ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಪತ್ತೆ ಮಾಡಿ ಒಂದು ವಾರದೊಳಗಾಗಿ ಕಡಿವಾಣ ಹಾಕಿ| ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ| ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಮರಳು ತಪಾಸಣಾ ಕೇಂದ್ರಗಳನ್ನು ಕ್ರೀಯಾಶೀಲಗೊಳಿಸಬೇಕು| ಕಡ್ಡಾಯವಾಗಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು| ತಪಾಸಣಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚನೆ|
ಹಾವೇರಿ[ನ.7]: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಪತ್ತೆ ಮಾಡಿ ಒಂದು ವಾರದೊಳಗಾಗಿ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಮರಳು ತಪಾಸಣಾ ಕೇಂದ್ರಗಳನ್ನು ಕ್ರೀಯಾಶೀಲಗೊಳಿಸಬೇಕು. ಕಡ್ಡಾಯವಾಗಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ತಪಾಸಣಾ ಕೇಂದ್ರದಲ್ಲಿ ಸಿಸಿ ಕ್ಯಾಮರಾಗಳನ್ನುಅಳವಡಿಸುವಂತೆ ಸೂಚನೆ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲೆಯ ಹಾವೇರಿ ಹಾಗೂ ರಾಣಿಬೆನ್ನೂರು ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಕುರಿತಂತೆ ವ್ಯಾಪಕ ದೂರುಗಳು ಬರುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆಗೆ ಸೂಚಿಸಿದರು. ಕಂಚಾರಗಟ್ಟಿ ಹಾಗೂ ಹರಳಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ಬೋಟ್‌ಗಳು ಕಂಡು ಬಂದಿವೆ. ಈ ವಾಹನಗಳಿಗೆ ಪರವಾನಿಗೆ ಪಡೆದಿವೆಯೇ ಹಾಗೂ ಯಾವ ಉದ್ದೇಶಕ್ಕೆ ಪರವಾನಿಗೆ ಪಡೆಯಲಾಗಿದೆ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಕೃಷಿ ಇತರ ಉದ್ದೇಶಗಳಿಗಾಗಿ ಪರವಾನಿಗೆ ಪಡೆದು ಮರಳು ಸಾಗಾಣಿಕೆ, ಗಣಿಗಾರಿಕೆಗೆ ಅಕ್ರಮವಾಗಿ ಬಳಸಿಕೊಂಡರೆ ಅಂತಹವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಕಳ್ಳಮಾರ್ಗದಲ್ಲಿ ಪರವಾನಿಗೆ ಇಲ್ಲದೆ ನದಿ ಪಾತ್ರದಲ್ಲಿ ಸಣ್ಣ ಸಣ್ಣ ರಸ್ತೆಗಳನ್ನು ಮಾಡಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿವೆ ಎಂಬ ದೂರುಗಳು ಬಂದಿವೆ. ಇಂತಹ ಮಾರ್ಗಗಳನ್ನು ಬಂದ್ ಮಾಡಿ ಅಕ್ರಮವಾಗಿ ಮರಳುಗಾರಿಕೆ ವಾಹನಗಳು ಓಡಾಡುವ ಸ್ಥಳಗಳಲ್ಲಿ ಟ್ರಂಚ್ ಹಾಕಿಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಷ್ಟು ಚೆಕ್ ಪೋಸ್ಟ್‌ಗಳಿವೆ ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ಕವಲಿ ಮಾತನಾಡಿ, ಕಂಚಾಗಟ್ಟಿ, ಶಿಬಾರ, ಗುತ್ತಲ ಹಾಗೂ ಕೊರಡೂರ ಸೇರಿ ನಾಲ್ಕು ಚೆಕ್ ಪೋಸ್ಟ್‌ಗಳಿದ್ದು, ಸದ್ಯ ಗುತ್ತಲ ಚೆಕ್ ಪೋಸ್ಟ್ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಮಾತನಾಡಿ, ಗುತ್ತಲ ಭಾಗದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರತಿ ಮನೆ ಮುಂದೆ ಜೆಸಿಬಿ, ಟ್ರ್ಯಾಕ್ಟರ್, ತೆಪ್ಪಗಳು ನಿಂತಿವೆ. ಇವು ಯಾರಿಗೆ ಸೇರಿದ್ದು ಗ್ರಾಮಸ್ಥರನ್ನು ಕೇಳಿದರೆ ನಂದಲ್ಲ ಎಂದು ಹೇಳುತ್ತಾರೆ. ಗುತ್ತಲದಲ್ಲಿ ನೋಂದಣಿ ಸಂಖ್ಯೆಗಳಿಲ್ಲದ ಹೊಸ ಲಾರಿಗಳು ಬಂದಿವೆ. ಈ ವಾಹನಗಳ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಪಾಸಣೆ ನಡೆಸಿ ಅನಧಿಕೃತ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಮಾತನಾಡಿ, ಅಕ್ರಮ ಮರಳು ಸಾಗಾಣಿಕೆ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಹಾಗೂ ಅನುಮತಿ ಇಲ್ಲದೆ ಸಾಗಾಣಿಕೆ ಮಾಡುತ್ತಿರುವ ಮತ್ತು ನೋಂದಣಿ ಸಂಖ್ಯೆ ಇಲ್ಲದ ವಾಹನಗಳನ್ನು ವಶಕ್ಕೆ ತಗೆದುಕೊಳ್ಳಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಗೆ ತಡೆಗೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಸವಣೂರು ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಜಿ.ಎಸ್.ಶಂಕರ, ರಾಣಿಬೆನ್ನೂರು ಹಾಗೂ ಹಾವೇರಿ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.