ಸತ್ಯ ಹರಿಶ್ಚಂದ್ರರಂತೆ ನಡೆದುಕೊಳ್ಳಲಿ : JDS ಶಾಸಕಗೆ ಎ.ಮಂಜು ಎಚ್ಚರಿಕೆ

By Kannadaprabha NewsFirst Published Nov 6, 2019, 11:43 AM IST
Highlights

ಬಿಜೆಪಿ ಮುಖಂಡ ಎ ಮಂಜು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸತ್ಯಹರಿಶ್ಚಂದ್ರರಂತೆ ನಡೆದುಕೊಳ್ಳಲಿ ಎಂದಿದ್ದಾರೆ. 

ಹಾಸನ [ನ.06]:  ಬೆಂಗಳೂರಿನಲ್ಲಿ ಭೂ ಕಬಳಿಕೆ ವಿರುದ್ಧ ಹೋರಾಟ ಮಾಡಿ ನಾನು ಸತ್ಯಹರಿಶ್ಚಂದ್ರ ಎಂದು ಹೇಳಿಕೊಳ್ಳುವವರು ಹಾಗೇ ನಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಎ.ಮಂಜು ಎಚ್ಚರಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸತ್ಯಹರಿಶ್ಚಂದ್ರ ಅಂತ ಹೇಳಿಕೊಳ್ಳುವವರು ಹಾಗೆಯೇ ನಡೆದುಕೊಳ್ಳಬೇಕು. ಬೆಂಗಳೂರಿನ ಭೂ ಒತ್ತುವರಿ ತೆರವು ವಿರುದ್ಧ ಹೋರಾಟ ಮಾಡುವವರು ತಮ್ಮ ಕುಟುಂಬದ ಭೂ-ಒತ್ತುವರಿ ಬಗ್ಗೆ ಸುಮ್ಮನಿರುವುದು ಏಕೆ ಎಂದು ಪ್ರಶ್ನಿಸಿದರಲ್ಲದೇ, ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ, ನೀವು ತಯಾರಾಗಿದ್ದೀರಾ ಎಂದು ಶಾಸಕ ಎ.ಟಿ. ರಾಮಸ್ವಾಮಿಗೆ ಸವಾಲು ಹಾಕಿದರು.

ಅರಸೀಕಟ್ಟೆಯಮ್ಮ ದೇವಾಲಯದ ಅಭಿವೃದ್ಧಿಗೆ ಭೂಮಿ ಒತ್ತುವರಿ ತೆರವುಗೊಳಿಸಲು ಹೋಗುವ ರಾಮಸ್ವಾಮಿ ಅವರ ಸಹೋದರರ ಮಕ್ಕಳ ಭೂ ಒತ್ತುವರಿ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದರು. ತಮ್ಮ ಪಕ್ಕದ ಜಮೀನಿನ ವಾಸೀಂ ಎಂಬವರಿಗೆ ಖರಾಬ್‌ ಜಾಗವಿದ್ದರೂ ರಸ್ತೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಶಾಸಕ ಎ.ಟಿ. ರಾಮಸ್ವಾಮಿ ತಾಪಂ, ಜಿಪಂ ಅನುದಾನದಲ್ಲಿ ತಮ್ಮ ಮನೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿಸಿ ಕೊಂಡಿದ್ದಾರೆ. ವಾಸೀಂ ಎಂಬವರು ಜಮೀನಿಗೆ ಹೋಗದಂತೆ ಸುತ್ತಲೂ ಬೇಲಿ ಹಾಕಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅರಸೀಕಟ್ಟೆಗ್ರಾಮದ ರೈತನ ಜಮೀನನ್ನು ಸರ್ಕಾರಿ ಅಧಿಕಾರಿಗಳ ಮೂಲಕ ಸ್ವಾಧೀನ ಮಾಡಲು ಮುಂದಾಗಿದ್ದಾರೆ. ಅದರೆ, ತಾಲೂಕಿನಲ್ಲಿ ಅವರೇ ಅತಿ ಹೆಚ್ಚು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಅರಕಲಗೂಡು ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಸರ್ವೇ ನಂ.91,92,93,75,70 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ದೂರಿದರು.

ಮಾತನಾಡುವ ರೀತಿ ಹಾಗೇ ನಡೆದುಕೊಳ್ಳಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರೇವಣ್ಣ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಎ.ಮಂಜು, ಬೇರೆಯವರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಒಂದು ನ್ಯಾಯ, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯಬಾರದು ಎಂದರು.

ಹಾಸನದಲ್ಲಿ ತಮ್ಮ ಮಗ ಗೆಲ್ಲೋದಕ್ಕೆ ಕಾರಣ ಯಾರು ಅಂತಾ ಗೊತ್ತಿದೆ. ಸಿದ್ದರಾಮಯ್ಯನವರ ಕೈಕಾಲು ಹಿಡಿದು ಕರೆದುಕೊಂಡು ಬಂದು ಗೆಲ್ಲಿಸಿಕೊಂಡ್ರು ಈಗ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾರೆ ಎಂದ ಅವರು, ಬಿಜೆಪಿ ಪರ ಜೆಡಿಎಸ್‌ ಸಾಫ್ಟ್‌ ಕಾರ್ನರ್‌ ಆಗಿರೋ ಬಗ್ಗೆ ಪ್ರತಿಕ್ರಿಯಿಸಿದ ಎ.ಮಂಜು, ತಮ್ಮ ಕುಟುಂಬದ ರಾಜಕೀಯ ಲಾಭಕ್ಕಾಗಿ ಅವರು ಯಾವ ತೀರ್ಮಾನ ಬೇಕಾದರೂ ಕೈಗೊಳ್ಳುತ್ತಾರೆಂದು ಟೀಕಿಸಿದರು.

ಅಧಿಕಾರಕ್ಕಾಗಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡ್ರು ಮೈತ್ರಿ ಮುರಿದು ಬಿದ್ದ ಮೇಲೆ ಬಿಜೆಪಿ ಕಡೆ ಬರುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡರು ಚಿಂತಿಸಬೇಕು. ಅಂತಹವರೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಬಾರದು. ಮತ್ತು ಬೆಂಬಲ ಪಡೆಯಬಾರದು ಈ ಬಗ್ಗೆ ಶೀಘ್ರದಲ್ಲಿಯೇ ಸಂಬಂಧಪಟ್ಟವರಿಗೆ ತಿಳಿಸಲಾಗುವುದು ಎಂದರು.

click me!