
ಹೈದರಾಬಾದ್ (ಡಿ.9): ತೆಲಂಗಾಣದ ಎಲ್ಲಾ 8 ಬಿಜೆಪಿ ಶಾಸಕರು ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಎಲ್ಲಾ ಶಾಸಕರು ಹಂಗಾಮಿ ಸ್ಪೀಕರ್ ಆಗಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನ ಅಕ್ಬರುದ್ದೀನ್ ಓವೈಸಿ ಅವರನ್ನು ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.. ಈ ಶಾಸಕರು ರಾಜ್ಯಪಾಲ ತಮಿಳಿಸೈ ಸುಂದರರಾಜನ್ ಅವರನ್ನು ಭೇಟಿಯಾಗ ದೂರು ನೀಡಿದ್ದಾರೆ. ಅಕ್ಬರುದ್ದೀನ್ ಎಐಎಂಐಎಂ ಶಾಸಕ ಮತ್ತು ಅಸಾದುದ್ದೀನ್ ಓವೈಸಿ ಅವರ ಸಹೋದರ. ಈ ಕುರಿತು ತೆಲಂಗಾಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುಜ್ಜುಲಾ ಪ್ರೇಮೇಂದ್ರ ರೆಡ್ಡಿ ಅವರು, ಅಕ್ಬರುದ್ದೀನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಮಾಡಿದ ಕಾರಣ ನಾವು ಪ್ರಮಾಣ ವಚನವನ್ನು ಬಹಿಷ್ಕರಿಸಿದ್ದೇವೆ. ಹಿರಿಯ ಶಾಸಕರನ್ನು ಕಡೆಗಣಿಸಿ ಓವೈಸಿ ಅವರನ್ನು ಆ ಸ್ಥಾನಕ್ಕೆ ಕೂರಿಸಲಾಗಿದೆ. ಕಾಂಗ್ರೆಸ್ ಸುಳ್ಳು ಹೇಳುತ್ತದೆ. ತೆಲಂಗಾಣದಲ್ಲಿ ರಾಜಕೀಯ ಆಕಾಂಕ್ಷೆಯ ಕಾರಣದಿಂದಾಗಿ ಅವರು ಓವೈಸಿಯನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದೆ ಎಂದು ದೂರಿಸಿದ್ದಾರೆ.
ಅಕ್ಬರುದ್ದೀನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರು ಈ ಕುರಿತಾಗಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಡಿಸೆಂಬರ್ 9 ರಂದು ಎಲ್ಲಾ ಶಾಸಕರು ಅಕ್ಬರುದ್ದೀನ್ ಓವೈಸಿ ಅವರ ಮುಂದೆ ಇರಬೇಕೆಂದು ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದ್ದು, ಪ್ರಮಾಣ ವಚನ ಸ್ವೀಕರಿಸುವಂತೆ ಹೇಳಿದೆ. ಈ ರಾಜಾ ಸಿಂಗ್ ಬದುಕಿರುವವರೆಗೂ ಎಐಎಂಐಎಂ ಮುಂದೆ ಪ್ರಮಾಣ ವಚನ ಸ್ವೀಕರಿಸುವುದಿಲ್ಲ, ಅಕ್ಬರುದ್ದೀನ್ ಓವೈಸಿ ಮುಂದೆ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಸಾಮಾನ್ಯವಾಗಿ ಸದನದ ಅತ್ಯಂತ ಹಿರಿಯ ಶಾಸಕರನ್ನು ಹಂಗಾಮಿ ಸಭಾಪತಿಯನ್ನಾಗಿ ಮಾಡಲಾಗುತ್ತದೆ. ಹೊಸ ಶಾಸಕರಿಗೆ ಪ್ರಮಾಣ ವಚನ ಬೋಧಿಸುವುದು ಮತ್ತು ವಿಧಾನಸಭಾಧ್ಯಕ್ಷರನ್ನು ಆಯ್ಕೆ ಮಾಡುವುದು ಅವರ ಕೆಲಸವಾಗಿರುತ್ತದೆ.
ಗೋಶಾಮಹಲ್‌ನ ಬಿಜೆಪಿ ಶಾಸಕರಾಗಿರುವ ಟಿ ರಾಜಾ ಸಿಂಗ್, ನೀವು ಸಹ ಬಿಆರ್‌ಎಸ್ ಮಾರ್ಗವನ್ನು ಅನುಸರಿಸಲು ಬಯಸುತ್ತೀರಾ ಎಂದು ನಾನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಕೇಳಲು ಬಯಸುತ್ತೇನೆ. 2018 ರಲ್ಲಿ, ಬಿಆರ್‌ಎಸ್ ಸರ್ಕಾರವು ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಮಾಡಿತು, ಆಗ ನಾವು ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ಅವರು (ಅಕ್ಬರುದ್ದೀನ್ ಓವೈಸಿ) ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇಲ್ಲಿ ವಾಸ ಮಾಡುವ ಹಿಂದೂಗಳನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಾರೆ. ಅಂಥವರ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತೇವೆಯೇ? ಬಿಆರ್‌ಎಸ್, ಎಐಎಂಐಎಂ ಮತ್ತು ಬಿಜೆಪಿ ಒಂದೇ ಎಂದು ಹೇಳುತ್ತಿದ್ದ ರೇವಂತ್ ರೆಡ್ಡಿ, ಈಗ ಹೇಳಿ ಎಐಎಂಐಎಂ ಜೊತೆ ನಿಮ್ಮ ಸಂಬಂಧವೇನು? ಎಂದು ಪ್ರರ್ಶನೆ ಮಾಡಿದ್ದಾರೆ.
ಅಸೆಂಬ್ಲಿಯಲ್ಲಿ ಇನ್ನೂ ಅನೇಕ ಹಿರಿಯ ಶಾಸಕರಿದ್ದಾರೆ, ಅವರನ್ನು ನೀವು ಹಂಗಾಮಿ ಸ್ಪೀಕರ್ ಮಾಡಬಹುದಿತ್ತು, ಆದರೆ ಅಲ್ಪಸಂಖ್ಯಾತರನ್ನು ಮೆಚ್ಚಿಸಲು ಉದ್ದೇಶಪೂರ್ವಕವಾಗಿ ದೊಡ್ಡ ತಪ್ಪು ಮಾಡಿದ್ದೀರಿ. ಯಾವುದೇ ಸಂದರ್ಭದಲ್ಲೂ ಬಿಜೆಪಿಯ ಯಾವ ಒಬ್ಬ ಶಾಸಕರು ಅಕ್ಬರುದ್ದೀನ್ ಓವೈಸಿ ಮುಂದೆ ಪ್ರಮಾಣ ವಚನ ಸ್ವೀಕಾರ ಮಾಡೋದಿಲ್ಲ ಎಂದಿದ್ದಾರೆ. ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 30 ರಂದು ಮತದಾನ ನಡೆದಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಬಂದಿತ್ತು. ಇದರಲ್ಲಿ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿದೆ.
ತೆಲಂಗಾಣ ಹೊಸ ಸಿಎಂ ಪ್ರಮಾಣವಚನ ಬೆನ್ನಲ್ಲೇ ಮಾಜಿ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು!
ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) 39 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿಗೆ 8, ಎಐಎಂಐಎಂಗೆ 7 ಮತ್ತು ಸಿಪಿಐಗೆ ಒಂದು ಸ್ಥಾನ ಬಂದಿದೆ.. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಡಿಸೆಂಬರ್ 3 ರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ರೇವಂತ್ ರೆಡ್ಡಿ ಸಂಪುಟದಲ್ಲಿ ಒಬ್ಬ ಮುಸ್ಲಿಂ ಸಚಿವನೂ ಇಲ್ಲ: ಬಂದೂಕು ಹಿಡಿದಿದ್ದ ನಕ್ಸಲ್ ಸೀತಕ್ಕ ಈಗ ತೆಲಂಗಾಣ ಸಚಿವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ