ಈ ಶಾಕಿಂಗ್ ಘಟನೆ ಥಾಯ್ಲೆಂಡ್‌ನ ಖಾವೂಂನಲ್ಲಿ ನಡೆದಿದೆ. ಇಲ್ಲೊಬ್ಬ ಮೂರು ವರ್ಷದ ಮಗುವಿನ ಕಣ್ಣಿಗೆ ಕಬ್ಬಿಣದ ಮೊಳೆ ಚುಚ್ಚಿಕೊಂಡಿದೆ. ಈ ಘಟನೆಗೆ ತಂದೆಯ ಅಜಾಗರೂಕತೆಯೇ ಕಾರಣ ಎಂಬುವುದೂ ಬಹಿರಂಗವಾಗಿದೆ.
ತಂದೆ ಮನೆ ಹೊರಗಿನ ಗಾರ್ಡನ್‌ನಲ್ಲಿ ಬೆಳೆದಿದ್ದ ಹುಲ್ಲನ್ನು ಮಷೀನ್ ಮೂಲಕ ತೆಗೆಯುವ ಕೆಲಸ ಮಾಡುತ್ತಿದ್ದರು.
ಹೀಗಿರುವಾಗ ಮಗು ಕೂಡಾ ಅಲ್ಲೇ ಪಕ್ಕದಲ್ಲಿ ಆಟವಾಡಿಕೊಂಡಿತ್ತು. ಇನ್ನು ತಂದೆ ಯಾವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದರೋ ಅದರ ಕೆಲ ಭಾಗಗಳು ಶಿಥಿಲಗೊಂಡಿದ್ದವು. ಹೀಗಾಗೇ ಮಷೀನ್ ಬಹಳ ಕಂಪಿಸುತ್ತಿತ್ತು.
ಹೀಗಿರುವಾಗ ಹುಲ್ಲು ತೆಗೆಯುತ್ತಿರುವಾಗಲೇ ಗಾರ್ಡನ್‌ನಲ್ಲಿ ಬಿದ್ದಿದ್ದ ಮೊಳೆ ಮೇಲೆ ಈ ಯಂತ್ರ ಚಲಿಸಿದೆ. ಈ ವೇಳೆ ಯಂತ್ರದ ಒತ್ತಡಕ್ಕೆ ಆ ಮೊಳೆ ನೇರವಾಗಿ ಅಲ್ಲಿದ್ದ ಮಗುವಿನ ಕಣ್ಣಿಗೆ ಚುಚ್ಚಿಕೊಂಡಿದೆ.
ನೋವಿನಿಂದ ಚೀರಾಡಿದ ಮಗನನ್ನು ಕೂಡಲೇ ಆ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರಿಶೀಲನೆ ನಡೆಸಿದ ವೈದ್ಯರು ಮಗುವನ್ನು ಐಸಿಯುಗೆ ಶಿಫ್ಟ್ ಮಾಡಿ, ಆಪರೇಷನ್‌ಗೆ ಸಿದ್ಧತೆ ನಡೆಸಿದ್ದಾರೆ. ಇನ್ನು ಈ ಮೊಳೆ ಮಗುವಿನ ಕಣ್ಣಿನ ಆಳದವರೆಗೂ ಚುಚ್ಚಿಕೊಂಡಿರುವುದು ವೈದ್ಯರಿಗೆ ತಿಳಿದು ಬಂದಿದೆ.
ಬಹಳ ಹೊತ್ತು ನಡೆದ ಸರ್ಜರಿ ಬಳಿಕ ಈ ಮೊಳೆಯನ್ನು ಮಗುವಿನ ಕಣ್ಣಿನಿಂದ ತೆಗೆಯಲಾಗಿದೆ. ಸದ್ಯ ಕಣ್ಣಿನೊಳಗೆ ರಕ್ತ ಹೆಪ್ಪುಗಟ್ಟಿರುವುದರಿಂದ ಮಗುವಿನ ಕಣ್ಣು ಕುರುಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಅತೀ ಶೀಘ್ರದಲ್ಲಿ ಇದನ್ನು ಸರ್ಜರಿ ಮೂಲಕ ತೆಗೆದು ದೃಷ್ಟಿ ಮರಳುವಂತೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.
ವೈದ್ಯರೇ ಈ ಮಗುವಿನ ಫೋಟೋ ಸೆರೆ ಹಿಡಿದಿದ್ದರು. ಮಕ್ಕಳ ತಂದೆ ತಾಯಿಯಲ್ಲಿ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ ಅಅವರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.