ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆದಿತ್ಯ ಠಾಕ್ರೆ?

By Web DeskFirst Published Oct 11, 2019, 4:49 PM IST
Highlights

ನಾನು ಜವಾಬ್ದಾರಿಯಿಂದ ದೂರ ಓಡುವವನಲ್ಲ. ಹಾಗಂತ ಕುರ್ಚಿಯ ಹಿಂದೆ ಓಡುವವನೂ ಅಲ್ಲ. ನಾನು ಬೆನ್‌ ಸ್ಟೋಕ್ಸ್‌ ರೀತಿಯ ಆಟಗಾರ. ಚೆಂಡು ಹೇಗೆ ಬರುತ್ತದೆಯೋ ಹಾಗೆ ಬ್ಯಾಟಿಂಗ್‌ ಮಾಡುತ್ತೇನೆ. ಪಕ್ಷದ ನಿರ್ಧಾರ ಒಪ್ಪಿಕೊಂಡು ಸ್ಪರ್ಧಿಸುತ್ತಿದ್ದೇನೆ. ಇಡೀ ಮಹಾರಾಷ್ಟ್ರ ನನ್ನ ಕರ್ಮಭೂಮಿ- ಆದಿತ್ಯ ಠಾಕ್ರೆ 

ಇದೇ ಅಕ್ಟೋಬರ್‌ 21ರಂದು ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಶಿವಸೇನೆಯ ಮುಖ್ಯಸ್ಥರಾದ ಠಾಕ್ರೆ ಕುಟುಂಬದಿಂದ ಇದೇ ಮೊದಲ ಬಾರಿಗೆ ಉದ್ಧವ್‌ ಠಾಕ್ರೆ ಪುತ್ರ 29 ವರ್ಷದ ಆದಿತ್ಯ ಠಾಕ್ರೆ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಎಂದು ಶಿವಸೇನೆ ಬಿಂಬಿಸುತ್ತಿದೆ. ಈ ಬಗ್ಗೆ ಸ್ವತಃ ಆದಿತ್ಯ ಠಾಕ್ರೆ ಕುತೂಹಲಕಾರಿ ಸಂಗತಿಗಳನ್ನು ಇಂಡಿಯಾ ಟುಡೇ ಜೊತೆ ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಶಿವಸೇನೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಸಿದ್ಧವಾಗಿದೆಯೇ?

ಖಂಡಿತ ನಾವು ಸಿದ್ಧರಾಗಿದ್ದೇವೆ. ಚುನಾವಣೆ ಎನ್ನುವುದು ಚುನಾವಣೆಯ ಕಾಲಕ್ಕೆ ಮಾತ್ರ ಸೀಮಿತವಲ್ಲ. 5 ವರ್ಷಗಳ ಕಾಲ ಜನರ ನಿರೀಕ್ಷೆಗಳನ್ನು ವಿಧಾನಸಭೆ ಅಥವಾ ಸಂಸತ್‌ಗೆ ಹೊತ್ತೊಯ್ದಿರುತ್ತೇವೆ.

ಚುನಾವಣೆಗೂ ಮುನ್ನ ಸ್ವಪಕ್ಷೀಯರಿಂದಲೇ ಶಿವಸೇನೆಗೆ ಬಿಗ್ ಶಾಕ್!

- ಬಿಜೆಪಿ-ಶಿವಸೇನೆ ಮೈತ್ರಿ ಎಷ್ಟು ಬಲವಾಗಿದೆ?

ಮೈತ್ರಿಯಲ್ಲಿ ನಾವು ಪ್ರಬಲವಾಗಿದ್ದೇವೆ. ಲೋಕಸಭಾ ಚುನಾವಣೆಯಲ್ಲಿಯೇ 40ಕ್ಕೂ ಹೆಚ್ಚಿನ ಸೀಟು ಗೆದ್ದಿದ್ದೇವೆ. ಇದು ಅಧಿಕಾರಕ್ಕಾಗಿನ ಮೈತ್ರಿ ಅಲ್ಲ. ಜನರಿಗೋಸ್ಕರ, ಅಭಿವೃದ್ಧಿಗೋಸ್ಕರ ಮಾಡಿಕೊಂಡ ಮೈತ್ರಿ.

- ಬಿಜೆಪಿಯ ದೇವೇಂದ್ರ ಫಡ್ನವೀಸ್‌ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ನಿಮ್ಮ ನಾಯಕರು ನೀವು ಮುಂದಿನ ಸಿಎಂ ಎನ್ನುತ್ತಿದ್ದಾರೆ. ಆದರೆ ನೀವು ಮಾತ್ರ ಎಲ್ಲೂ ನಾನು ಆಕಾಂಕ್ಷಿ ಎಂದು ಹೇಳಿಲ್ಲ. ಮುಖ್ಯಮಂತ್ರಿಯಾಗಲು ಸಿದ್ಧರಿದ್ದೀರಾ?

ಆಸೆ ಅಥವಾ ಅಧಿಕಾರದ ಹಿಂದೆ ಓಡಿದರೆ ನನಗೆ ಈ ಪ್ರಕ್ರಿಯೆಯ ಹಿಂದಿರುವ ಸಂತೋಷವನ್ನೇ ಅನುಭವಿಸಲಾಗದು. ಪ್ರತಿ ರಾಜಕೀಯ ಪಕ್ಷಕ್ಕೂ ದೊಡ್ಡ ಕನಸು ಕಾಣುವ ಹಕ್ಕಿದೆ. ಬಿಜೆಪಿ ಏನು ಮಾಡುತ್ತಿದೆ ನೋಡಿ. ಲೋಕಸಭೆಯಲ್ಲಿ ಇಬ್ಬರೇ ಇಬ್ಬರು ಪ್ರತಿನಿಧಿಸುತ್ತಿದ್ದಾಗಲೇ ಬಿಜೆಪಿ ಪ್ರಧಾನಿಯಾಗುವ ಕನಸು ಕಂಡಿತ್ತು. ಕೇವಲ ಎರಡೇ ಎರಡು ಸಂಸದರಿದ್ದ ಪಕ್ಷ ಅದು. ಈಗ ಬಿಜೆಪಿಯಲ್ಲಿ 300 ಸದಸ್ಯರಿದ್ದಾರೆ. ರಾಜಕೀಯದಲ್ಲಿ ನಿಮ್ಮ ಸ್ವಂತ ಕನಸುಗಳ ಬೆನ್ನೇರಿ ಹೋಗಲು ಸಾಧ್ಯವಿಲ್ಲ. ಅನ್ಯರ ಕನಸುಗಳನ್ನು ನನಸು ಮಾಡಿದರೆ ಜನರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಸಾಧ್ಯವಾದಷ್ಟುಜನರ ಸೇವೆ ಮಾಡಬೇಕೆಂಬುದು ನನ್ನ ಕನಸು. ಮುಖ್ಯಮಂತ್ರಿಯಾಗಬೇಕೇ ಇಲ್ಲವೇ ಎಂಬುದನ್ನು ಜನರು, ಮೈತ್ರಿ ನಾಯಕರು ನಿರ್ಧರಿಸುತ್ತಾರೆ.

ಸೀಟು ಹಂಚಿಕೆ ಬಿಕ್ಕಟ್ಟಿನ ಮಧ್ಯೆ ಮತ್ತೊಮ್ಮೆ ನಾನೇ ಎಂದ ಮಹಾ ಸಿಎಂ

- ಕಾಶ್ಮೀರದಲ್ಲಿ 370ನೇ ಕಲಂ ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಈ ಎಲ್ಲಾ ಕ್ರೆಡಿಟ್‌ಗಳನ್ನು ಬಿಜೆಪಿಯೊಂದೇ ಪಡೆದುಕೊಳ್ಳುತ್ತಿದೆ ಅನಿಸುತ್ತಿಲ್ಲವೇ?

ಈ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ನಾವು. ಆದರೆ, ಕ್ರೆಡಿಟ್‌ಗಾಗಿ ನಾವು ಧ್ವನಿ ಎತ್ತಲಿಲ್ಲ. ಇತ್ತೀಚೆಗೆ ನಾವು ಅಯೋಧ್ಯೆಗೆ ತೆರಳಿದ್ದೆವು. ಉತ್ತರ ಪ್ರದೇಶ ಸರ್ಕಾರ ಫೈಜಾಬಾದ್‌ ಪ್ರದೇಶದ ಹೆಸರನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿತು. ರಾಮಮಂದಿರದ ಬಗ್ಗೆ ಸುಪ್ರೀಂಕೋರ್ಟ್‌ ಶೀಘ್ರದಲ್ಲಿ ತನ್ನ ನಿರ್ಧಾರ ಪ್ರಕಟಿಸಲಿದೆ. ಮೊದಲೇ ಹೇಳಿದಂತೆ ಕ್ರೆಡಿಟ್‌ಗೋಸ್ಕರ ನಾವು ಈ ಬಗ್ಗೆ ಮಾತನಾಡಿಲ್ಲ.

ಯಾರೋ ಒಬ್ಬರು ಈ ವಿಷಯವನ್ನು ಎತ್ತಿಕೊಳ್ಳಬೇಕು, ಜನರಿಗೆ ಅದರಿಂದ ಒಳ್ಳೆಯದಾಗಬೇಕಷ್ಟೆ. ಲಾಭಕ್ಕೋಸ್ಕರ ಬಿಜೆಪಿ-ಸೇನೆ ಮೈತ್ರಿಯನ್ನೂ ಮಾಡಿಕೊಂಡಿಲ್ಲ. ಲಾಭಕ್ಕಾಗಿ ಮೈತ್ರಿ ಮಾಡಿಕೊಂಡಿದ್ದರೆ ಇಷ್ಟುವರ್ಷಗಳ ಕಾಲ ಮೈತ್ರಿ ಮುಂದುವರೆಯುತ್ತಿರಲಿಲ್ಲ. ಅಲ್ಲದೆ ನಮ್ಮ ಉದ್ದೇಶ ದೇಶದ ಅಭಿವೃದ್ಧಿ. ಕಾಂಗ್ರೆಸ್‌ ಅಧಿಕಾರದ ಅವಧಿಗೆ ಹೋಲಿಸಿದರೆ ಈಗ ಅಭಿವೃದ್ಧಿ ದರ ವೇಗವಾಗಿದೆ.

- ಬಾಳಾ ಠಾಕ್ರೆಯವರ ಕಾಲದಲ್ಲಿದ್ದ ಶಿವಸೇನೆಯ ಗ್ರಹಿಕೆ ಈಗ ಬದಲಾಗುತ್ತಿದೆಯೇ?

ನನ್ನ ತಾತ ಯಾವಾಗಲೂ ಜನರಿಗಾಗಿ ದುಡಿಯುತ್ತಿದ್ದರು. ಅವರಿಗೆ ಜನರ ನಾಡಿಮಿಡಿತ ಗೊತ್ತಿತ್ತು. ನಾವು ಜನರಲ್ಲಿಗೇ ಹೋಗಬೇಕು, ಅವರ ಮಾತನ್ನು ಕೇಳಿಸಿಕೊಂಡು ಅವರ ಅಭಿಪ್ರಾಯ ಏನೆಂದು ತಿಳಿದುಕೊಳ್ಳಬೇಕು. ರಾಜಕೀಯ ಪಕ್ಷಗಳು ಜನ್ನಾಭಿಪ್ರಾಯದ ಮಾಧ್ಯಮಗಳು. ನಾವು ಜನರ ಪ್ರತಿಬಿಂಬ. ಗ್ರಹಿಕೆ ಸೈಕಲ್‌ ರೀತಿ ಯಾವಾಗಲೂ ಸುತ್ತುತ್ತಿರುತ್ತದೆ. ಒಮ್ಮೆ ಜನರೊಂದಿಗೆ ಬೆರೆತು ಕೆಲಸ ಮಾಡಲು ಆರಂಭಿಸಿದರೆ ಅವರು ನಿಮ್ಮನ್ನು ಅರ್ಥ ಮಾಡಿಕೊಂಡು ನಿಮ್ಮನ್ನು ಬೆಂಬಲಿಸುತ್ತಾರೆ.

- ಮುಂಬೈ ಮೆಟ್ರೋ ನಿರ್ಮಾಣಕ್ಕಾಗಿ 2700 ಮರಗಳನ್ನು ಕಡಿಯುವ ಮಹಾರಾಷ್ಟ್ರ ಸರ್ಕಾರದ ವಿವಾದಾತ್ಮಕ ನಿರ್ಣಯವನ್ನು ಶಿವಸೇನೆ ಇನ್ನುಮುಂದೆಯೂ ವಿರೋಧಿಸುತ್ತದೆಯೇ?

ಸರ್ಕಾರದ ನಿರ್ಣಯ ಸಾಕಾರಗೊಳ್ಳಲು ನಾವು ಬಿಡುವುದಿಲ್ಲ. ಇದು ಗರ್ವಪಡುವ ಅಥವಾ ವಿಜಯಕ್ಕಾಗಿ ಹಾತೊರೆಯುವ ವಿಷಯ ಅಲ್ಲ. ಇದು ನಮ್ಮ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಇದು ಬಿಜೆಪಿ ಮತ್ತು ಶಿವಸೇನೆ ನಡುವಿನ ವೈಷಮ್ಯ ಅಲ್ಲ. ಇದು ಮುಂಬೈ v/s ಪರಿಸರಕ್ಕೆ ಸಂಬಂಧಿಸಿದ ವಿಷಯ. ಈ ಯೋಜನೆ ಜಾರಿಗೆ ಬಂದರೆ ಆಕ್ಸಿಜನ್‌ ಹಾಟ್‌ಸ್ಪಾಟ್‌ ಇಟ್ಟುಕೊಂಡು ಓಡಾಡಬೇಕಾಗುತ್ತದೆ.

ಆರೇ ಕಾಲೊನಿಯಲ್ಲಿರುವ ಮರಗಳನ್ನು ಉಳಿಸಬೇಕು ಎಂದು ನೀವು ಹೇಳಿದರೆ ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಅರ್ಥವಾಗುತ್ತದೆಯೇ? ಅಭಿವೃದ್ಧಿಯಾಗಲಿ, ಅದರಲ್ಲೇನು ತಪ್ಪು ಎಂದು ಅವರು ಕೇಳುವುದಿಲ್ಲವೇ?

ಅವರಿಗೆ ಅರ್ಥವಾಗದೆ ಇದ್ದಿದ್ದರೆ ನಮ್ಮ ಪಕ್ಷದ ನಾಯಕರ ಜೊತೆಗೆ ಏಕೆ ಹೋರಾಟಕ್ಕೆ ಕೈಜೋಡಿಸುತ್ತಿದ್ದರು? ಮೆಟ್ರೋ ನಮಗೂ ಬೇಕು. ನಾನು ಕೂಡ ಮೆಟ್ರೋದಲ್ಲಿ ಓಡಾಡುತ್ತೇನೆ. ನಮ್ಮ ಪಕ್ಷದ ಜೊತೆ ಸೇರಿಕೊಂಡೇ ಸರ್ಕಾರ ಮೆಟ್ರೋ ಮಸೂದೆ ಪಾಸು ಮಾಡಿದೆ. ಮುಂಬೈನಲ್ಲಿ ಎಂಎಂಆರ್‌ಡಿಎ ಮತ್ತು ಎಂಎಂಆರ್‌ಸಿಎಲ್‌ ಕಂಪನಿಗಳು ಮೆಟ್ರೋ ರೈಲು ನಿರ್ಮಿಸುತ್ತಿವೆ. ಎಂಎಂಆರ್‌ಡಿಎ ಪ್ರತಿಯೊಂದನ್ನೂ ಜನರ ಬಳಿ ಚರ್ಚಿಸಿ ನಿರ್ಧರಿಸುತ್ತಿದೆ. ಆದರೆ, ಎಂಎಂಆರ್‌ಸಿಎಲ್‌ ಪ್ರತಿಯೊಂದನ್ನೂ ಬಲವಂತವಾಗಿ ಮಾಡುತ್ತಿದೆ. ಅದನ್ನು ನಾವು ವಿರೋಧಿಸುತ್ತೇವೆ. ಜನರೂ ವಿರೋಧಿಸುತ್ತಾರೆ. ನಮ್ಮ ಕಾರ್ಯಕರ್ತರು ಜನರಿಗೆ ಧ್ವನಿಯಾಗುತ್ತಾರೆ.

- ಯಾವಾಗಲೂ ಪ್ರತಿಪಕ್ಷದ ರೀತಿಯಲ್ಲೇ ವರ್ತಿಸುವ ಶಿವಸೇನೆ ಈ ಬಾರಿ ಸರ್ಕಾರ ರಚಿಸಲು ಸಿದ್ಧವಾಗಿದೆಯೇ?

ಕಳೆದ 25 ವರ್ಷಗಳಿಂದ ಮುಂಬೈ ಮುನ್ಸಿಪಲ್‌ ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ. ಜನರು ಶಿವಸೇನೆ ಪ್ರತಿಪಕ್ಷವಾಗಿರಲು ಮಾತ್ರ ಅರ್ಹ ಎಂದು ಭಾವಿಸಿದ್ದರೆ ಹಲವು ವರ್ಷಗಳಿಂದ ನಾವು ಗೆಲ್ಲಲು ಹೇಗೆ ಸಾಧ್ಯವಾಗುತ್ತಿತ್ತು?

-ಆದರೆ ಶಿವಸೇನೆ ಮಹಾರಾಷ್ಟ್ರದಲ್ಲಿ ತನ್ನ ಸ್ವಂತ ಬಲದಿಂದ ರಾಜ್ಯ ಸರ್ಕಾರವನ್ನು ರಚಿಸಿದ್ದೇ ಇಲ್ಲವಲ್ಲ.

ಅದು ಹಣೆಬರಹ. ಆದರೆ ರಾಷ್ಟ್ರಮಟದಲ್ಲಿ ಧ್ವನಿ ಎತ್ತುವ ಏಕೈಕ ಪ್ರಾದೇಶಿಕ ಪಕ್ಷ ಶಿವಸೇನೆ.

- ದೇವೇಂದ್ರ ಫಡ್ನವೀಸ್‌ ಈ ಹಿಂದೆ ತಾವೇ ಮುಂದಿನ ಮುಖ್ಯಮಂತ್ರಿ, ಆದರೆ ನೀವು (ಆದಿತ್ಯ ಠಾಕ್ರೆ) ಉಪಮುಖ್ಯಮಂತ್ರಿಯಾದರೆ ತೊಂದರೆ ಇಲ್ಲ ಎಂದಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಈ ಬಗ್ಗೆ ಮಾತನಾಡಲು ನಾವು ತುಂಬಾ ಚಿಕ್ಕವನು. ಉದ್ಧವ್‌ಜೀ ಪಕ್ಷದ ಅಧ್ಯಕ್ಷರು, ಫಡ್ನವೀಸ್‌ ಮುಖ್ಯಮಂತ್ರಿ. ಅವರೇ ನಿರ್ಧರಿಸುತ್ತಾರೆ. ಮೈತ್ರಿಯಿಂದ ಹಿಡಿದು ಪಕ್ಷದ ಎಲ್ಲಾ ನಿರ್ಧಾರಗಳನ್ನೂ ಅವರೇ ಕೈಗೊಳ್ಳುತ್ತಾರೆ. ನಾನು ಪಕ್ಷದ ಕಾರ‍್ಯಕರ್ತನಾಗಿ ನನ್ನ ಬಗ್ಗೆಯೇ ಮಾತನಾಡುತ್ತಾ ಹೋದರೆ ಜನರು ನನ್ನನ್ನು ಹುಚ್ಚ ಎನ್ನುತ್ತಾರೆ. ನಾನು ಕುರ್ಚಿಯ ಹಿಂದೆ ಓಡುತ್ತಿಲ್ಲ.

-ಠಾಕ್ರೆ ಕುಟುಂಬದಿಂದ ಮೊಟ್ಟಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಠಾಕ್ರೆಯೆಂದರೆ ನೀವೇ. ಮುಖ್ಯಮಂತ್ರಿಯಾಗುವುದಕ್ಕೆಂದೇ ಸ್ಪರ್ಧಿಸುತ್ತಿದ್ದೀರಿ ಎಂಬ ಮಾತೂ ಇದೆ!

ನಾನು ಚುನಾವಣೆಗೆ ಸ್ಪರ್ಧಿಸಿರುವುದಕ್ಕೆ ಕಾರಣ ನಮ್ಮ ಪಕ್ಷ ನಡೆಸಿದ ಜನಾಶೀರ್ವಾದ ಯಾತ್ರೆಯಲ್ಲಿ ಜನರಿಂದ ದೊರೆತ ಪ್ರತಿಸ್ಪಂದನೆ. ನಂತರ ನಮ್ಮ ಪಕ್ಷದ ಹಿರಿಯರು ನಾನು ವರ್ಲಿಯಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಿದರು. ನಾನು ಜವಾಬ್ದಾರಿಯಿಂದ ದೂರ ಓಡುವವನಲ್ಲ. ನಾನು ಬೆನ್‌ ಸ್ಟೋಕ್ಸ್‌ ರೀತಿಯ ಆಟಗಾರ. ಚೆಂಡು ಹೇಗೆ ಬರುತ್ತದೆಯೋ ಹಾಗೆ ಬ್ಯಾಟಿಂಗ್‌ ಮಾಡುತ್ತೇನೆ. ಅದರಂತೆ, ಪಕ್ಷದ ನಿರ್ಧಾರವನ್ನು ಒಪ್ಪಿಕೊಂಡು ಸ್ಪರ್ಧಿಸುತ್ತಿದ್ದೇನೆ. ಆದರೂ ಇಡೀ ಮಹಾರಾಷ್ಟ್ರ ನನ್ನ ಕರ್ಮಭೂಮಿ.

-ನೀವು ಶಿವಸೇನೆಯ ಇಮೇಜ್‌ ಬದಲಿಸಲು ಯತ್ನಿಸುತ್ತಿದ್ದೀರಿ. ನಿಮ್ಮ ಪಕ್ಷವನ್ನು ದಾಂಧಲೆಕೋರರ ಪಕ್ಷ ಎಂದು ಕೆಲವರು ಟೀಕಿಸುತ್ತಾರೆ. ಅದನ್ನೂ ಬದಲಿಸುತ್ತೀರಾ?

ನನ್ನ ತಾತ ಬಾಳಾಠಾಕ್ರೆಯವರ ಕಾಲದಿಂದಲೂ ನಾವು ಜನರ ಜೊತೆಗೇ ಬೆರೆತು ಬೆಳೆಯುತ್ತಾ ಬಂದಿದ್ದೇವೆ. ಅದೇ ನಮ್ಮ ಪಕ್ಷದ ಶಕ್ತಿ. ನಾನು ನಮ್ಮ ಪಕ್ಷದ ಯುವ ಘಟಕದ ಅಧ್ಯಕ್ಷನಾಗಿದ್ದಾಗ 80 ವರ್ಷದ ತಾತನ ಬಳಿ ಹೋಗಿ ನೀವು ನಮ್ಮ ಘಟಕದ ಹುಡುಗರ ಜೊತೆ ವಿಡಿಯೋ ಸಂವಾದ ನಡೆಸಬೇಕೆಂದು ಕೇಳಿದ್ದೆ. ತಾತ ಎಷ್ಟುಅದ್ಭುತವಾಗಿ ಜೂಲಿಯನ್‌ ಅಸಾಂಜೆಯಿಂದ ಹಿಡಿದು ಯುವಕರ ಮನಸ್ಸಿನೊಳಗೆ ಇಳಿಯುವ ನಾನಾ ಸಂಗತಿಗಳ ಬಗ್ಗೆ ಮಾತನಾಡಿದರು ಗೊತ್ತಾ? ಜನರ ಆಶೋತ್ತರಗಳನ್ನು ನಾವು ಪ್ರತಿಬಿಂಬಿಸುತ್ತೇವೆ ಅಷ್ಟೆ. ಒಂದು ಮೂರ್ತಿಯನ್ನು ಕೆತ್ತುವಾಗ ಉಳಿ, ಸುತ್ತಿಗೆಯನ್ನು ಬಳಸಬೇಕಾಗುತ್ತದೆ. ಮೂರ್ತಿ ಸಿದ್ಧವಾದ ಮೇಲೆ ಮತ್ತೆ ಉಳಿ, ಸುತ್ತಿಗೆಯಿಂದ ಹೊಡೆದರೆ ಒಡೆದುಹೋಗುತ್ತದೆ.

-ಅಂದರೆ ನಿಮ್ಮ ಪಕ್ಷದವರು ಇನ್ನುಮುಂದೆ ರಸ್ತೆಗಿಳಿದು ದಾಂಧಲೆ ನಡೆಸುವುದಿಲ್ಲವೇ?

ಮೂರ್ತಿ ಕೆತ್ತಿದ್ದಾಗಿದೆ. ಮತ್ತೆ ಸುತ್ತಿಗೆಯಿಂದ ಹೊಡೆಯುವುದಿಲ್ಲ. ಶಿವಸೇನೆಯ ಬಗ್ಗೆ ಜನರಿಗೆ ಹಾಗೂ ಮಾಧ್ಯಮಗಳಿಗಿದ್ದ ಕಲ್ಪನೆ ಬದಲಾಗಿದೆ. 2004ರಿಂದ 2014ರವರೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯನ್ನು ಜನರು ದೂರವಿಟ್ಟಿದ್ದರು. ನಂತರ ನಮ್ಮನ್ನು ಸ್ವೀಕರಿಸಿದ್ದಾರೆ. ನಾವು ಹೇಗಿದ್ದೇವೋ ಹಾಗೆಯೇ ಜನರು ನಮ್ಮನ್ನು ಒಪ್ಪಿಕೊಂಡಿದ್ದಾರೆ.

- ಆದಿತ್ಯ ಠಾಕ್ರೆ, ಶಿವಸೇನೆ ಯುವನಾಯಕ 

click me!