'ಕೆಂಪುಕೋಟೆ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್': ದೇವರಗುಡ್ಡ ದಸರಾ ಕಾರ್ಣಿಕದ ವಿಶ್ಲೇಷಣೆ ಇಲ್ಲಿದೆ!

Published : Oct 19, 2026, 06:33 PM IST
Haveri Devaragudda malatesha karnika

ಸಾರಾಂಶ

ಹಾವೇರಿ ಜಿಲ್ಲೆಯ ದೇವರಗುಡ್ಡದಲ್ಲಿ ವಿಜಯದಶಮಿ ಅಂಗವಾಗಿ ಮಾಲತೇಶ ದೇವರ ಕಾರ್ಣಿಕೋತ್ಸವ ವಿಜೃಂಭಣೆಯಿಂದ ಜರುಗಿದೆ. 15 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಯ್ಯನವರು ಕೆಂಪುಕೋಟೆಯ ಬಗ್ಗೆ ನಿಗೂಢ ದೈವವಾಣಿ ನುಡಿದಿದ್ದಾರೆ. ಈ ಭವಿಷ್ಯವು ದೇಶದ ರಾಜಕೀಯ ಸ್ಥಿರತೆ ಹಾಗೂ ಕೃಷಿ ಸಮೃದ್ಧಿಯ ಶುಭ ಸೂಚಕವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಹಾವೇರಿ (ಅ.19): ನಾಡಿನ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬದ ಅಂಗವಾಗಿ ಜರುಗುವ ಸುಪ್ರಸಿದ್ಧ ಮಾಲತೇಶ (ಮೈಲಾರಲಿಂಗೇಶ್ವರ) ದೇವರ ಕಾರ್ಣೀಕೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ, ದೇವರಗುಡ್ಡದ ಪವಿತ್ರ 'ಕರಿಯಾಲ್ ಕಟ್ಟಿ'ಯ ಬಳಿ ಈ ವರ್ಷದ ಕಾರ್ಣಿಕ ದೈವವಾಣಿ ಮೊಳಗಿದ್ದು, 'ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್...' ಎಂದು ಭವಿಷ್ಯ ನುಡಿಯಲಾಗಿದೆ.

15 ಅಡಿ ಎತ್ತರದ ಬಿಲ್ಲನ್ನೇರಿ ನುಡಿದ ದೈವವಾಣಿ:

ನವರಾತ್ರಿ ಹಬ್ಬದ ಅಂಗವಾಗಿ ಸತತ 9 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ನಾಗಪ್ಪ ಅಜ್ಜ ಉರ್ಮಿ ಅವರು ಈ ಬಾರಿಯ ಕಾರ್ಣೀಕ ನುಡಿದಿದ್ದಾರೆ. ಸಂಪ್ರದಾಯದಂತೆ ಮೈಲಾರಲಿಂಗೇಶ್ವರನ ಜಯಘೋಷಗಳೊಂದಿಗೆ ದೇವರಗುಡ್ಡದ ಕರಿಯಾಲಕಟ್ಟೆಗೆ ಆಗಮಿಸಿದ ನಾಗಪ್ಪಜ್ಜ, ಸುಮಾರು 15 ಅಡಿ ಎತ್ತರದ ಬಿಲ್ಲನ್ನು ಕ್ಷಣಾರ್ಧದಲ್ಲಿ ಸರಸರನೆ ಏರಿದರು. ಬಿಲ್ಲನ್ನೇರಿ ನಾಲ್ಕೂ ದಿಕ್ಕುಗಳಿಗೆ ಕೈಮುಗಿದು, ಇಡೀ ಜಗತ್ತನ್ನೇ ವೀಕ್ಷಿಸಿದವರಂತೆ ಗಂಭೀರವಾಗಿ ನಿಂತರು. ನಂತರ, 'ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್!' ಎಂದು ದೈವವಾಣಿ ನುಡಿದು ಮೇಲಿಂದ ಕೆಳಕ್ಕೆ ಜಿಗಿದರು. ಕೆಳಗೆ ಕಂಬಳಿ ಹಿಡಿದು ನಿಂತಿದ್ದ ಭಕ್ತರು ಗೊರವಯ್ಯನವರನ್ನು ಭಕ್ತಿಯಿಂದ ಬರಮಾಡಿಕೊಂಡರು.

ಕಾರ್ಣೀಕದ ಒಳಾರ್ಥವೇನು?

ಮಾಲತೇಶ ದೇವರ ಈ ಕಾರ್ಣೀಕದ ನುಡಿಯನ್ನು ಭಕ್ತರು ಮತ್ತು ಜ್ಯೋತಿಷಿಗಳು ಧಾರ್ಮಿಕ ಹಾಗೂ ರಾಜಕೀಯ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಿದ್ದಾರೆ:

ರಾಜಕೀಯ ವಿಶ್ಲೇಷಣೆ: 'ಕೆಂಪುಕೋಟೆ' ಎಂಬುದು ದೆಹಲಿಯ ಅಧಿಕಾರದ ಸಂಕೇತವಾಗಿದೆ. 'ಅದರ ಮೇಲೆ ಮುತ್ತು ಚಲ್ಲಿತು' ಎಂದರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಥವಾ ದೇಶದ ಆಡಳಿತ ಚುಕ್ಕಾಣಿ ಹಿಡಿದವರ ಸ್ಥಾನದಲ್ಲಿ ಉತ್ತಮ, ಸ್ಥಿರ ಹಾಗೂ ಜನಪರವಾದ ನಿರ್ಧಾರಗಳು ಬರಲಿವೆ. ದೇಶದ ನಾಯಕತ್ವ ಮತ್ತಷ್ಟು ಗಟ್ಟಿಯಾಗಲಿದೆ ಎಂಬುದು ರಾಜಕೀಯ ಲೆಕ್ಕಾಚಾರ.

ಕೃಷಿ ಮತ್ತು ಸಮೃದ್ಧಿಯ ಸಂಕೇತ: 'ಮುತ್ತು ಚಲ್ಲಿತು' ಎಂದರೆ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ, ರೈತರ ಹೊಲಗಳಲ್ಲಿ ಮುತ್ತಿನಂತಹ ದವಸ-ಧಾನ್ಯಗಳು ರಾಶಿಯಾಗಲಿವೆ. ದೇಶದಲ್ಲಿ ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿ ನೆಲೆಸಲಿದೆ ಎಂದು ರೈತ ಸಮುದಾಯ ಹರ್ಷ ವ್ಯಕ್ತಪಡಿಸಿದೆ.

ವರ್ಷಕ್ಕೊಮ್ಮೆ ವಿಜಯದಶಮಿಯ ಸಂದರ್ಭದಲ್ಲಿ ನುಡಿಯಲಾಗುವ ದೇವರಗುಡ್ಡದ ಕಾರ್ಣೀಕಕ್ಕೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲೂ ಅಪಾರ ಭಕ್ತರಿದ್ದಾರೆ. ಈ ಬಾರಿಯ ದೈವವಾಣಿಯು ದೇಶಕ್ಕೆ ಹಾಗೂ ನಾಡಿಗೆ ಶುಭ ಸೂಚಕವಾಗಿದೆ ಎಂದು ಭಕ್ತ ಸಮೂಹ ನಂಬಿದೆ.

PREV
Read more Articles on
click me!

Recommended Stories

Farmers Protest: ಸಮಿತಿ ರಚನೆ ಎಂದರೆ ಹೋರಾಟದ ಅವಸಾನ! ರಾಮಕೃಷ್ಣ ಹೆಗಡೆ ಮಾತು ನೆನೆಪಿಸಿ ದಿಂಗಾಲೇಶ್ವರ ಶ್ರೀ ಮಾರ್ಮಿಕ ಮಾತು!
Upsc ಪ್ರಿಲಿಮ್ಸ್ ಕ್ಲಿಯರ್ ಮಾಡಿದ್ದ ಐಎಎಸ್ ಆಕಾಂಕ್ಷಿ ಈಗ ಕರ್ನಾಟಕದ ಶಾಸಕ!