ಎನ್‌ಐಎ ದಾಳಿಯೇ ಮುನ್ನುಡಿ, ಪಿಎಫ್‌ಐಗೆ ಶೀಘ್ರ ಕೇಂದ್ರ ನಿಷೇಧ?

By Kannadaprabha NewsFirst Published Sep 23, 2022, 7:47 AM IST
Highlights

ದೇಶಾದ್ಯಂತ ಎನ್‌ಐಎ ಹಾಗೂ ಇಡಿ ದಾಳಿಯ ನೆಪದಲ್ಲಿ ಪಿಎಫ್‌ಐ ಸಂಘಟನೆಯನ್ನು ದೇಶದಲ್ಲಿ ನಿಷಧೀಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ಮಾಡುತ್ತಿದೆ. ಪಿಎಫ್‌ಐ ಮೇಲೆ ದಾಳಿ ನಡೆದ ಬೆನ್ನಲ್ಲಿಯೇ ಆ ಸಂಘಟನೆಯ ಸದಸ್ಯರು ವಿವಿದೆಡೆ ಪ್ರತಿಭಟನೆಗೆ ಇಳಿದಿದ್ದಾರೆ.

ನವದೆಹಲಿ (ಸೆ. 22): ಇತ್ತೀಚೆಗೆ ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ, ದೇಶವಿರೋಧಿ ಕೆಲಸಗಳು ಹಾಗೂ ಇತ್ಯಾದಿ ಕೃತ್ಯಗಳಲ್ಲಿ ಪಾತ್ರ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ವಿವಾದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಕೇಂದ್ರ ಸರ್ಕಾರ ಶೀಘ್ರ ನಿಷೇಧಿಸುವ ಸಾಧ್ಯತೆ ಇದೆ. ಇದರ ಭಾಗವಾಗಿಯೇ ಈಗ ದೇಶಾದ್ಯಂತ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ದಾಳಿ ನಡೆದಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸರ್ಕಾರದ ಮೂಲಗಳು, ‘ಪಿಎಫ್‌ಐ ನಿಷೇಧ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಪರಿಸ್ಥಿತಿ ಅವಲೋಕಿಸಲಾಗುತ್ತಿದೆ’ ಎಂದು ಹೇಳಿವೆ. ಈಗಾಗಲೇ ಕೆಲವು ರಾಜ್ಯಗಳು ಪಿಎಫ್‌ಐ ನಿಷೇಧಕ್ಕೆ ಯತ್ನಿಸುತ್ತಿವೆ. ಈಗ ಒಮ್ಮೆಲೇ ಕೇಂದ್ರ ಸರ್ಕಾರವು ಪಿಎಫ್‌ಐ ನಿಷೇಧಿಸಿದರೆ ಆ ಸಂಘಟನೆಯ ದೇಶವ್ಯಾಪಿ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ ಹಾಗೂ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಾಗುತ್ತದೆ. ಕಳೆದ ಏಪ್ರಿಲ್‌ 15ರಂದೂ ಪಿಎಫ್‌ಐ ನಿಷೇಧಕ್ಕೆ ಕೇಂದ್ರ ಚಿಂತಿಸುತ್ತಿದೆ ಎಂದು ವರದಿಗಳು ಹೇಳಿದ್ದವು. ಸಾಕ್ಷ್ಯಾಧಾರಗಳಿಲ್ಲದೆ ಪಿಎಫ್‌ಐಅನ್ನು ಬ್ಯಾನ್‌ ಮಾಡಿದಲ್ಲಿ ಅದು ಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಆದರೆ, ಎಲ್ಲಾ ಸಾಕ್ಷ್ಯಗಳನ್ನು ಒಟ್ಟುಗೂಡಿಸಿ ಬ್ಯಾನ್‌ ಮಾಡಿದರೆ ಸಮಸ್ಯೆ ಉದ್ಬವಿಸಲಾರದು ಎನ್ನುವ ಕಾರಣಕ್ಕೆ ಪಿಎಫ್‌ಐ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ಕೇಂದ್ರ ಸರ್ಕಾರ ಒಟ್ಟು ಮಾಡಿದೆ.

ಮುಸ್ಲಿಂ ಸಮಾಜ ಉದ್ಧಾರದ ಸೃಷ್ಟಿಯಾಗಿದ್ದ ಪಿಎಫ್‌ಐ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)2006ರಲ್ಲಿ ಹುಟ್ಟಿದ ಸಂಘಟನೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳದ 3 ಸಂಘಟನೆಗಳ ಒಗ್ಗೂಡುವಿಕೆಯಿಂದ ಸೃಷ್ಟಿಯಾದ ಸಂಘಟನೆ ಇದು. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯವನ್ನು ಉದ್ಧರಿಸಬೇಕು ಎಂಬ ಧ್ಯೇಯದೊಂದಿಗೆ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಕರ್ನಾಟಕದ ಡಿಗ್ನಿಟಿ ಫಾರ್‌ ಫೋರಂ, ತಮಿಳುನಾಡಿನ ಮನಿತ ನೀತಿ ಪಾಸರೈ ಹಾಗೂ ಕೇರಳದ ನ್ಯಾಷನಲ್‌ ಡೆವಲಪ್‌ಮೆಂಟ್‌ ಫ್ರಂಟ್‌ ಸಂಘಟನೆಯ ಸದಸ್ಯರು ಕೇರಳದ ಮಲಪ್ಪುರಂನ ಮಂಜೇರಿಯಲ್ಲಿ ಸಭೆ ಸೇರಿ ವಿಲೀನಕ್ಕೆ ನಿರ್ಧರಿಸಿದರು. ಕೆಲವು ತಿಂಗಳ ಬಳಿಕ ಬೆಂಗಳೂರಿನಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಅಧಿಕೃತವಾಗಿ ವಿಲೀನ ಪ್ರಕಟಿಸಿದರು. ಮೊದಲು ಸಮಾಜ ಉದ್ಧಾರ ಎಂಬ ಧ್ಯೇಯವನ್ನು ಪಿಎಫ್‌ಐ ಹೊಂದಿತ್ತಾದರೂ, ನಂತರ ಮುಸ್ಲಿಂ ಯುವಕರನ್ನು ತೀವ್ರವಾದಿಗಳನ್ನಾಗಿ ಮಾಡಿ ಭಯೋತ್ಪಾದನೆಯತ್ತ (terrorism activity) ನೂಕುತ್ತಿದೆ ಎಂಬ ಆರೋಪಗಳು ಸಂಘಟನೆ ಮೇಲೆ ಕೇಳಿಬಂದವು.

NIA Raid: ಪಿಎಫ್‌ಐ - ಉಗ್ರ ಸಂಘಟನೆಗಳ ನಂಟಿನ ಬಗ್ಗೆ ತನಿಖೆ: 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಪಿಎಫ್‌ಐ ಮೇಲೆ ದೇಶವಿರೋಧಿ ಕೃತ್ಯದ ಆರೋಪ: ಮುಸ್ಲಿಮರ ಉದ್ಧಾರದ ಗುರಿ ಇಟ್ಟುಕೊಂಡು ಸ್ಥಾಪನೆ ಆಗಿರುವ ಪಿಎಫ್‌ಐ (PFI) ಮೇಲೆ ದೇಶವಿರೋಧಿ ಚಟುವಟಿಕೆ, ಹಿಂಸಾಚಾರ, ಉಗ್ರವಾದಕ್ಕೆ ಬೆಂಬಲ, ಭಯೋತ್ಪಾದನೆಗೆ ಹಣ ಸಂಗ್ರಹ, ಮುಸ್ಲಿಂ ಯುವಕರನ್ನು ತೀವ್ರವಾದಕ್ಕೆ ನೂಕುವುದು- ಇತ್ಯಾದಿ ಆರೋಪಗಳಿವೆ. ಸ್ವತಃ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೂಡಾ ಬೆಂಗಳೂರು ಸರಣಿ ಸ್ಫೋಟ, ಕೇರಳದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಕೊಲೆ ಪ್ರಕರಣ, ಕೇರಳದ ಲವ್‌ ಜಿಹಾದ್‌ನಲ್ಲಿ ಪಿಎಫ್‌ಐ ಮತ್ತು ಅದರ ರಾಜಕೀಯ ಮುಖವಾಣಿ ಎಸ್‌ಡಿಪಿಐ ಪಾತ್ರವಿದೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿತ್ತು.

ಜಂಟಿ ಆಕ್ಷನ್‌ ಟೀಮ್‌ ರಚನೆ, ವಿಧಾನಸಭೆ ಚುನಾವಣೆಗೂ ಮುನ್ನ ಪಿಎಫ್‌ಐ ಬ್ಯಾನ್‌?

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟ, ಕರ್ನಾಟಕದ ಪುತ್ತೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen Nettar) ಕೊಲೆ ಪ್ರಕರಣ, ಬೆಂಗಳೂರಿನ ಆರೆಸ್ಸೆಸ್‌ ಮುಖಂಡ ರುದ್ರೇಶ್‌ (Rudresh Murder) ಕೊಲೆ ಕೇಸು, ಇತ್ತೀಚಿನ ನೂಪುರ್‌ ಶರ್ಮಾ (Nupur Sharma) ವಿರೋಧಿ ಗಲಭೆಗಳು, ಬೇಸಿಗೆಯಲ್ಲಿ ದೇಶದಲ್ಲಿ ನಡೆದ ರಾಮನವಮಿ ಗಲಭೆ ಪ್ರಕರಣಗಳು, ಉತ್ತರ ಪ್ರದೇಶದ ಹಾಥ್ರಸ್‌ ಗಲಭೆಯಲ್ಲೂ ಪಿಎಫ್‌ಐ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು. ಕೇರಳದ ಕೆಲವರು ಐಸಿಸ್‌ ಉಗ್ರ ಸಂಘಟನೆ ಸೇರಿದ್ದರ ಹಿಂದೆಯೂ ಪಿಎಫ್‌ಐ ಕೈವಾಡದ ಗುಮಾನಿ ಇತ್ತು. ಜೊತೆಗೆ ಇತ್ತೀಚೆಗೆ ಆಂಧ್ರ,ತೆಲಂಗಾಣದಲ್ಲಿ ನಡೆಸಿದ ದಾಳಿ ವೇಳೆ ಭಯೋತ್ಪಾದನಾ ಚಟುವಟಿಕೆ ತರಬೇತಿ ನೀಡಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಪಿಎಫ್‌ಐ ನಿಷೇಧಕ್ಕೆ ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಲವು ಪಿಎಫ್‌ಐ ನಾಯಕರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಚಾರ್ಜ್‌ಶೀಟ್‌ ಕೂಡ ಹಾಕಿದೆ.

click me!