
ಉತ್ತರ ಪ್ರದೇಶದ ರಾಜಕೀಯ ಅಖಾಡ ರಂಗೇರಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಸೀಟು ಹಂಚಿಕೆ ಗೊಂದಲ ಈಗ ತಾರಕಕ್ಕೇರಿದೆ. ಮೊದಲ ಹಂತದಲ್ಲಿ ಕಾಂಗ್ರೆಸ್‌ಗೆ 26 ಸ್ಥಾನಗಳನ್ನು ನೀಡುವುದಾಗಿ ಸಮಾಜವಾದಿ ಪಕ್ಷ ಘೋಷಿಸಿದೆ. ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕ ಇಮ್ರಾನ್ ಮಸೂದ್, ನಾವೇನು ಭಿಕಾರಿಗಳಾ? ನಮಗೂ ಗೌರವಯುತ ಸ್ಥಾನಗಳನ್ನು ನೀಡಬೇಕು ಎಂದು ಕಿಡಿಕಾರಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಲಕ್ನೋದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಚುನಾವಣೆ ಮೈತ್ರಿಯೊಂದಿಗೆ ಸಾಗುತ್ತದೆ. ಇಮ್ರಾನ್ ಮಸೂದ್ ಎಚ್ಚರಿಕೆಯಿಂದ ಮಾತನಾಡಬೇಕು, ಎಲ್ಲವೂ ಸರಿಯಾಗಿಯೇ ನಡೆಯುತ್ತದೆ ಎಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಆದರೆ, ಕಾಂಗ್ರೆಸ್ ಕೊನೆ ಹಂತದಲ್ಲಿ ಏರುಪೇರು ಮಾಡಿದರೆ, ಅದಕ್ಕೆ ಪ್ರತಿಯಾಗಿ ಸಮಾಜವಾದಿ ಪಕ್ಷ 'ಪ್ಲಾನ್ ಬಿ' ಸಿದ್ಧಪಡಿಸಿಕೊಂಡಿದೆ. ಅಲ್ಲದೇ, ತೆರೆಯ ಮರೆಯಲ್ಲೇ ಹೊಸ ದೋಸ್ತಿಗೆ ಕಸರತ್ತು ನಡೆಸುತ್ತಿದೆ ಎನ್ನಲಾಗಿದೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಒಂದು ವೇಳೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಬಿದ್ದರೆ ಪರ್ಯಾಯ ದಾರಿ ಕಂಡುಕೊಳ್ಳಲು ಅಖಿಲೇಶ್ ಯಾದವ್ ಮುಂದಾಗಿದ್ದಾರೆ. ಈಗಾಗಲೇ ಅವರು ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಮತ್ತು ಆಮ್ ಆದ್ಮಿ ಪಕ್ಷದ (ಆಪ್) ನಾಯಕ ಸಂಜಯ್ ಸಿಂಗ್ ಅವರೊಂದಿಗೆ ತೆರೆಯ ಮರೆಯಲ್ಲೇ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಸಣ್ಣ ಪಕ್ಷಗಳನ್ನು ಒಗ್ಗೂಡಿಸುವ ಮೂಲಕ ತನ್ನ ಬಲ ಪ್ರದರ್ಶಿಸಿ, ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಒತ್ತಡ ಹೇರುವ ತಂತ್ರವನ್ನು ಸಮಾಜವಾದಿ ಪಕ್ಷ ಹೆಣೆದಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶೇ. 97ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು ಮತ್ತು 62 ಕ್ಷೇತ್ರಗಳಲ್ಲಿ 'ನೋಟಾ'ಗಿಂತ ಕಡಿಮೆ ಮತ ಪಡೆದಿದ್ದರು ಎಂಬ ಹಳೆಯ ಅಂಕಿಅಂಶಗಳನ್ನು ಮುಂದಿಟ್ಟು ಸಮಾಜವಾದಿ ಪಕ್ಷವು ಕಾಂಗ್ರೆಸ್‌ನ ಸೀಟು ಬೇಡಿಕೆಯನ್ನು ಕಟ್ಟಿಹಾಕಲು ಯತ್ನಿಸುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲು ಅಖಿಲೇಶ್ ಯಾದವ್ ಅವರ 'ಪಿಡಿಎ' (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ) ಸೂತ್ರವೇ ಕಾರಣ ಎಂದು ಎಸ್‌ಪಿ ನಾಯಕರು ವಾದಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, ನಾವು ಶೂನ್ಯವಾಗಿದ್ದರೂ ಮೈತ್ರಿ ಮಾಡಿಕೊಂಡ ಕಡೆ ಗೆಲುವಿನ ಶಕ್ತಿಯನ್ನು ಹತ್ತು ಪಟ್ಟು ಹೆಚ್ಚಿಸುತ್ತೇವೆ ಎಂದು ಇಮ್ರಾನ್ ಮಸೂದ್ ತಿರುಗೇಟು ನೀಡಿದ್ದಾರೆ.
ಸಮಾಜವಾದಿ ಪಕ್ಷವು ತರಾತುರಿಯಲ್ಲಿ ಘೋಷಿಸಿದ ಮೊದಲ 5 ಅಭ್ಯರ್ಥಿಗಳ ಪಟ್ಟಿಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ನಾಲ್ವರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಈ ಮೂಲಕ ರಾಜ್ಯದ ಮುಸ್ಲಿಂ ಮತಗಳ ಅಸಲಿ ವಾರಸುದಾರರು ನಾವೇ ಎಂಬ ಸಂದೇಶ ರವಾನಿಸಿ, ಕಾಂಗ್ರೆಸ್‌ಗೆ ಚೆಕ್‌ಮೇಟ್ ನೀಡುವ ತಂತ್ರ ಹೆಣೆದಿದೆ. ಒಂದೆಡೆ ಎಸ್‌ಪಿ ಜೊತೆ ಸೀಟು ಹಂಚಿಕೆ ತಿಕ್ಕಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ನಲ್ಲೂ ಒಳಜಗಳ ತೀವ್ರಗೊಂಡಿದೆ. ಲಕ್ನೋದಲ್ಲಿ ಖರ್ಗೆ ಭಾಗವಹಿಸಿದ್ದ ಸಂವಿಧಾನ ದಿನದ ಕಾರ್ಯಕ್ರಮಕ್ಕೆ ಅರ್ಧಕ್ಕಿಂತ ಹೆಚ್ಚು ವಕ್ತಾರರು ಗೈರಾಗಿದ್ದು, ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲೂ ಆರಂಭದಲ್ಲಿ 11 ಸ್ಥಾನಗಳ ಆಫರ್ ನೀಡಿದ್ದ ಎಸ್‌ಪಿ ಕೊನೆಗೆ 17 ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು; ಅದೇ ಮಾದರಿಯಲ್ಲಿ ಈ ಬಾರಿಯೂ 26ರಿಂದ ಶುರುವಾದ ಮಾತುಕತೆ ಅಂತಿಮವಾಗಿ 40-45 ಸ್ಥಾನಗಳಿಗೆ ಬಂದು ನಿಲ್ಲಬಹುದು ಎಂಬ ಲೆಕ್ಕಾಚಾರವಿದೆ. ಈ ನಡುವೆ, ಡಿಸೆಂಬರ್ 10ರಂದು ಸಹರಾನ್‌ಪುರದಿಂದ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರ ಆರಂಭಿಸಲು ಸಜ್ಜಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ