ಶ್ರೀನಗರಕ್ಕೆ ಹೊರಟಿದ್ದ 4 ಪಾಕ್ ಉಗ್ರರ ಹತ್ಯೆ ಮಾಡಲಾಗಿದ್ದು, ಗಡಿ ನುಸುಳಿ ಬಂದು ಟ್ರಕ್‌ನಲ್ಲಿ ಕಾಶ್ಮೀರ ರಾಜಧಾನಿಯತ್ತ ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ. ಗುಮಾನಿ ಮೇರೆಗೆ ಟ್ರಕ್ ತಡೆದಾಗ ಚಾಲಕ ಪರಾರಿಯಾಗಿದ್ದು, ಉಗ್ರರು ಪತ್ತೆಯಾಗಿದ್ದಾರೆ. ಈ ಎನ್‌ಕೌಂಟರ್ ವೇಳೆ ಎಲ್ಲ 4 ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅಪಾರ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ.
ಜಮ್ಮು: ಜಮ್ಮು: ಪಾಕಿಸ್ತಾನ (Pakistan) ಕಡೆಯಿಂದ ಗಡಿಯಲ್ಲಿ ನುಸುಳಿದ ನಂತರ ಕಾಶ್ಮೀರದಲ್ಲಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು (Armed Terrorists) ಬುಧವಾರ ಇಲ್ಲಿ ಭದ್ರತಾ ಪಡೆಗಳೊಂದಿಗೆ (Security Forces) ‘ಚಾನ್ಸ್ ಎನ್‌ಕೌಂಟರ್’ನಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಗಣರಾಜ್ಯೋತ್ಸವಕ್ಕೆ (Republic Day) ಮುನ್ನ ಇದೊಂದು ಪ್ರಮುಖ ಯಶಸ್ಸು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ‘ಈ ಗುಂಪು ಗಡಿಯಾಚೆಯಿಂದ ನುಸುಳಿರಬಹುದು. ಎಂ4 ರೈಫಲ್ (M4 Rifle) ಅನ್ನು ಸಾಮಾನ್ಯವಾಗಿ ಜೈಷ್ ಉಗ್ರರು (Jaish Terrorists) ಬಳಸುತ್ತಿದ್ದು, ಅವರು ಉಗ್ರ ಕೃತ್ಯಕ್ಕಾಗಿ ಕಾಶ್ಮೀರಕ್ಕೆ (Kashmir) ಬಂದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಜನವರಿ 26ರ ಸಂದರ್ಭದಲ್ಲಿ ಉಗ್ರರು ದಾಳಿ ಮಾಡಬಹುದು ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ್ದವು. ಇದರ ಫಲವಾಗಿ ಜಾಗೃತ ಸ್ಥಿತಿಯಲ್ಲಿದ್ದ ಪಡೆಗಳ ಉಗ್ರರನ್ನು ಹತ್ಯೆ ಮಾಡಿವೆ ಎಂದಿದ್ದಾರೆ.
ಕಾಶ್ಮೀರದತ್ತ ಸಾಗುತ್ತಿದ್ದ ಟ್ರಕ್‌ನ ಅನುಮಾನಾಸ್ಪದ ಚಲನೆಯನ್ನು ಗಮನಿಸಲಾಯಿತು. ಅದನ್ನು ಹಿಂಬಾಲಿಸಿ ಸಿದ್ರಾ ಚೆಕ್ ಪಾಯಿಂಟ್ ಬಳಿ ನಿಲ್ಲಿಸಲಾಯಿತು. ಆದರೆ ಅದರ ಚಾಲಕ ಪ್ರಕೃತಿಯ ಕರೆಗೆ ಹಾಜರಾಗುವ ನೆಪದಲ್ಲಿ ಪರಾರಿಯಾಗಿದ್ದಾನೆ ಎಂದು ಜಮ್ಮು ಕಾಶ್ಮೀರದ ಎಡಿಜಿಪಿ ಈ ಘಟನೆ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ ಅನುಮಾನ, ಬಾಟ್ಲಾ ಉಗ್ರರ ಪರ ಕಣ್ಣೀರು, ಮೋದಿ ಭಾಷಣಕ್ಕೆ ಕಾಂಗ್ರೆಸ್, ಆಪ್ ಕಂಗಾಲು!
ಉಗ್ರರು ಎಲ್ಲಿಂದ ನುಸುಳಿದ್ದಾರೆ ಎಂಬುದಕ್ಕೆ ತನಿಖೆ ಮುಂದುವರಿದಿದೆ. ಟ್ರಕ್ ಅನ್ನು ಶೋಧಿಸಿದ ನಂತರ ಸ್ಪಷ್ಟ ಚಿತ್ರಣ ಹೊರಬರುತ್ತದೆ, ಪರಾರಿಯಾಗಿರುವ ಟ್ರಕ್ ಚಾಲಕನನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇನ್ನು, ಭದ್ರತಾ ಪಡೆ ಹಾಗೂ ಉಗ್ರರ ನಡುವೆ 45 ನಿಮಿಷಗಳ ಕಾಲ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ಈ ಸಮಯದಲ್ಲಿ ಗ್ರೆನೇಡ್‌ಗಳ ದಾಳಿಯಿಂದ ಉಂಟಾದ ಹಲವಾರು ಸ್ಫೋಟಗಳು ಸಹ ಕೇಳಿಬಂದವು. ಟ್ರಕ್‌ನಿಂದ ಹೊಗೆ ಬೀಸುತ್ತಿದ್ದು, ಹೊಟ್ಟು ತುಂಬಿದ್ದು, ಗುಂಡಿನ ಚಕಮಕಿಯಲ್ಲಿ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಆದರೆ, ಭಯೋತ್ಪಾದಕರ ಗುರುತು ಮತ್ತು ಯಾವ ಉಗ್ರ ಸಂಘಟನೆಯ ಜತೆ ಸಂಬಂಧ ಹೊಂದಿದ್ದಾರೆ ಎಂದು ಸ್ಪಷ್ಟನೆ ಸಿಗಬೇಕಿದೆ'' ಎಂದು ಎಡಿಜಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್: 3 ಎಲ್‌ಇಟಿ ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ
ಆಕಸ್ಮಿಕ ಎನ್‌ಕೌಂಟರ್‌ನಲ್ಲಿ ಉಗ್ರರು ಹತ
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾಯ ಸಿದ್ರಾ ಬೈಪಾಸ್ ಪ್ರದೇಶದ ತವಿ ಸೇತುವೆ ಬಳಿ ದಟ್ಟವಾದ ಮಂಜಿನ ನಡುವೆ ಬೆಳಗ್ಗೆ 7.30ರ ಸುಮಾರಿಗೆ ಟ್ರಕ್ಕೊಂದು ಜಮ್ಮುವಿನಿಂದ ಶ್ರೀನಗರದತ್ತ ಹೊರಟಿತ್ತು. ಟ್ರಕ್‌ನ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ನಂತರ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಟ್ರಕ್ಕನ್ನು ಹಿಂಬಾಲಿಸಿ ಸಿದ್ರಾ ಚೆಕ್ ಪಾಯಿಂಟ್ ಬಳಿ ನಿಲ್ಲಿಸಲಾಯಿತು.
ಆದರೆ, ಅದರ ಚಾಲಕ ಪ್ರಕೃತಿಯ ಕರೆಗೆ ಹಾಜರಾಗುವ ನೆಪದಲ್ಲಿ ಪರಾರಿಯಾದ. ಆಗ ಒಳಗೆ ಅಡಗಿದ್ದ ಉಗ್ರರು ಗುಂಡಿನ ದಾಳಿ ಆರಂಭಿಸಿದರು. 45 ನಿಮಿಷಗಳ ಕಾಲ ಉಭಯ ಪಕ್ಷಗಳ ನಡುವೆ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ನಾಲ್ವರು ಉಗ್ರರು ಹತರಾದರು. ಟ್ರಕ್‌ನಿಂದ ಎಕೆ ಅಸಾಲ್ಟ್ ರೈಫಲ್‌ಗಳು, 1 ಎಂ4 ರೈಫಲ್, 3 ಪಿಸ್ತೂಲು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Army Dog Zoom Passed Away: ಟೆರಿರಿಸ್ಟ್ ಜೊತೆ ಕಾದಾಡಿದ್ದ ಸೇನಾ ಶ್ವಾನ 'ಜೂಮ್' ವಿಧಿವಶ!
ಸೇಡಿಗಾಗಿ ಕಾದಿದ್ದರೇ ಉಗ್ರರು..?
ಈ ನಡುವೆ, ಇತ್ತೀಚೆಗೆ ಜೈಷ್ ಎ ಮೊಹಮ್ಮದ್ ಕಮಾಂಡರ್ ಆಶಿಕ್ ನೆಂಗ್ರೂ ಎಂಬುವನ ಪುಲ್ವಾಮಾದಲ್ಲಿನ ಅತಿಕ್ರಮಿತ ಮನೆಯನ್ನು ಸರ್ಕಾರ ಧ್ವಂಸಗೊಳಿಸಿತ್ತು. ಆತ ಸೇಡು ತೀರಿಸಿಕೊಳ್ಳಲು ಪಾಕ್‌ನಿಂದ ಉಗ್ರರನ್ನು ಕಳಿಸಿರಬಹುದು ಎಂಬ ಗುಮಾನಿಯೂ ಇದೆ.