
ತಿರುವನಂತಪುರ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂ.14ರಂದು ತುರ್ತು ಲ್ಯಾಂಡ್ ಆಗಿರುವ ಬ್ರಿಟನ್ ನೌಕಾಪಡೆಗೆ ಸೇರಿದ ಅತ್ಯಾಧುನಿಕ ಎಫ್-35ಬಿ ಯುದ್ಧವಿಮಾನದ ಪರಿಶೀಲನೆಗೆ ಇದೀಗ ಬ್ರಿಟನ್ ಇದೀಗ ವಿಶೇಷ ತಜ್ಞರನ್ನು ಕಳುಹಿಸಿಕೊಟ್ಟಿದೆ.
14 ತಜ್ಞರು ಹಾಗೂ 10 ಸಿಬ್ಬಂದಿಯನ್ನೊಳಗೊಂಡ ಬ್ರಿಟನ್ ರಾಯಲ್ ಏರ್‌ಫೋರ್ಸ್‌ನ ಏರ್‌ಬಸ್ ಎ400ಎಂ ಅಟ್ಲಾಸ್ ವಿಮಾನ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂದಿಳಿದಿದೆ. ಈ ತಂಡ ಎಫ್-35 ವಿಮಾನದ ಪರಿಶೀಲನೆ ನಡೆಸಲಿದೆ. ಹಾಳಾಗಿರುವ ವಿಮಾನವನ್ನು ಸ್ಥಳೀಯವಾಗಿ ದುರಸ್ತಿಗೊಳಿಸಲು ಸಾಧ್ಯವೇ ಅಥವಾ ಒಂದೊಂದೇ ಭಾಗ ಪ್ರತ್ಯೇಕಗೊಳಿಸಿ ಸರಕು ಸಾಗಣೆ ವಿಮಾನದ ಮೂಲಕ ವಾಪಸ್ ಸಾಗಿಸಬೇಕೇ ಎಂಬ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಸದ್ಯಕ್ಕಂತು ಬ್ರಿಟನ್ ಈ ಎಫ್-35 ವಿಮಾನವನ್ನು ಏರ್‌ಲಿಫ್ಟ್ ಮಾಡುವ ಯೋಜನೆ ಹೊಂದಿಲ್ಲ. ಅದರ ಹೈಡ್ರಾಲಿಕ್ಸ್‌ನಲ್ಲಿ ಸಮಸ್ಯೆ ಇದ್ದು, ಅದನ್ನು ರಿಪೇರಿ ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸುವುದೇ ಮೊದಲ ಆದ್ಯತೆ ಎನ್ನಲಾಗಿದೆ. ಅನಿವಾರ್ಯವಾದರಷ್ಟೇ ಏರ್‌ಲಿಫ್ಟ್ ಮಾಡಲಿದ್ದಾರೆ. ಇದಕ್ಕಾಗಿ ಸಿ-17 ಗ್ಲೋಬ್‌ಮಾಸ್ಟರ್ ವಿಮಾನವನ್ನು ತರಿಸಿಕೊಳ್ಳಬೇಕಾಗುತ್ತದೆ. ಎಫ್-35 ವಿಮಾನ ನಿಲುಗಡೆಗೆ ಏರ್ಪೋರ್ಟಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಕೇರಳ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ನಿಂತಿರುವ ಬ್ರಿಟನ್ ನೌಕಾಪಡೆಯ ಎಫ್-35ಬಿ ಸೇನಾ ವಿಮಾನ
ಕೇರಳ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ನಿಂತಿರುವ ಬ್ರಿಟನ್ ನೌಕಾಪಡೆಯ ಎಫ್-35ಬಿ ಸೇನಾ ವಿಮಾನ
ಇಂಧನ ಖಾಲಿಯಾಗಿರುವ ನೆಪ ನೀಡಿ ಜೂ.14ರಂದು ಕೇರಳದಲ್ಲಿ ನಿಂತ ಈ ವಿಮಾನದಲ್ಲಿ, ಬಳಿಕ ತಾಂತ್ರಿಕ ದೋಷ ಉಂಟಾಗಿರುವುದು ಬಹಿರಂಗವಾಗಿತ್ತು. ಅದನ್ನು ಸರಿಪಡಿಸಲು ಶತಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ.
ಅತ್ತ ಎಫ್-35ಬಿ ಸೇನಾ ವಿಮಾನವಾಗಿರುವ ಕಾರಣ, ಭದ್ರತಾ ದೃಷ್ಟಿಯಿಂದ, ಭಾರತೀಯರಿಂದ ರಿಪೇರಿ ಮಾಡಿಸಿಕೊಳ್ಳಲು ಬ್ರಿಟನ್ ಒಪ್ಪಿಗೆ ನೀಡುತ್ತಿಲ್ಲ. ಈ ಮೊದಲು ಅದನ್ನು ಹ್ಯಾಂಗರ್‌ಗೆ ಒಯ್ಯುವುದಕ್ಕೂ ಇದೇ ಕಾರಣ ನೀಡಿ ನಿರಾಕರಿಸಲಾಗಿತ್ತು. ಹೀಗಾಗಿ ಬ್ರಿಟನ್‌ನಿಂದ ದುರಸ್ತಿಗಾಗಿ ಎಂಜಿನಿಯರ್‌ಗಳನ್ನು ಕಳಿಸಲು ಬ್ರಿಟನ್ ನಿರ್ಧರಿಸಿತ್ತು, ಇದೀಗ ಯಾವುದೇ ಯತ್ನಗಳು ಫಲಿಸದ ಕಾರಣ, ಬೇರೆ ಆಯ್ಕೆ ಇಲ್ಲದೆ ಅದನ್ನು ಬ್ರಿಟನ್‌ನ ಸೇನಾ ಸಾರಿಗೆ ವಿಮಾನ ಬಳಸಿ ಏರ್‌ಲಿಫ್ಟ್ ಮಾಡಲಾಗುವುದು ಎನ್ನಲಾಗಿತ್ತು. ಇಷ್ಟು ದಿನ ತಮ್ಮ ವಿಮಾನಕ್ಕೆ ಆಶ್ರಯ ನೀಡಿದ್ದಕ್ಕಾಗಿ ಪಾರ್ಕಿಂಗ್ ಮತ್ತು ಹ್ಯಾಂಗರ್‌ನ ಬಾಡಿಗೆಯನ್ನೂ ಪಾವತಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ