ಮಾಡಿದವರು. ಅಮೇಠಿ ಸಣ್ಣ ಬೀದಿ ಬೀದಿಗಳೂ ಶರ್ಮಾಗೆ ಗೊತ್ತು ಎನ್ನುವಷ್ಟು ಮತದಾರರ ಬಗ್ಗೆ ಅರಿವಿದೆ. ದಶಕಗಳ ಕಾಲ ಗಾಂಧಿ ಕುಟುಂಬದ ರಾಜೀವ್, ಸೋನಿಯಾ, ರಾಹುಲ್ ಸುಲಭವಾಗಿ ಲೋಕಸಭೆಗೆ ಪ್ರವೇಶಿಸುವಲ್ಲಿ ಇವರ ಪಾತ್ರ ಹಿರಿದು. ಹೀಗಾಗಿ ಅವರು ಕಣಕ್ಕೆ ಇಳಿದರೆ ಸ್ಮೃತಿ ಸೋಲಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿದೆ.
ಚುನಾವಣೆ ಮುಗಿಯುವವರೆಗೂ ಅಮೇಠಿ, ರಾಯ್‌ಬರೇಲಿ ಪ್ರಿಯಾಂಕಾ ಠಿಕಾಣಿ, ಸಹೋದರನನ್ನು ಗೆಲ್ಲಿಸಲು ಪಣ
ಆದರೆ ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜೊತೆಗೆ ಹಲವು ನಾಯಕರು ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿರುವುದು ಇವರಿಗೆ ತಿರುಗೇಟು ನೀಡಿದರೆ ಗಾಂಧಿಯೇತರ ಕುಟುಂಬದ ವ್ಯಕ್ತಿ ಅಮೇಠಿಯಲ್ಲಿ ಗೆದ್ದ ಇತಿಹಾಸ ನಿರ್ಮಿಸಲು ಅಡ್ಡಿಯಾಗಬಹುದು.
ಹೇಗಿದೆ ಸ್ಮೃತಿ ಪ್ರಚಾರ?
ಸ್ಮೃತಿ ಇರಾನಿ ಅವರು ಚುನಾವಣೆ ಘೋಷಣೆಯಾದ ಬಳಿಕ ಕ್ಷೇತ್ರದಲ್ಲೇ ಇದ್ದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಇದರ ಜೊತೆಗೆ ಕಳೆದ 5 ವರ್ಷಗಳಲ್ಲಿ ತಾವು ಕ್ಷೇತ್ರಕ್ಕೆ ನೀಡಿದ ಕೊಡುಗೆ, ರಾಜ್ಯದಲ್ಲಿನ ಯೋಗಿ ಸರ್ಕಾರದ ಪ್ರಭಾವ, ಕೇಂದ್ರದ ಮೋದಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ತಮ್ಮ ಕೈಹಿಡಿಬಹುದು ಎಂಬುದು ಅವರ ಲೆಕ್ಕಾಚಾರ. ಅಲ್ಲದೆ ಕಳೆದ 5 ವರ್ಷಗಳಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ತನ್ನ ಸಂಘಟನೆಯನ್ನು ಬೂತ್ ಮಟ್ಟಕ್ಕೆ ವಿಸ್ತರಿಸಿದ್ದು, ಬಹುತೇಕ ಗ್ರಾಮ ಮುಖಂಡರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಮೃತಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮತ ಸೆಳೆಯುವ ಸಾಧ್ಯತೆಯಿದೆ.
ಸ್ಟಾರ್ ಕ್ಷೇತ್ರ: ಅಮೇಠಿ
ರಾಜ್ಯ: ಉತ್ತರ ಪ್ರದೇಶ
ಮತದಾನದ ದಿನ: ಮೇ. 20
ವಿಧಾನಸಭಾ ಕ್ಷೇತ್ರಗಳು: 5
ಪ್ರಮುಖ ಅಭ್ಯರ್ಥಿಗಳು
ಬಿಜೆಪಿ - ಸ್ಮೃತಿ ಇರಾನಿ
ಕಾಂಗ್ರೆಸ್ - ಕೆ.ಎಲ್ ಶರ್ಮಾ
ಬಿಎಸ್‌ಪಿ - ನಾನ್ಹೆ ಸಿಂಗ್ ಚೌಹಾಣ್
2019ರ ಫಲಿತಾಂಶ:
ಗೆಲುವು: ಬಿಜೆಪಿ - ಸ್ಮೃತಿ ಇರಾನಿ
ಸೋಲು: ಕಾಂಗ್ರೆಸ್ - ರಾಹುಲ್ ಗಾಂಧಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ