
ದೆಹಲಿಯಲ್ಲಿರುವ ರೈತ ಹೋರಾಟ ಬೆಂಬಲಿಸಿ 18ರ ಹರೆಯದ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಅಲ್ಲದೇ ಇವರು ಟ್ವಿಟರ್‌ನಲ್ಲಿ ಹಂಚಿಕೊಂಡು ಬಳಿಕ ಡಿಲೀಟ್ ಮಾಡಿದ್ದ ಟೂಲ್‌ಕಿಟ್ ಕೂಡಾ ಭಾರೀ ವಿವಾದ ಸೃಷ್ಟಿಸಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಯುವತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
"
ಬೆಂಗಳೂರಿನ ಪ್ರಸಿದ್ಧ ಮೌಂಟ್ ಕಾರ್ಮೆಲ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ, ಹಾಗೂ ಫ್ರೈಡೇಸ್ ಫಾರ್ ಫ್ಯೂಚರ್‌ನ ಸಹ ಸಂಸ್ಥಾಪಕಿ 21 ವರ್ಷದ ದಿಶಾ ರವಿ ಎಂಬಾಕೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಿಶಾ ವಿರುದ್ಧ ಗ್ರೆಟಾ ಥನ್ಬರ್ಗ್ ಶೇರ್ ಮಾಡಿದ್ದ ಟೂಲ್‌ಕಿಟ್‌ನ್ನು ಎಡಿಟ್ ಮಾಡಿರುವ ಆರೋಪ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ದೇಶದ್ರೋಹಕ್ಕೆ ಕುಮ್ಮಕ್ಕು, ಕ್ರಿಮಿನಲ್ ಸಂಚು ಮೊದಲಾದ ಐಸಿಪಿ ಸೆಕ್ಷನ್‌ನಡಿ ದಿಶಾ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿರುವ ಪಟಿಯಾಲಾ ಹೌಸ್ ಕೋರ್ಟ್ ಈಕೆಯನ್ನು ಐದು ದಿನಗಳವರೆಗೆ ದೆಹಲಿ ಪೊಲೀಸರ ಕಸ್ಟಡಿಗೆ ವಹಿಸಿದೆ.
ಗ್ರೆಟಾ ಹಂಚಿಕೊಂಡಿದ್ದ ಟೂಲ್‌ಕಿಟ್ ಗೂಗಲ್ ಡಾಕ್ಯುಮೆಂಟ್ ಮಾದರಿಯಲ್ಲಿತ್ತು. ಆದರೆ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಎಡಿಟ್ ಮಾಡಲಾಗಿತ್ತು. ಗ್ರೆಟಾ ಹಂಚಿಕೊಂಡ ಈ ಟೂಲ್‌ಕಿಟ್ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ದೆಹಲಿ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಅಲ್ಲದೇ ಗ್ರೆಟಾ ಶೇರ್ ಮಾಡಿದ್ದ ಮೂಲ ದಾಖಲೆಯ ಮಾಹಿತಿ ನೀಡುವಂತೆ ಕೋರಿ ಗೂಗಲ್‌ಗೆ ಪತ್ರವನ್ನೂ ಬರೆದಿದ್ದರು.
ಟೂಲ್‌ಕಿಟ್ ರಚನೆ ಮಾಡಲು ಬಳಸಿದ ಸಾಮಾಜಿಕ ಜಾಲತಾಣಗಳ ಖಾತೆ, URL ನೀಡುವಂತೆಯೂ ಮನವಿ ಮಾಡಿದ್ದರು. ಸದ್ಯ ಗೂಗಲ್ ನೀಡಿದ ಮಾಹಿತಿಯನ್ನು ಆಧರಿಸಿ ದಿಶಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ದಿಶಾ ಮೊಬೈಲ್ ವಶಕ್ಕೆ ಪಡೆಡದಿರುವ ದೆಹಲಿ ಪೊಲೀಸರ ವಿಶೇಷ ತಂಡ ಡೇಟಾ ತನಿಖೆ ನಡೆಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ