76ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ಪ್ರಮುಖ ಸ್ಥಳವಾದ ರಾಜಧಾನಿ ದೆಹಲಿಯಲ್ಲಿ ಉಗ್ರಾತಂಕ ಹೆಚ್ಚಾಗಿದ್ದು, ಡ್ರೋನ್, ಗಾಳಿಪಟ ಬಳಸಿ ಭಯೋತ್ಪಾದಕರು ದುಷ್ಕೃತ್ಯ ನಡೆಸಬಹುದು ಎಂದು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ನವದೆಹಲಿ (ಆ.15): 76ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ಪ್ರಮುಖ ಸ್ಥಳವಾದ ರಾಜಧಾನಿ ದೆಹಲಿಯಲ್ಲಿ ಉಗ್ರಾತಂಕ ಹೆಚ್ಚಾಗಿದ್ದು, ಡ್ರೋನ್, ಗಾಳಿಪಟ ಬಳಸಿ ಭಯೋತ್ಪಾದಕರು ದುಷ್ಕೃತ್ಯ ನಡೆಸಬಹುದು ಎಂದು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಧ್ವಜಾರೋಹಣ ನಡೆಸುವ ಕೆಂಪುಕೋಟೆ ಸೇರಿದಂತೆ ನಗರಾದ್ಯಂತ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ.
ಕೆಂಪುಕೋಟೆಯ ಬಳಿ ನಡೆಯುವ ಕಾರ್ಯಕ್ರಮಕ್ಕೆ 7000 ಜನರನ್ನು ಆಹ್ವಾನಿಸಲಾಗಿದ್ದು, ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಿಗಿ ಭದ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಉಗ್ರರು ಡ್ರೋನ್, ಗಾಳಿಪಟ ಅಥವಾ ಲೋನ್ ವೂಪ್ಫ್ ಅಟ್ಯಾಕ್ (ಒಂಟಿ ಉಗ್ರನಿಂದ ದಾಳಿ) ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೆಂಪುಕೋಟೆಯ 5 ಕಿ.ಮೀ. ಸುತ್ತಲಿನ ಪ್ರದೇಶದಲ್ಲಿ ‘ಗಾಳಿಪಟ ಹಾರಾಟ ನಿಷೇಧಿತ ವಲಯ’ ಎಂದು ಘೋಷಿಸಲಾಗಿದೆ.
ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಪ್ರಧಾನಿ ಮೋದಿ ಸಂತಸ!
ದೆಹಲಿಯಲ್ಲಿ ಸೆಕ್ಷನ್ 144 ನಿಬಂಧನೆ ಜಾರಿಯಲ್ಲಿದ್ದು, ಗಾಳಿಪಟ, ಬಲೂನು, ಚೈನೀಸ್ ದೀಪಗಳ ಬುಟ್ಟಿಗಳನ್ನು ಕೆಂಪುಕೋಟೆ ಸುತ್ತಲಿನ ಪ್ರದೇಶದಲ್ಲಿ ಆ.13ರಿಂದ ಆ.15ರ ವರೆಗೆ ಹಾರಿಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಅಲ್ಲದೇ ಗಾಳಿಪಟ ಅಥವಾ ಯಾವುದೇ ಸಂದೇಹಾತ್ಮಕ ವಸ್ತುಗಳ ಹಾರಾಟ ನಡೆಯದಂತೆ ನಿಗಾ ಇಡಲು 400 ಗಾಳಿಪಟ ಹಿಡಿಯುವವರನ್ನು ನೇಮಿಸಲಾಗಿದೆ.
ಜೊತೆಗೆ ಡ್ರೋನ್ ದಾಳಿ ತಡೆಗೆ ವ್ಯವಸ್ಥೆ ಅಳವಡಿಸಲಾಗಿದೆ. ಪ್ರಮುಖ ಪ್ರದೇಶಗಳಲ್ಲಿ ಫೇಶಿಯಲ್ ರೆಕಗ್ನೇಷನ್ ವ್ಯವಸ್ಥೆಯಿರುವ ಕ್ಯಾಮರಾ ಅಳವಡಿಸಲಾಗಿದ್ದು, 10000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗಣ್ಯರು ಸಾಗಿಬರುವ ಪ್ರದೇಶ ಮತ್ತು ಇತರೆ ಆಯಕಟ್ಟಿನ ಪ್ರದೇಶಗಳಲ್ಲಿ ಸ್ನೈಪರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಕೆಂಪುಕೋಟೆ ಸುತ್ತಲೂ ಹೈ ರೆಸಲ್ಯೂಶನ್ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಗರದಾದ್ಯಂತ ಪೊಲೀಸರ ಗಸ್ತು ಹೆಚ್ಚಿಸಿದ್ದು, ಹೋಟೆಲ್‌ನಲ್ಲಿ ಅತಿಥಿ, ಸೇವಕರು ಹಾಗೂ ಬಾಡಿಗೆದಾರರ ಗುರುತು ಪರಿಶೀಲನಾ ಕಾರ್ಯ ಕೂಡ ನಡೆದಿದೆ.
ಕೆಂಪುಕೋಟೆ ಸುತ್ತಲೂ ಹೈ ರೆಸಲ್ಯೂಶನ್ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 24 ಗಂಟೆಯೂ ಅವುಗಳ ಮೇಲೆ ನಿಗಾ ಇಡಲಾಗುವುದು. ಊಟದ ಡಬ್ಬಿ, ನೀರಿನ ಬಾಟಲಿ, ರಿಮೋಟ್ ಕಂಟ್ರೋಲ್ ನಿಯಂತ್ರಿತ ಕಾರಿನ ಕೀಲಿ, ಸಿಗರೆಟ್ ಲೈಟರ್, ಕೈಚೀಲ, ಕ್ಯಾಮರಾ, ಸೂಟ್‌ಕೇಸ್, ಛತ್ರಿ ಮೊದಲಾದ ವಸ್ತುಗಳನ್ನು ಕೆಂಪುಕೋಟೆಯೊಳಗೆ ಒಯ್ಯಲು ಅನುಮತಿ ನೀಡಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ನಡುವೆ ಸಿಎಂ ಯೋಗಿ ಮೇಲೆ ಬಾಂಬ್ ದಾಳಿ ಬೆದರಿಕೆ!
ದಿಲ್ಲಿಯಲ್ಲಿ ಸೆಕ್ಷನ್ 144: ದೆಹಲಿಯಲ್ಲಿ ಸೆಕ್ಷನ್ 144 ನಿಬಂಧನೆ ಜಾರಿಯಲ್ಲಿದ್ದು, ಗಾಳಿಪಟ, ಬಲೂನು, ಚೈನೀಸ್ ದೀಪಗಳ ಬುಟ್ಟಿಗಳನ್ನು ಕೆಂಪುಕೋಟೆ ಸುತ್ತಲಿನ ಪ್ರದೇಶದಲ್ಲಿ ಆ.13 ರಿಂದ ಆ.15ರ ವರೆಗೆ ಹಾರಿಸುವಂತಿಲ್ಲ. ಪೊಲೀಸರ ಗಸ್ತು ಹೆಚ್ಚಿಸಿದ್ದು, ಹೊಟೇಲ್‌ನಲ್ಲಿ ಅತಿಥಿ, ಸೇವಕರು ಹಾಗೂ ಬಾಡಿಗೆದಾರರ ಗುರುತು ಪರಿಶೀಲನಾ ಕಾರ್ಯ ಕೂಡ ನಡೆದಿದೆ. ಯಾವುದೇ ಸಂಶಯಾಸ್ಪದ ವ್ಯಕ್ತಿ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ರೋಹಿಂಗ್ಯಾಗಳು ನೆಲೆಸಿರುವ ಪ್ರದೇಶದಲ್ಲಿ ವಿಶೇಷ ನಿಗಾ ಇಡಬೇಕೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ಅಲ್ಲಿ ನಿಯೋಜನೆ ಮಾಡಲಾಗಿದೆ.