ಸಚಿವರೇ, ಪಕ್ಷ ಸಂಘಟನೆಗೆ ಟೈಂ ಕೊಡಿ: ಅಮಿತ್‌ ಶಾ

First Published | Jan 17, 2021, 8:16 AM IST

ಬೆಂಗಳೂರು(ಜ.17): ಎಲ್ಲ ಸಚಿವರೂ ತಮ್ಮ ಇಲಾಖೆಯ ಜವಾಬ್ದಾರಿ ಜೊತೆ ಜೊತೆಗೆ ಪಕ್ಷ ಸಂಘಟನೆಗೂ ಸಮಯ ನೀಡಬೇಕು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಿಯಮಿತವಾಗಿ ಸಿಗುವಂತಾಗಬೇಕು ಎಂದು ಬಿಜೆಪಿ ವರಿಷ್ಠ ನಾಯಕರೂ ಆಗಿರುವ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ.

ಶನಿವಾರ ನಡೆದ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಂಡ ಅವರು ಸಚಿವರ ಕಾರ್ಯವೈಖರಿ ಬಗ್ಗೆ ಪ್ರಸ್ತಾಪಿಸಿ ಹಲವು ಸಲಹೆ​- ಸೂಚನೆಗಳನ್ನು ನೀಡಿದರು ಎಂದು ತಿಳಿದು ಬಂದಿದೆ.
ಸಚಿವರು ತಮ್ಮ ಪ್ರವಾಸದ ವೇಳೆ ಕೇವಲ ಸರ್ಕಾರಿ ಕೆಲಸಗಳಿಗೆ ಮಾತ್ರ ಸೀಮಿತವಾಗಬಾರದು. ಪಕ್ಷದ ಕೆಲಸದ ಕಡೆಗೂ ಗಮನಹರಿಸಬೇಕು. ಪಕ್ಷದ ಕಚೇರಿಗಳಿಗೆ ಭೇಟಿ ನೀಡಬೇಕು. ಜೊತೆಗೆ ಅಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಂವಾದ ನಡೆಸಬೇಕು. ಇದರಿಂದ ಸರ್ಕಾರದ ಆಡಳಿತದ ಬಗ್ಗೆ ಜನಾಭಿಪ್ರಾಯ ದೊರಕುತ್ತದೆ. ಅವುಗಳ ಆಧಾರದ ಮೇಲೆ ಸಚಿವರು ತಮ್ಮ ಕಾರ್ಯ ಶೈಲಿಯನ್ನು ಬದಲಾಯಿಸಿಕೊಳ್ಳಲು ನೆರವಾಗುತ್ತದೆ. ಜೊತೆಗೆ ಜನರು ಸರ್ಕಾರದಿಂದ ಏನು ಬಯಸುತ್ತಿದ್ದಾರೆ ಎಂಬುದೂ ಗೊತ್ತಾಗುತ್ತದೆ ಎಂದು ಹೇಳಿದರು.
Tap to resize

ಸರ್ಕಾರ ಮತ್ತು ಪಕ್ಷದ ನಡುವೆ ಅಂತರ ಏರ್ಪಡಬಾರದು. ಹಾಗಾಗದಂತೆ ಸಚಿವರು ಎಚ್ಚರಿಕೆ ವಹಿಸಬೇಕು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಇದು ತಮ್ಮ ಸರ್ಕಾರ ಎಂಬ ಭಾವನೆ ಗಟ್ಟಿಯಾಗಬೇಕು. ಆ ಮೂಲಕ ಜನರಿಗೆ ಅಗತ್ಯವಾದ ಕೆಲಸಗಳನ್ನು ಮಾಡಲು ಅವರಿಗೆ ನೆರವಾಗಬೇಕು. ಕಾರ್ಯಕರ್ತರಿಂದಲೇ ಪಕ್ಷ ಎಂಬುದನ್ನು ನಾವು ಮರೆಯಬಾರದು ಎಂದು ಅಮಿತ್‌ ಶಾ ಅವರು ತಿಳಿಸಿದರು ಎನ್ನಲಾಗಿದೆ.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವ ಬಗ್ಗೆ ಇದೇ ವೇಳೆ ಅಮಿತ್‌ ಶಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಚುನಾವಣೆ ವೇಳೆ ಮತ್ತು ಬಳಿಕ ಸಚಿವರು ತಂಡಗಳಾಗಿ ಪ್ರವಾಸ ಕೈಗೊಂಡಿದ್ದರ ಬಗ್ಗೆ ಅಮಿತ್‌ ಶಾ ಅವರಿಗೆ ವರದಿಯನ್ನು ನೀಡಲಾಯಿತು. ಈ ವರದಿ ಗಮನಿಸಿದ ಶಾ ಅವರು ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಜೊತೆಗೆ ನಂತರ ಎದುರಾಗಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆಯಲ್ಲೂ ಪಕ್ಷ ಉತ್ತಮ ಸಾಧನೆ ತೋರಬೇಕು ಎಂದು ಅಮಿತ್‌ ಶಾ ಅವರು ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಷ್ಟ್ರೀಯ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಹ್ಲಾದ್‌ ಜೋಶಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಸಚಿವರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ ಮತ್ತಿತರರು ಭಾಗವಹಿಸಿದ್ದರು.

Latest Videos

click me!