ನಕಲಿ ಶಿಕ್ಷಕರ ವಿರುದ್ಧ ಬೃಹತ್ ಕಾರ್ಯಾಚರಣೆ.. ಒಟ್ಟು 3035 ಶಿಕ್ಷಕರು ವಜಾ

Published : Jul 09, 2026, 11:33 AM IST
fake teacher

ಸಾರಾಂಶ

ಬಿಹಾರದಲ್ಲಿ ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿ ಶಿಕ್ಷಕರಾಗಿ ನೇಮಕಗೊಂಡಿದ್ದ 3,035 ಮಂದಿಯನ್ನು ಶಿಕ್ಷಣ ಇಲಾಖೆ ಸೇವೆಯಿಂದ ವಜಾಗೊಳಿಸಲು ನಿರ್ಧರಿಸಿದೆ. 2006 ಮತ್ತು 2015ರ ನಡುವೆ ನಡೆದ ಈ ನೇಮಕಾತಿ ಹಗರಣದಲ್ಲಿ, ತಪ್ಪಿತಸ್ಥರಿಂದ ಅವರು ಪಡೆದ ಸಂಪೂರ್ಣ ಸಂಬಳವನ್ನು ಬಡ್ಡಿ ಸಮೇತ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ.

ಪಾಟ್ನಾ: ನಕಲಿ ದಾಖಲೆಗಳನ್ನು ನೀಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವವರಿಗೆ ಬಿಹಾರ ಸರ್ಕಾರ ಶಾಕ್ ನೀಡಿದೆ. ನಕಲಿ ಪದವಿ ಮತ್ತು ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿ ಶಿಕ್ಷಕರಾಗಿ ನೇಮಕಗೊಂಡಿದ್ದ ಬರೋಬ್ಬರಿ 3,035 ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದುವರೆಗೆ ಅವರು ಪಡೆದ ಸಂಬಳವನ್ನು ಬಡ್ಡಿ ಸಮೇತ ವಸೂಲಿ ಮಾಡಲು ಇಲಾಖೆ ಮುಂದಾಗಿದೆ.

ಏನಿದು ಹಗರಣ?

2006 ಮತ್ತು 2015 ರ ನಡುವೆ ಬಿಹಾರದಲ್ಲಿ ನಡೆದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಬ್ಯೂರೋ ಸುದೀರ್ಘ ತನಿಖೆ ನಡೆಸಿತ್ತು. ತನಿಖೆಯ ವೇಳೆ ಸಾವಿರಾರು ಶಿಕ್ಷಕರು ನಕಲಿ

ಕಾಲೇಜುಗಳ ಹೆಸರಲ್ಲಿ ಸರ್ಟಿಫಿಕೇಟ್ ಸೃಷ್ಟಿಸಿರುವುದು ಮತ್ತು ಅಸ್ತಿತ್ವದಲ್ಲೇ ಇಲ್ಲದ ಶೈಕ್ಷಣಿಕ ದಾಖಲೆಗಳನ್ನು ನೀಡಿ ಕೆಲಸ ಪಡೆದಿರುವುದು ಬೆಳಕಿಗೆ ಬಂದಿದೆ.

1,830 ಎಫ್‌ಐಆರ್

ವಿಜಿಲೆನ್ಸ್ ಬ್ಯೂರೋ ನೀಡಿದ ತನಿಖಾ ವರದಿಯ ಆಧಾರದ ಮೇಲೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 1,830 ಎಫ್‌ಐಆರ್‌ಗಳನ್ನು (FIR) ದಾಖಲಿಸಲಾಗಿದ್ದು, ಒಟ್ಟು 3,035 ಶಿಕ್ಷಕರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಶೀಘ್ರದಲ್ಲೇ ಇವರೆಲ್ಲರಿಗೂ ಅಧಿಕೃತವಾಗಿ ವಜಾ ಆದೇಶ ತಲುಪಲಿದೆ.

ನಕಲಿ ಶಿಕ್ಷಕರಿಗೆ ಕೇವಲ ಕೆಲಸ ಕಳೆದುಕೊಳ್ಳುವ ಭೀತಿ ಮಾತ್ರವಲ್ಲ, ಆರ್ಥಿಕವಾಗಿಯೂ ದೊಡ್ಡ ಹೊಡೆತ ಕಾದಿದೆ. ಇವರು ಕೆಲಸಕ್ಕೆ ಸೇರಿದ ದಿನದಿಂದ ಈವರೆಗೆ ಸರ್ಕಾರದಿಂದ ಪಡೆದ ಒಟ್ಟು ಸಂಬಳ ಮತ್ತು ಗೌರವಧನವನ್ನು ಸರ್ಕಾರಕ್ಕೆ ಮರಳಿಸಬೇಕಾಗುತ್ತದೆ. ಇಲಾಖೆಯು ಈ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲು ನಿರ್ಧರಿಸಿದೆ. ಇದು ನಕಲಿ ದಾಖಲೆ ನೀಡಿ ಕೆಲಸ ಪಡೆಯುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮತ್ತು ಹಗರಣ ಬಯಲಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಕೆಲ ಶಿಕ್ಷಕರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಮೊದಲೇ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ಮಾತ್ರಕ್ಕೆ ಇವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೋಸದ ಹಾದಿಯಲ್ಲಿ ಕೆಲಸ ಪಡೆದ ಪ್ರತಿಯೊಬ್ಬರ ವಿರುದ್ಧವೂ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಅರ್ಹ ಶಿಕ್ಷಕರು ಮಾತ್ರ ಮಕ್ಕಳಿಗೆ ಪಾಠ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿ. ಈ ಕಠಿಣ ಕ್ರಮದ ಮೂಲಕ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರ ಸರ್ಕಾರದ ಈ ಬೃಹತ್ ಕಾರ್ಯಾಚರಣೆಯು ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ನಕಲಿ ದಾಖಲೆ ನೀಡಿ ಕೆಲಸ ಪಡೆಯುವ ಜಾಲಕ್ಕೆ ದೊಡ್ಡ ಪೆಟ್ಟು ನೀಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿನ ಮರಾಠಿ ಹೋರಾಟಗಾರರ ಪರ ಮಹಾರಾಷ್ಟ್ರ ಸಿಎಂ ದೊಡ್ಡ ಘೋಷಣೆ! ಸುಪ್ರೀಂಗೆ ಅರ್ಜಿ
India Latest News Live: ನಕಲಿ ಶಿಕ್ಷಕರ ವಿರುದ್ಧ ಬೃಹತ್ ಕಾರ್ಯಾಚರಣೆ.. ಒಟ್ಟು 3035 ಶಿಕ್ಷಕರು ವಜಾ